ಮಡಿಕೇರಿ: ಚಿಕ್ಕಮಗಳೂರು ಸಮೀಪದ ಬಾಬಾ ಬುಡಾನ್ ಗಿರಿಯಲ್ಲಿ ಬಜರಂಗದಳ, ವಿಹೆಚ್ ಪಿ ಸೇರಿದಂತೆ ಸಂಘ ಪರಿವಾರ ಕಾರ್ಯಕರ್ತರು ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದೆ.
ದತ್ತಮಾಲೆ ಯಾತ್ರೆಗೂ ಮೊದಲೇ ಬಜರಂಗದಳ ಪ್ರಚೋದನಾಕಾರಿ ಹೇಳಿಕೆಯನ್ನು ನೀಡಿದ್ದರೂ, ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಸೂಕ್ತ ಕ್ರಮ ಕೈಗೊಳ್ಳದೆ ಯಾತ್ರೆ ನಡೆಸಲು ಅವಕಾಶ ನೀಡಿದ ಪರಿಣಾಮ ಅಹಿತಕರ ಘಟನೆ ನಡೆದಿದೆ ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷರಾದ ಅಮೀನ್ ಮೊಹಿಸಿನ್ ಆರೋಪಿಸಿದ್ದಾರೆ.
ಬಜರಂಗದಳದ ದಾಂಧಲೆಯನ್ನು ಕಾನೂನಾತ್ಮಕವಾಗಿ ತಡೆಯುವುದಾಗಿ ಎಸ್ ಡಿಪಿಐ ಪಕ್ಷ ಹೇಳಿಕೆ ನೀಡಿದಾಗ ಸರಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಬಾಬಾ ಬುಡಾನ್ ಗಿರಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡುವುದಿಲ್ಲ ಹಾಗೂ ಎಲ್ಲಾ ರೀತಿಯ ರಕ್ಷಣೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜಾತ್ಯತೀತ ಪಕ್ಷವೆಂದು ಕರೆಯಿಸಿಕೊಳ್ಳುವ ಕಾಂಗ್ರೆಸ್ ನ ಭರವಸೆ ಹುಸಿಯಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರಕಾರ ಬಾಬಾ ಬುಡಾನ್ ಗಿರಿಯಲ್ಲಿ ಯಾವುದೇ ರೀತಿಯ ರಕ್ಷಣೆಯನ್ನು ನೀಡದೆ ಸಂಘಪರಿವಾರದ ದಾಂಧಲೆಯ ಮುಂದೆ ಶರಣಾಗಿದೆ. ಇದರಿಂದ ಸಾಮಾನ್ಯ ಜನರು ಅಹಿಂದ ಸರಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅಮೀನ್ ಮೊಹಿಸಿನ್ ಬಾಬಾ ಬುಡಾನ್ ಗಿರಿಯಲ್ಲಿ ದಾಂಧಲೆ ನಡೆಸಿದವರನ್ನು ಹಾಗೂ ಇದಕ್ಕೆ ಅವಕಾಶ ಮಾಡಿಕೊಟ್ಟ ಪೊಲೀಸರ ವಿರುದ್ಧ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಡಿಪಿಐ ಒತ್ತಾಯಿಸಿದ್ದಾರೆ.
ಘಟನೆಯನ್ನು ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆಗೆ ಪಕ್ಷ ಕರೆ ನೀಡಿದ್ದು, ಜಿಲ್ಲೆಯಲ್ಲೂ ಹೋರಾಟ ನಡೆಸುವುದಾಗಿ ತಿಳಿಸಿದರು
