ವರದಿಗಾರ (06.12.2017) : ಬಾಬರಿ ಮಸ್ಜಿದ್ ಈ ದೇಶದ, ನೆಲದ ಸೊತ್ತು. ಅದು ದೇಶದ ಅಸ್ಮಿತೆಯಾಗಿದೆ. ಅದನ್ನು ಒಡೆಯುವುದು ಈ ದೇಶದ ಪರಂಪರೆಯ ಮೇಲಿನ ಹಲ್ಲೆಯಾಗಿದೆ. ಗಾಂಧಿ, ಬಾಬರಿ ನಂತರ ಇದೀಗ ಅಂಬೇಡ್ಕರ್ ನಿರ್ಮಿತ ಸಂವಿಧಾನವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕ್ನಾಥ್ ಹೇಳಿದ್ದಾರೆ.
ಅವರು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದ.ಕ.ಜಿಲ್ಲಾ ಸಮಿತಿಯ ವತಿಯ ವತಿಯಿಂದ `ಬಾಬರಿ ಮಸ್ಜಿದ್ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷಗಳು’ ಎಂಬ ವಿಷಯದಲ್ಲಿ ಡಿ.5ರಂದು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದ ವಿಚಾರಣ ಸಂಕಿರಣದಲ್ಲಿ ಮಾತನಾಡುತ್ತಿದ್ದರು.
ಬಾಬರಿ ಮಸ್ಜಿದ್ ಒಂದೇ ಕೇವಲ ರಾಷ್ಟ್ರೀಯ ಅವಮಾನವಲ್ಲ. ಗಾಂಧಿ ಕೊಲೆಯಾಗಿ 75 ವರ್ಷಗಳು ಕಳೆದವು, ಡಾ.ಎಂ.ಎಂ.ಕಲಬುರ್ಗಿಯವರ ಹತ್ಯೆ ನಡೆದು 30 ತಿಂಗಳು ಕಳೆಯಿತು, ಗೌರಿ ಲಂಕೇಶ್ ಕೊಲೆಯಾಗಿ 3 ತಿಂಗಳು ಕಳೆದವು. ಇವೆಲ್ಲವೂ ರಾಷ್ಟ್ರೀಯ ಅವಮಾನಗಳೇ ಆಗಿವೆ ಎಂದು ಹೇಳಿದ ಅವರು, ಬಿಜೆಪಿಯ ಸಿದ್ಧಾಂತ ನಿಂತಿರುವುದೇ ಸುಳ್ಳಿನ ಮೇಲೆ. ಅವರ ಸಂಬಂಧವಿರುವುದು ಭಾರತೀಯರೊಂದಿಗಲ್ಲ, ಬದಲಾಗಿ ಗೋಬೆಲ್ಸ್ ಜೊತೆಗಾಗಿದೆ ಎಂದು ಹೇಳಿದರು.
ದೇಶದಲ್ಲಿ ರಥಯಾತ್ರೆಗಳು ನಡೆಯುತ್ತಿದ್ದರೂ ಬಾಬ್ರಿ ಮಸ್ಜಿದ್ ಒಡೆಯುವ ವರದಿ ರಾವ್ ಸರಕಾರಕ್ಕಾಗಲೀ, ಕಾಂಗ್ರೆಸ್ ಸರಕಾರಕ್ಕಾಗಲೀ ತಿಳಿದಿರಲಿಲ್ಲವೇ? ಆಡಳಿತ, ಪೊಲೀಸ್ ವ್ಯವಸ್ಥೆಯು ಬಾಬರಿ ಮಸ್ಜಿದ್ ವಿಚಾರದಲ್ಲಿ ಬಿಜೆಪಿ ಆಕ್ರಣಕಾರಿಯಾಗಿ ಮುಂದುವರಿಯುತ್ತಿದ್ದರೆ, ಕಾಂಗ್ರೆಸ್ ಮೃದು ಧೋರಣೆಯನ್ನು ತಾಳುತ್ತಿದೆ. ಕೆಲದಿನಗಳ ಹಿಂದೆ ಬಾಬಾ ಬುಡನ್ಗಿರಿಯಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ತೋರಿದ ಅಟ್ಟಹಾಸವನ್ನು ಉಲ್ಲೇಖಿಸಿದ ದ್ವಾರಕ್ನಾಥ್ ಅವರು, ಬಿಜೆಪಿ ಸರಕಾರಕ್ಕಿಂತಲೂ ಕೆಟ್ಟ ಪರಿಸ್ಥಿತಿ ಈಗಿನ ಜಾತ್ಯತೀತ ಕಾಂಗ್ರೆಸ್ ಆಡಳಿತದಲ್ಲಿದೆ ಎಂದು ಬೊಟ್ಟು ಮಾಡಿದರು.
ಹಿರಿಯ ಚಿಂತಕ ಜಿ.ರಾಜಶೇಖರ್ ಮಾತನಾಡಿ, ಬಾಬರಿ ಮಸ್ಜಿದ್ ಧ್ವಂಸವು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿದೆ. ಧ್ವಂಸದ ಘಟನೆ ನಡೆದು 25 ವರ್ಷಗಳು ಕಳೆದರೂ ಇಂದಿಗೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಬದಲಾಗಿ ಜಮೀನಿನ ಹಕ್ಕು ಪತ್ರದ ಬಗ್ಗೆ ವಿಚಾರಣೆಯಾಗುತ್ತಿದೆ. ಈ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತೆ ಮತ್ತೆ ಕೊಲೆಗೈಯ್ಯಲಾಗುತ್ತಿದೆ ಎಂದು ಅವರು ಹೇಳಿದರು.
ಈ ದೇಶದ ಕಾನೂನು ಸಂಪೂರ್ಣವಾಗಿ ನೆಲಕಚ್ಚಿದೆ. ಕಾನೂನಿನ ಧ್ವಂಸಕ್ಕೆ ಕಾರಣರಾದವರು ಇಂದು ಆಡಳಿತದಲ್ಲಿ ಮೆರೆಯುತ್ತಿದ್ದಾರೆ. ಬೆಂಕಿ ಕೊಡುವುದು ಇಂದು ಆಳುವವರ ಸಂಸ್ಕøತಿಯಾಗಿ ಬಿಟ್ಟಿದೆ. ಕಾನೂನು ಉಲ್ಲಂಘನೆಗೆ ಬಹಿರಂಗವಾಗಿ ಕರೆ ನೀಡಲಾಗುತ್ತಿದೆ. ರಾಜ್ಯ ಸರಕಾರದ ಕಾನೂನು ಉಲ್ಲಂಘಿಸಲು ಕರೆ ನೀಡುವ ಮಂತ್ರಿ, ಸಂಸದರು ಕೇಂದ್ರ ಸರಕಾರದ ಕಾನೂನು ಪಾಲಿಸಬೇಕೆಂಬುದನ್ನು ನಿರೀಕ್ಷಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ವಿಚಾರ ಸಂಕಿರಣದಲ್ಲಿ ಕೇರಳ ಹೈಕೋರ್ಟ್ನ ಖ್ಯಾತ ನ್ಯಾಯವಾದಿ ರಫೀಕ್ ಕುಟ್ಟಿಕಾಟೂರು, ಪಾಪ್ಯುಲರ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ವಿಚಾರ ಮಂಡಿಸಿದರು.
ಎಸ್ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುನಿವೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಚಾಲಕ ಎಂ.ಶಿವಪ್ಪ ಅಟ್ಟೋಳೆ, ಅಲ್ಹಖ್ ಫೌಂಡೇಶನ್ನ ಅಧ್ಯಕ್ಷ ಇಮ್ತಿಯಾಜ್, ಎಸ್ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕೆ., ಮುಸ್ಲಿಮ್ ವರ್ತತಕ ಸಂಘದ ಜಿಲ್ಲಾಧ್ಯಕ್ಷ ಅಲಿ ಹಸನ್, ಪಾಪ್ಯುಲರ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ನವಾಜ್ ಉಳ್ಳಾಲ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಗೌರವ ಸಲಹೆಗಾರರ ರಫೀಕ್ ಮಾಸ್ಟರ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ನ ದ.ಕ.ಜಿಲ್ಲಾಧ್ಯಕ್ಷ ರಫೀಕ್ ದಾರಿಮಿ, ಕ್ಯಾಂಪಸ್ ಫ್ರಂಟ್ ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ, ಎಸ್ಡಿಪಿಐ ದ.ಕ.ಜಿಲ್ಲಾ ಉಪಾಧ್ಯಕ್ಷ ಆನಂದ ಮಿತ್ತಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ.ಅಥಾವುಲ್ಲಾ ಜೋಕಟ್ಟೆ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಮಂಚಿ ವಂದಿಸಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೊರತಂದ ‘ಬಾಬರಿ ಮಸ್ಜಿದ್: ನಾವು ಮರೆಯದಿರೋಣ’ ಎಂಬ ಕಿರು ಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಡಾ.ಸಿ.ಎಸ್.ದ್ವಾರಕ್ನಾಥ್ ಅವರು ಬಿಡುಗಡೆಗೊಳಿಸಿದರು.
