ವರದಿಗಾರ (4.12.2017): ಮೈಸೂರಿನ ಹುಣಸೂರಿನಲ್ಲಿ ನಿನ್ನೆ ನಡೆದಿರುವ ಘಟನೆಗೆ ಜಿಲ್ಲಾಡಳಿತ ಹಾಗೂ ಎಸ್ಪಿ ರವಿ.ಡಿ ಚನ್ನಣ್ಣನವರ್ ಕಾರಣವೆಂದು ಕಾನೂನನ್ನು ಉಲ್ಲಂಘಿಸಿ, ಬ್ಯಾರಿಕೇಡ್ ಮೇಲೆ ಕಾರು ಚಲಾಯಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಘಟನೆಗೆ ಕಾರಣವಾದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೃಹ ಇಲಾಖೆ ಮತ್ತು ಎಸ್ಪಿಯವರು ನನಗೆ ವಿಭಿನ್ನ ಮಾಹಿತಿ ನೀಡಿದ್ದರಿಂದ ಈ ಗೊಂದಲ ಉಂಟಾಗಿದ್ದು, ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಶನಿವಾರದವರೆಗೂ ನೀವು ಹೇಳಿದ ಮಾರ್ಗದಲ್ಲೇ ಮೆರವಣಿಗೆ ನಡೆಸಲು ಅವಕಾಶ ಕಲ್ಪಿಸುವುದಾಗಿ ಹೇಳಿದ್ದ ಎಸ್ಪಿ ಅವರು ನಿನ್ನೆ ಬೆಳಗ್ಗೆ ಮೆರವಣಿಗೆಗೆ ಹೋಗುವ ಸಂದರ್ಭದಲ್ಲಿ ನಮ್ಮನ್ನು ತಡೆದು ಮಾರ್ಗ ಬದಲಾವಣೆ ಮಾಡಿದರಂತೆ. ನಿಷೇದಾಜ್ಞೆ ಜಾರಿಯಲ್ಲಿದ್ದರೂ, ಮೆರವಣಿಗೆಗೆ ತಡೆಯೊಡ್ಡಿದ್ದಾರಂತೆ .
ಎಸ್ ಪಿ ಯವರು ನನಗೆ ವೈಯಕ್ತಿಕವಾಗಿ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡರು. ಹಾಗಾಗಿ ಕಾರು ಚಲಾಯಿಸಿಕೊಂಡು ಹೋದೆ ಎಂದು ತನ್ನ ತಪ್ಪನ್ನು ಸರ್ಮರ್ಥಿಸಿಕೊಂಡಿದ್ದಾರೆ.
ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿಭಾಯಿಸಿದ ಪೊಲೀಸ್ ಅಧಿಕಾರಿ ಬಗ್ಗೆ ಪ್ರತಾಪ್ ಸಿಂಹ ಮಾತನಾಡುತ್ತಾ, ಇದೆಲ್ಲವನ್ನು ರವಿ ಚನ್ನಣ್ಣನವರು ಸರಕಾರದ ಅಣತಿಯಂತೆ ಮಾಡಿ ಸ್ವಾಮಿ ನಿಷ್ಠೆ ತೋರಿದ್ದಾರೆ ಎಂದು ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಪೊಲೀಸರಿಗೆ ಗೌರವ ನೀಡುವುದು ನಮಗೂ ತಿಳಿದಿದೆ. ಆದರೆ ಅವರು ಈ ರೀತಿ ನನ್ನ ವಿರುದ್ಧ ನಡೆದುಕೊಂಡಿದ್ದರಿಂದ ಈ ಘಟನೆ ನಡೆದಿದೆ. ಮುಖ್ಯಮಂತ್ರಿಗಳು ಹಾಗೂ ಪೊಲೀಸರಿಗೆ ಗೌರವ ಕೊಡುವುದನ್ನು ನಾನು ಇವರಿಂದ ಕಲಿಯಬೇಕಿಲ್ಲ. ಮೊದಲು ಸಿಎಂ ಇದನ್ನು ಕಲಿಯಲಿ ಎಂದು ಹೇಳಿದ್ದಾರೆ.
