ವರದಿಗಾರ (06.12.2017): ಸಂಸದ ಪ್ರತಾಪ ಸಿಂಹ ತಮ್ಮ ನಡವಳಿಕೆಯನ್ನು ಸರಿಮಾಡಿಕೊಳ್ಳಬೇಕು. ಹುಣಸೂರಿನಲ್ಲಿ ಅನಾವಶ್ಯಕವಾಗಿ ನಡೆದ ಗಲಾಟೆಗೆ ಅವರು ಕಾರಣರಾಗಿದ್ದಾರೆ. ಒಬ್ಬ ಸಂಸದರಾಗಿ ಅವರು ಹೀಗೆ ಮಾಡಬಾರದಿತ್ತು. ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಶಾಂತಿಗೆ ಭಂಗ ತರುವುದು ಒಳ್ಳೆಯದಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರತಾಪ್ ಸಿಂಹರಿಗೆ ಸಲಹೆ ನೀಡಿದ್ದಾರೆ.
ಹುಣಸೂರು ಘಟನೆ ಬಗ್ಗೆ ಗೃಹ ಸಚಿವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಏನು ಮಾತನಾಡಬೇಕು ಎನ್ನುವುದನ್ನು ತಿಳಿದುಕೊಳ್ಳಬೇಕು. ಏಕೆಂದರೆ, ಷಾ ಹೇಳಿದಂತೆ ನಾವು ಕೇಳುತ್ತಿದ್ದೇವೆ ಎಂದು ಹುಣಸೂರಿನಲ್ಲಿ ಗಲಾಟೆಗೆ ಕಾರಣವಾದ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಕೂಡ ಆಗಿದೆ. ಹೀಗಾಗಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಷಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಗಲಾಟೆ ನಡೆಸಲು ಪ್ರಚೋದನೆ ನೀಡಬಾರದು ಎಂದಿದ್ದಾರೆ.
ಅಮಿತ್ ಷಾ ಅವರು ರಾಜ್ಯಕ್ಕೆ ಬಾರದಂತೆ ನಿರ್ಬಂಧ ವಿಧಿಸುವ ಪ್ರಸ್ತಾವ ಇಲ್ಲವೆಂದು ಈ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರು ಹೇಳಿದಂತೆ ಅಧಿಕಾರಿಗಳು ಕುಣಿಯುವುದಕ್ಕೆ ಆಗುತ್ತದೆಯೇ? ಎಂದು ಪ್ರಶ್ನಿಸಿದ ಅವರು ಅಲ್ಲಿನ ಎಸ್ಪಿ ಕಾನೂನಿನಂತೆ ಕಾರ್ಯನಿರ್ವಹಿಸಿದ್ದಾರೆ. ಸಂಸದರು ಇಲ್ಲ ಸಲ್ಲದ ಆರೋಪ ಮಾಡಬಾರದು ಎಂದಿದ್ದಾರೆ.
