ವರದಿಗಾರ (29.11.2017) : ಸುಪ್ರೀಮ್ ಕೋರ್ಟ್ ತೀರ್ಪಿನ ಪ್ರಕಾರ 6 ತಿಂಗಳ ಗೃಹಬಂಧನದಿಂದ ಮುಕ್ತಿ ಪಡೆದು ತನ್ನ ವಿಧ್ಯಾಭ್ಯಾಸಕ್ಕಾಗಿ ತಮಿಳುನಾಡಿಗೆ ಪ್ರಯಾಣಿಸಿರುವ ಹಾದಿಯಾ, ಮಾಧ್ಯಮಗಳ ಮುಂದೆ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದು, ‘ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಗೃಹಬಂಧನದಲ್ಲಿದ್ದಾಗ ಹಿಂದೂ ಧರ್ಮಕ್ಕೆ ಮರು ಮತಾಂತರವಾಗುವಂತೆ ಒತ್ತಾಯಿಸಿ ವಿವಾದಿತ ತ್ರಿಪಣಿತ್ತುರದ ಶಿವಶಕ್ತಿ ಯೋಗ ಕೇಂದ್ರದ ಸದಸ್ಯರು ನನ್ನ ಮೇಲೆ ಚಿತ್ರಹಿಂಸೆ ಮಾಡಿದ್ದರೆಂದು ಹೇಳಿದ್ದಾರೆ.
ಮಾಧ್ಯಮಗಳ ಪ್ರಶ್ನೆಗಳಿಗುತ್ತರಿಸುತ್ತಿದ್ದ ಹಾದಿಯಾ, ‘ಪ್ರತಿದಿನ ನನ್ನನ್ನು ಹಲವರು ಭೇಟಿ ಮಾಡುತ್ತಿದ್ದರು. ಅವರ ಹೆಸರೇನೆಂದು ತಿಳಿದಿಲ್ಲ. ಆದರೆ ಅವರೆಲ್ಲರೂ ‘ಶಿವಶಕ್ತಿ’ ಯೋಗ ಕೇಂದ್ರದಿಂದ ಬರುತ್ತಿದ್ದರು. ಮರಳಿ ಹಿಂದೂ ಧರ್ಮಕ್ಕೆ ಬರುವಂತೆ ಒತ್ತಾಯಿಸಿ ನನಗೆ ಮನೆಯಲ್ಲಿ ಚಿತ್ರಹಿಂಸೆ ನೀಡಲಾಗುತ್ತಿತ್ತು. ನಾನು ಪತ್ರಿಕಾಗೋಷ್ಠಿ ನಡೆಸಿ ಸನಾತನ ಧರ್ಮಕ್ಕೆ ಮರಳಿದ್ದೇನೆಂದು ಹೇಳಿಕೆ ನೀಡಬೇಕೆಂದು ಒತ್ತಡ ತರುತ್ತಿದ್ದರು’ ಎಂಬ ಭಯಾನಕ ಮತ್ತು ಅಷ್ಟೇ ಆಘಾತಕಾರಿಯಾದ ಘಟನೆಗಳನ್ನು ಹಾದಿಯಾ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
‘ಶಿವಶಕ್ತಿ ಯೋಗ ಕೇಂದ್ರ’ವು ಹಿಂದೂ ಧರ್ಮದಿಂದ ಅನ್ಯಧರ್ಮಗಳಿಗೆ ಮತಾಂತರವಾದ ಯುವತಿಯರನ್ನು ಅತಿ ಭಯಾನಕ ಚಿತ್ರಹಿಂಸೆಗಳ ಮೂಲಕ ಮರು ಮತಾಂತರಿಸುವ ಒಂದು ಕೇಂದ್ರವಾಗಿದೆ. ಕೇಂದ್ರದ ಹಲವು ಯುವತಿಯರು ತಪ್ಪಿಸಿಕೊಂಡು ಹೊರಬಂದು ಚಿತ್ರಹಿಂಸೆಯ ಕುರಿತು ದೂರು ದಾಖಲಿಸಿದ ನಂತರ ಆ ಯೋಗ ಕೇಂದ್ರವನ್ನು ಇತ್ತೀಚೆಗೆ ಮುಚ್ಚಲಾಗಿತ್ತು. ಅಲ್ಲಿ ಕೂಡಿ ಹಾಕಲ್ಪಟ್ಟಿದ್ದ 80 ಕ್ಕೂ ಯುವತಿಯರನ್ನು ರಕ್ಷಿಸಲಾಗಿತ್ತು. ಕೆ ಆರ್ ಮನೋಜ್ ಎಂಬಾತ ಇದರ ನಿರ್ದೇಶಕನಾಗಿದ್ದ.
ಹಾದಿಯಾರೊಂದಿಗೆ ತನ್ನ ಗಂಡ ಶಫೀನ್ ಜಹಾನ್ ರನ್ನು ಭೇಟಿ ಮಾಡುವ ಕುರಿತಾಗಿ ಕೇಳಿದಾಗ, ನನಗೆ ಆ ಸ್ವಾತಂತ್ರ್ಯವೂ ಬೇಕಾಗಿದೆ. ಯಾವುದಕ್ಕೂ ನನಗೆ ಎರಡು ದಿನಗಳ ಕಾಲಾವಕಾಶ ನೀಡಬೇಕು. ನಂತರ ನಾನು ಮಾಧ್ಯಮಗಳ ಮುಂದೆ ಬಂದು ವಿವರವಾಗಿ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ.
ಹಾದಿಯಾ ಪರ ಕೇರಳ ವಕೀಲ ಕೆ ಸಿ ನಸೀರ್ ರವರೂ ಕೂಡಾ ಟಿವಿಯೊಂದರ ಚರ್ಚೆಯಲ್ಲಿ, ‘ಸಂಘಪರಿವಾರದ ಶಶಿಕಲಾ ಟೀಚರ್ ಹಾಗೂ ಕುಮ್ಮನಂ ರಾಜಶೇಖರ್, ಯೋಗ ಕೇಂದ್ರದ ಕೆ ಮನೋಜ್ ಹಾಗೂ ಶೃತಿ ಮತ್ತು ರಾಹುಲ್ ಈಶ್ವರ್ ಎನ್ನುವ ಸಾಮಾಜಿಕ ಕಾರ್ಯಕರ್ತ ಸೇರಿದಂತೆ ಹಲವು ವ್ಯಕ್ತಿಗಳು ಹಾದಿಯಾರನ್ನು ಕೌನ್ಸೆಲಿಂಗ್ ಮತ್ತು ಚಿತ್ರಹಿಂಸೆಯ ಮೂಲಕ ಮರಳಿ ಹಿಂದೂ ಧರ್ಮಕ್ಕೆ ತರುವ ಪ್ರಯತ್ನ ಮಾಡಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ಈ ಹಿಂದೆಯೇ ವ್ಯಕ್ತಪಡಿಸಿದ್ದರೆನ್ನುವುದು ಇಲ್ಲಿ ಗಮನಿಸಬೇಕಾಗಿದೆ.
