ವರದಿಗಾರ (29.11.2017): ಬಿಜೆಪಿಯ ಅತೃಪ್ತರ ಬಳಗದ ಪ್ರಮುಖ ಸದಸ್ಯನೆಂದೇ ಬಿಂಬಿತವಾಗಿರುವ ಬಿಜೆಪಿಯ ಯುವ ನಾಯಕ, ಸುಲ್ತಾನ್ ಪುರ ಸಂಸದ ವರುಣ್ ಗಾಂಧಿ ಕಾಂಗ್ರೆಸ್ ಸೇರುವ ಸಾಧ್ಯತೆಯಿದೆ ಎಂದು ಅವರನ್ನು ಬಲ್ಲ ಕೆಲ ಉತ್ತರ ಪ್ರದೇಶದ ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿದ್ದಾರೆಂದು ಮೂಲಗಳು ವರದಿ ಮಾಡಿವೆ.
ಆಗ್ರಾದ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ನಾಯಕ ಹಾಜಿ ಜಮಾಲುದ್ದೀನ್ ಹೇಳಿಕೆಯ ಪ್ರಕಾರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸದ್ಯದಲ್ಲೇ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ. ಆ ಬಳಿಕ ವರುಣ್ ಕಾಂಗ್ರೆಸ್ ಸೇರಬಹುದು.ವರುಣ್ ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಅಥವಾ ಪದಾಧಿಕಾರಿ ಹುದ್ದೆ ಕೊಡಬಹುದು ಎಂದು ಹೇಳಿದ್ದಾರೆ.
ಇದುವರೆಗೂ ವರುಣ್ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ನಡೆಸಿಲ್ಲ. ವರುಣ್ ಗಾಂಧಿ ಕಾಂಗ್ರೆಸ್ ಸೇರ್ಪಡೆಗೆ ಪ್ರಿಯಾಂಕ ನೆರವಾಗಬಹುದು ಎನ್ನಲಾಗಿದೆ. ಆದರೆ ವರುಣ್ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಲಿಲ್ಲ.
ಮೂಲಗಳ ಪ್ರಕಾರ, ಇತ್ತೀಚೆಗಿನಿಂದ ವರುಣ್ ಗಾಂಧಿ ಯಾವುದೇ ಬಿಜೆಪಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಬಿಜೆಪಿ ಹೇಳಿಕೆಗೆ ವ್ಯತಿರಿಕ್ತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಎಲ್ಲಾ ನಡೆಯನ್ನು ಅವಲೋಕಿಸುವಾಗ ವರುಣ್ ಗಾಂಧಿ ಬಿಜೆಪಿಗೆ ಗುಡ್ ಬೈ ಹೇಳುವ ಸೂಚನೆಯಾಗಿದೆ ಎಂದು ಮೂಲಗಳು ಹೇಳಿದೆ.
