ವರದಿಗಾರ (29.11.2017): ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಶು–ತಾಯಂದಿರ ಮರಣ ಪ್ರಮಾಣ ಹೆಚ್ಚಾಗಿದ್ದು, ವೈದ್ಯರೇ ನಿಮ್ಮ ಕಾಲಿಗೆ ಬೀಳುತ್ತೇನೆ, ದಯವಿಟ್ಟು ಶಿಶು–ತಾಯಂದಿರ ಮರಣ ಪ್ರಮಾಣವನ್ನು ತಪ್ಪಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್ ರವರು ವೈದ್ಯರೊಂದಿಗೆ ಮನವಿ ಮಾಡಿಕೊಂಡಿದ್ದು ತನ್ನ ಸರಳತೆಯನ್ನು ತೋರ್ಪಡಿಸಿದ್ದಾರೆ.
ಗುಲ್ಬಾರ್ಗಾದಲ್ಲಿ ಆರೋಗ್ಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭ ವೈದ್ಯರೊಂದಿಗೆ ಸಚಿವರು ಕಳಕಳಿಯಿಂದ ಮನವಿ ಮಾಡಿಕೊಂಡಿದ್ದಾರೆ.
ಯಾವುದೇ ಮಗು ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡು ಕಣ್ಣು ಬಿಡುವಂತೆ ಆಗಬಾರದು. ಹಾಗಾದರೆ ನಾನು ಜೀವನ ಪರ್ಯಂತ ಕಣ್ಣೀರು ಸುರಿಸುತ್ತೇನೆ ಎಂದು ಸಚಿವರು ಭಾವೋದ್ವೇಗದಿಂದ ಹೇಳಿದ್ದಾರೆ.
2017ರ ಏಪ್ರಿಲ್ನಿಂದ ಅಕ್ಟೋಬರ್ವರೆಗೆ ಕಲಬುರ್ಗಿ ಜಿಲ್ಲೆಯೊಂದರಲ್ಲೇ 70 ತಾಯಂದಿರು ಹಾಗೂ 522 ಮಕ್ಕಳು ಮೃತಪಟ್ಟಿವೆ. ಇದಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಚರ್ಚಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಬೆಂಗಳೂರಿನಲ್ಲಿ ಗುಲ್ಬಾರ್ಗಾ ವಿಭಾಗ ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದಿದ್ದಾರೆ.
