ವರದಿಗಾರ(30-11-2017): ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗುಜರಾತಿನ ಸೋಮನಾಥ ಮಂದಿರಕ್ಕೆ ಭೇಟಿ ನೀಡಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿವಾದ ಸೃಷ್ಟಿಯಾಗಿತ್ತು.
ರಾಹುಲ್ ಗಾಂಧಿ ಮಂದಿರದ ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡಿದ್ದರು. ಆದರೆ, ಅವರ ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಇನ್ನೊಂದು ಚಿತ್ರವೊಂದನ್ನು ಹರಡಿ, ರಾಹುಲ್ ಗಾಂಧಿ ಹಿಂದೂವೇತರರಿಗಿರುವ ಪುಸ್ತಕದಲ್ಲಿ ಸಹಿ ಮಾಡಿದ್ದಾರೆಂದು ಹೇಳ ತೊಡಗಿದರು. ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿಯವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಹುಲ್ ಗಾಂಧಿಯವರ ಧಾರ್ಮಿಕ ಗುರುತಿನ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದರು. ಕೆಲವು ಟಿವಿ ಚಾನೆಲ್ ಗಳು ಈ ಸಹಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವಲ್ಲಿ ನಿರ್ಣಾಯಕವಾಗಬಹುದೆಂದು ಸಂಶಯ ವ್ಯಕ್ತಪಡಿಸಿದವು. ಕಾಂಗ್ರೆಸ್ ನೇತಾರರು ಈ ಬಗ್ಗೆ ಸ್ಪಷ್ಟೀಕರಣ ನೀಡಿದರೂ ವಿರೋಧಿಗಳ ಅಬ್ಬರದ ನಡುವೆ ಕ್ಷೀಣ ಸ್ಪಷ್ಟೀಕರಣವು ಯಾರಿಗೂ ಕೇಳಿಸದಂತಾಯಿತು. ಇದೀಗ ದೇವಾಲಯದ ಆಡಳಿತ ಮಂಡಳಿಯ ಕಾರ್ಯದರ್ಶಿಯು ವಿವಾದಕ್ಕೆ ತೆರೆ ಎಳೆದಿದ್ದಾರೆ. ಕಾರ್ಯದರ್ಶಿ ಪಿ ಕೆ ಲಹೇರಿ ಪ್ರಕಾರ, ರಾಹುಲ್ ಗಾಂಧಿ ಹಿಂದೂಗಳಿಗಿರುವ ಸಂದರ್ಶಕರ ಪುಸ್ತಕದಲ್ಲೇ ಸಹಿ ಮಾಡಿದ್ದಾರೆ, ಇದಕ್ಕೆ ಮಂದಿರದ ಮ್ಯಾನೇಜರ್ ವಿಜಯ್ ಸಿಂಗ್ ಚಾವ್ಡಾ ಸಾಕ್ಷಿಯಾಗಿದ್ದಾರೆ. ಭದ್ರತೆಯ ಕಾರಣಗಳಿಂದಾಗಿ ಹಿಂದುವೇತರರಿಗಾಗಿ ಬೇರೆಯೇ ಪುಸ್ತಕವನ್ನು ಕಳೆದ ಮೂರು ವರ್ಷಗಳಿಂದ ಇಟ್ಟಿದ್ದರೂ ರಾಹುಲ್ ಗಾಂಧಿ ಅದರಲ್ಲಿ ಸಹಿ ಮಾಡಿಲ್ಲ ಎಂದು ಅವರು ಹೇಳಿದರು. ಒಂದು ವೇಳೆ ಅವರ ಜೊತೆ ಬಂದವರಲ್ಲಿ ಯಾರೋ ಸಹಿ ಮಾಡಿರಬೇಕು, ಅದರೆ ಸ್ಪಷ್ಟವಾಗಿ ಹೇಳಲಾಗದು, ಆ ಪುಸ್ತಕ ಸೆಕ್ಯೂರಿಟಿ ಗಾರ್ಡ್ ನ ಬಳಿ ಇರುತ್ತದೆ ಎಂದು ಅವರು ಹೇಳಿದರು.
