ವರದಿಗಾರ (2.12.2017): ಮಾಧ್ಯಮಗಳು ಯಾವತ್ತೂ ಪಕ್ಷಾತೀತವಾಗಿರಬೇಕು. ಒಂದು ವೇಳೆ ಯಾರನ್ನಾದರೂ ಓಲೈಕೆ ಮಾಡಲು ಹೋದಾಗ ಯಡವಟ್ಟು ಕಟ್ಟಿಟ್ಟ ಬುತ್ತಿ. ಸುವರ್ಣ ನ್ಯೂಸ್ ಕಥೆಯೂ ಹಾಗೇನೇ ಆಗಿದೆ. ಕರ್ನಾಟಕ ಸರಕಾರದ ನೂತನ ಯೋಜನೆಯಾದ ಬಿ ಎಂ ಟಿ ಸಿ ಸಾರಿಗೆ ನೌಕರರಿಗಾಗಿ ಜಾರಿಗೆ ತಂದಿದ್ದ ‘ಇಂದಿರಾ ಕ್ಲಿನಿಕ್’ನ ಹೊರಗಡೆ ಹಾಕಲಾಗಿದ್ದ ವೇಳಾಪಟ್ಟಿಯ ಫಲಕದಲ್ಲಿ ಯಡವಟ್ಟಾಗಿದೆ ಎಂದು ಯೋಜನೆಯನ್ನು ಜಾರಿಗೆ ತಂದ ಸರಕಾರ ಮತ್ತು ಫಲಕವನ್ನು ತೂಗು ಹಾಕಿದ್ದ ಬಿಬಿಎಂಪಿಗೆ ಮುಜುಗರ ತರಿಸುವಂತೆ ಮಾಡುವ ಸುದ್ದಿಯನ್ನು ತಮ್ಮ ಅಂತರ್ಜಾಲ ಸುದ್ದಿ ತಾಣದ ಪೋಸ್ಟ್ ಒಂದನ್ನು ಫೇಸ್ಬುಕ್ಕಿನಲ್ಲಿ ಹಾಕಿ ನಗೆಪಾಟಲಿಗೀಡಾಗಿದೆ.
ಸುವರ್ಣ ನ್ಯೂಸ್ ವರದಿ:
ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆಯಲಾಗಿದ್ದ ಫಲಕದ ಚಿತ್ರವನ್ನೂ ‘ಸುವರ್ಣ ನ್ಯೂಸ್’ ಪೋಸ್ಟ್ ಮಾಡಿದ್ದು, ಪೋಸ್ಟನ್ನು ನೋಡಿದ ಜಾಲತಾಣಿಗರು ಇದರಲ್ಲಿರುವ ತಪ್ಪೇನೆಂದು ತಿರುಗಿ ಸುವರ್ಣ ನ್ಯೂಸನ್ನು ಪ್ರಶ್ನಿಸಿದ್ದಾರೆ. ಕ್ಲಿನಿಕ್ ವೇಳಾಪಟ್ಟಿ ಬೆಳಗ್ಗೆ 9 ರಿಂದ ಸಂಜೆ 4 ಹಾಗೂ ಭಾನುವಾರ 10 ರಿಂದ ಮದ್ಯಾಹ್ನ 1 ರ ವರೆಗೆ ಎಂದು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆಯಾದರೂ ಸರ್ಕಾರವನ್ನು ಮುಜುಗರಕ್ಕೀಡು ಮಾಡಿ ಯಾರನ್ನೋ ಮೆಚ್ಚಿಸುವ ಭರದಲ್ಲಿ ‘ಸುವರ್ಣ ನ್ಯೂಸ್’ ತಾನೇ ಗುಂಡಿಗೆ ಬಿದ್ದು ಖುದ್ದು ಮುಜುಗರಕ್ಕೀಡಾಗಿದೆ.
ಈ ಕುರಿತು ಜಾಲತಾಣಿಗರು ಸುವರ್ಣ ನ್ಯೂಸನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ರೀತಿಯ ಇನ್ನೊಂದು ಯೋಜನೆಯಾಗಿದ್ದ ‘ಇಂದಿರಾ ಕ್ಯಾಂಟೀನ್’ ಕುರಿತೂ ಕೆಲ ಮಾಧ್ಯಮಗಳು ಆರಂಭದಲ್ಲಿ ನಕಾರಾತ್ಮಕ ಸುದ್ದಿಗಳನ್ನು ಪ್ರಕಟಿಸುತ್ತಿತ್ತು. ಕೆಲವರಂತೂ ಹೊರಗಿನಿಂದ ಜಿರಳೆಗಳನ್ನು ತಂದು ಇಂದಿರಾ ಕ್ಯಾಂಟೀನ್’ನ ಆಹಾರದಲ್ಲಿ ಸಿಕ್ಕಿದ್ದೆಂದು ನಂಬಿಸುವ ಪ್ರಯತ್ನಕ್ಕೂ ಕೈ ಹಾಕಿದ್ದರು. ನಂತರ ಬಿಬಿಸಿ ಸುದ್ದಿವಾಹಿನಿ, ‘ಇಂದಿರಾ ಕ್ಯಾಂಟೀನ್’ ನಲ್ಲಿ ಕಡಿಮೆ ಬೆಲೆಗೆ ಉತ್ಕೃಷ್ಟ ಗುಣಮಟ್ಟದ ಆಹಾರದ ದೊರೆಯುತ್ತದೆಯೆಂದು ಈ ಯೋಜನೆಯ ಕುರಿತು ವರದಿಯನ್ನೂ ಪ್ರಕಟಿಸಿತ್ತು.
