ವರದಿಗಾರ (5.12.2017): ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಆ ರೀತಿ ಪ್ರಚೋದಿಸುತ್ತಾರೆ ಎಂದರೆ ಏನರ್ಥ? ಪ್ರತಾಪ ಸಿಂಹ ವಿಡಿಯೊ ನಾನು ನೋಡಿದ್ದೇನೆ. ಕಾನೂನು ಸುವ್ಯವಸ್ಥೆ ಹದಗೆಡಿಸಿ ಅಶಾಂತಿ ಸೃಷ್ಠಿಸುವುದೇ ಅವರ ಸಿದ್ಧಾಂತವೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ರವರು ಪ್ರತಾಪ್ ಸಿಂಹ ವೀಡಿಯೋದಲ್ಲಿ ಹೇಳಿಕೊಂಡಿರುವ ‘ಉಗ್ರ ಪ್ರತಿಭಟನೆ ನಡೆಸಲು ಅಮಿತ್ ಶಾ ಹೇಳಿದ್ದಾರೆ’ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡುತ್ತಾ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಲು ಬಿಜೆಪಿ ಮುಂದಾಗಿದೆ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ಅಭಿವೃದ್ಧಿ ವಿಚಾರದಲ್ಲಿ ಮಾತಾಡಲು ವಿಚಾರಗಳಿಲ್ಲ. ಹಾಗಾಗಿ ರಾಜ್ಯದಲ್ಲಿ ಕೋಮುಭಾವನೆ ಕೆರಳಿಸಲು ಅವರು ಯತ್ನಿಸುತ್ತಿದ್ದಾರೆ. ಕೆಲವೇ ವಿಚಾರಗಳನ್ನು ಗುರಿಯಾಗಿಸಿಕೊಂಡು ಬಿಜೆಪಿಗರು ರಸ್ತೆಗಿಳಿದಿದ್ದಾರೆ ಎಂದು ಹೇಳಿದ್ದಾರೆ.
