ವರದಿಗಾರ (05.12.2017): ಬಿಜೆಪಿಯಲ್ಲಿ ಗಾಂಧಿ ತತ್ವದ ಮೂರು ಮಂಗಗಳಂತೆ ಕೆಟ್ಟದ್ದನ್ನು ನೋಡಬಾರದು, ಕೇಳಬಾರದು, ಆಡಬಾರದು ಎಂಬ ಹಲವರಿದ್ದಾರೆ. ಇಂತಹವರು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ಇದನ್ನು ಯಾರು ಒಪ್ಪುವುದಿಲ್ಲವೊ ಅವರು ಪಕ್ಷದಿಂದ ಹೊರ ನಡೆಯಬಹುದು. ಸುಸಂಸ್ಕೃತ ಹೇಡಿಗಳು ಎದ್ದು ಹೋದರೆ ಬೇಸರವಿಲ್ಲ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆಯು ಬಿಜೆಪಿಯಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಬಯಸುವವರಿಗೆ ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಅವರು ಸೋಮವಾರ ಮೈಸೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಹುಣಸೂರಿನಲ್ಲಿ ಸಂಸದ ಪ್ರತಾಪ ಸಿಂಹ ರನ್ನು ಬಂಧಿಸಿದಂತೆ, ಉತ್ತರ ಕನ್ನಡದಲ್ಲಿ ಆಗಿದ್ದರೆ ಇಡೀ ಜಿಲ್ಲೆ ಹೊತ್ತಿ ಉರಿಯುತ್ತಿತ್ತು. ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಆ ಶಕ್ತಿಯಿದೆ. ಇಂತಹ ತಾಕತ್ತು ಮೈಸೂರಿನ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಪ್ರಶ್ನಿಸುತ್ತಾ, ‘ಕಾರ್ಯಕರ್ತರು ಎದ್ದು ನಿಂತರೆ ಪೊಲೀಸರಿಗೆ ಜಾಗ ಇಲ್ಲದಂತೆ ಆಗಬೇಕು. ಇಂತಹ ಶಕ್ತಿಯನ್ನು ನಾಯಕರು ಅವರಲ್ಲಿ ತುಂಬಬೇಕು’ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲ ರಾಜ್ಯ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದು, ಕಾನೂನು ಪಾಲಕರೂ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬಾರದು ಎಂಬ ಬೆದರಿಕೆಯು ಈ ಹೇಳಿಕೆಯಲ್ಲಿದೆ.
ಸಿದ್ದರಾಮಯ್ಯ ಎಂಬ ಪಾಪದ ಪಿಂಡವು ಎಲ್ಲಿ ಹುಟ್ಟಿದೆಯೋ ಅದನ್ನು ಅಲ್ಲಿಯೇ ಮುಗಿಸಬೇಕು. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಯಾರಿಗೂ ಬೇಡವಾಗಿದೆ. ಈ ಪಿಂಡವನ್ನು ಇಲ್ಲಿಂದ ಕಿತ್ತೊಗೆಯದೇ ಇದ್ದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ. ಇದೆಲ್ಲವು ಒಬ್ಬ ಕೇಂದ್ರ ಸಚಿವರ ಅತ್ಯಂತ ಹೀನ ಮಾತುಗಳು.
ಬಿಜೆಪಿ ನಾಯಕರನ್ನು ತುಚ್ಛವಾಗಿ ಬಯ್ಯುವಾಗ ಸಿದ್ದರಾಮಯ್ಯ ಅವರ ಸಂಸ್ಕೃತಿ ಎಲ್ಲಿ ಹೋಗಿತ್ತು? ಕುತಂತ್ರಿಗಳಿಗೆ ಕುತಂತ್ರದಿಂದಲೇ ಬುದ್ಧಿ ಕಲಿಸಬೇಕು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಗೌರವ ಕೊಟ್ಟವರಿಗೆ ಮರಳಿ ಗೌರವ ನೀಡಬೇಕು. ಇಲ್ಲವಾದಲ್ಲಿ ಕೆಟ್ಟ ಮಾತಿನಲ್ಲೇ ಉತ್ತರಿಸಬೇಕು ಎಂಬುವುದಾಗಿಯೂ ಅವರು ಹೇಳಿದ್ದಾರೆ.
