ವರದಿಗಾರ (05.12.2017) : ಅಮಿತ್ ಶಾ ಕಳೆದ ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಬಿಜೆಪಿಯ ಯುವ ಮೋರ್ಚಾದವರಿಗೆ “ಉಗ್ರ” ಸ್ವರೂಪದ ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸಬೇಕೆಂದು ಕರೆ ಕೊಟ್ಟಿದ್ದಾರೆನ್ನುವ ವೀಡಿಯೋ ನನ್ನದೇ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹರವರು ಒಪ್ಪಿಕೊಂಡಿದ್ದಾರೆ. ಈ ಮೊದಲು ವೀಡಿಯೋವನ್ನು ತಿರುಚಲಾಗಿದೆ, ಇದರಲ್ಲಿ ಮೈಸೂರಿನ ಎಸ್ಪಿ ರವಿ ಡಿ ಚನ್ನಣವರ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದರು.
ಇತ್ತೀಚೆಗೆ ಮೈಸೂರಿನ ಹುಣಸೂರಿನಲ್ಲಿ ಹನುಮ ಜಯಂತಿಯ ನೆಪವಿಟ್ಟುಕೊಂಡು ನಿಷೇದಾಜ್ಞೆಯಿದ್ದರೂ ಪೊಲೀಸ್ ಇಲಾಖೆ ಅನುಮತಿ ನೀಡದ ಪ್ರದೇಶಗಳಲ್ಲಿ ಮೆರವಣಿಗೆ ನಡೆಸಿ ಜನರನ್ನು ಗಲಭೆಗೆ ಪ್ರಚೋದಿಸಲು ಪ್ರಯತ್ನಿಸಿದ್ದ ಸಂಸದ ಪ್ರತಾಪ್ ಸಿಂಹರವರ ನಡೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅದೇ ವೇಳೆ ಪ್ರತಾಪ್ ಸಿಂಹರವರು ಮಾತನಾಡಿದ್ದ ವೀಡಿಯೋ ಒಂದು ಸಾಮಾಜಿಕ ತಾಣದಾದ್ಯಂತ ದೊಡ್ಡ ಸದ್ದು ಮಾಡಿತ್ತು. ಆ ವೀಡಿಯೋದಲ್ಲಿ ಪ್ರತಾಪ್ ಸಿಂಹರವರು, ಕಳೆದ ಬಾರಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಯುವ ಮೋರ್ಚಾದ ಎಲ್ಲಾ ನಾಯಕರೊಂದಿಗೆ ನಡೆಸಿದ್ದ ಸಭೆಯಲ್ಲಿ, ಯುವಕರು ಟಿಯರ್ ಗ್ಯಾಸ್ ಪ್ರಯೋಗಿಸುವಂತಹಾ, ಲಾಠಿ ಚಾರ್ಜ್ ಆಗುವಂತಹಾ “ಉಗ್ರ” ಪ್ರತಿಭಟನೆಗಳನ್ನು ಮಾಡಬೇಕೆಂದು ಕರೆ ನೀಡಿದ್ದರೆಂದು ಹೇಳಿಕೊಂಡಿದ್ದರು. ಹುಣಸೂರಿನ ಘಟನೆಯ ನಂತರ ಈ ವೀಡಿಯೋ ಎಲ್ಲಾ ಕಡೆ ವೈರಲ್ ಆಗಿದ್ದು, ರಾಜ್ಯದಲ್ಲಿ ಗಲಭೆ ನಡೆಸಲು ಅಮಿತ್ ಶಾರವರೇ ಕರೆ ಕೊಟ್ಟಿದ್ದಾರೆಂದು ಎಲ್ಲಾ ಪಕ್ಷಗಳ ನಾಯಕರು ಆರೋಪಿಸಿದ್ದರು.
ವೀಡಿಯ್ಫೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ಸಂಸದ ಪ್ರತಾಪ್ ಸಿಂಹ್, ಆ ವೀಡಿಯೋ ನನ್ನದಲ್ಲ, ಅದನ್ನು ತಿರುಚಲಾಗಿದೆ. ಇದರಲ್ಲಿ ಮೈಸೂರಿನ ಎಸ್ಪಿ ರವಿ ಡಿ ಚನ್ನಣವರ್ ಅವರ ಕೈವಾಡವಿದೆ ಎಂಬ ನಿರಾಧಾರ ಆರೋಪ ಮಾಡಿದ್ದರು. ಈಗ ಖುದ್ದು ಪ್ರತಾಪ್ ಸಿಂಹರವರೇ ಆ ವೀಡಿಯೋ ನನ್ನದೇ ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದು, ಹುಣಸೂರಿನ ಘಟನೆ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಸಣ್ಣ ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಅಮಿತ್ ಶಾರವರನ್ನು ಮೆಚ್ಚಿಸಲು ಮಾತ್ರ ಎನ್ನುವ ರಾಜ್ಯದ ಜನರ ಆರೋಪಗಳಿಗೆ ಇಂಬು ನೀಡಿದಂತಾಗಿದೆ.
