ವರದಿಗಾರ (28.11.2017): ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ನೇತ್ರಾವತಿ ನದಿ ದಡದಲ್ಲಿನ ಮಠ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯು ಕಳೆದ ಸುಮಾರು ದಶಕಗಳಿಂದ ಆಸುಪಾಸಿನ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುತ್ತಾ ಬಂದಿದೆ. ಊರಿಗೆ ಹಲವು ಪ್ರತಿಭೆಗಳನ್ನು ನೀಡುತ್ತಾ ಬಂದಿದ್ದು, ಇದೀಗ ಈ ಶಾಲೆಯ ದುಸ್ಥಿತಿ ಹೇಳಿತೀರದಂತಿದೆ. ಯಾಕೆಂದರೆ ಸುಮಾರು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಶಾಲೆಯ ಕಟ್ಟಡವೊಂದನ್ನು ಹೊಸ ಕಟ್ಟಡ ಸ್ಥಾಪನೆಯ ಉದ್ದೇಶದೊಂದಿಗೆ ಕೆಡವಿದ್ದು ಸಂಪೂರ್ಣ ನೆಲಸಮ ಮಾಡಲಾಗಿದೆ.
ಆದರೆ ಕಟ್ಟಡ ಕೆಡವಿ ಸುಮಾರು ತಿಂಗಳುಗಳೇ ಕಳೆದಿದ್ದರೂ ಸಂಬಂದಪಟ್ಟವರು ಹೊಸ ಕಟ್ಟಡ ನಿರ್ಮಾಣ ಕಾರ್ಯವನ್ನು ಇನ್ನೂ ಪ್ರಾರಂಭಿಸಿಲ್ಲ. ಈ ಶಾಲೆಯಲ್ಲಿ 7ನೇ ತರಗತಿಯವರೆಗೆ ಕಲಿಯುವ ಮಕ್ಕಳಿದ್ದು ಇದೀಗ ಕೇವಲ 4 ತರಗತಿ ಕೋಣೆಗಳು ಕಾರ್ಯಚರಿಸುತ್ತಿದ್ದು ಮಕ್ಕಳು ತರಗತಿಯ ಹೊರಾಂಗಣದಲ್ಲಿ ಕುಳಿತುಕೊಳ್ಳುವ ಸ್ಥಿತಿ ಉಂಟಾಗಿದೆ. ಇರುವ 4 ತರಗತಿ ಕೋಣೆಗಳು ದುಸ್ಥಿತಿಯಲ್ಲಿದ್ದು ಮಕ್ಕಳಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಗಳಿಲ್ಲ. ಇಕ್ಕಟ್ಟಿನಲ್ಲಿ ನೆಲದಲ್ಲೇ ಕುಳಿತು ಪಾಠ ಕೇಳುವಂತಾಗಿದೆ. ಕಟ್ಟಡ ಕಾಮಗಾರಿಗೆಂದು ಸ್ಥಳೀಯರಿಂದ,ಮಕ್ಕಳ ಪೋಷಕರಿಂದ ತಿಂಗಳುಗಳ ಹಿಂದೆಯೇ ಹಣ ಸಂಗ್ರಹವನ್ನೂ ಮಾಡಿದ್ದು ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಶಾಲೆಯ ಮಕ್ಕಳಿಗೆ ಸರಿಯಾದ ಆಟದ ಮೈದಾನವನ್ನೂ ನೀಡಿಲ್ಲ. ಇರುವ ಸಣ್ಣ ಮೈದಾನದಲ್ಲಿ ಮಣ್ಣು ತುಂಬಿಸಿ ನೀರು ನಿಂತು ಯಾವುದೇ ಪ್ರಯೋಜನಕ್ಕಿಲ್ಲದಂತಾಗಿದೆ. ಸರಿಯಾದ ಶೌಚಾಲಯದ ವ್ಯವಸ್ಥೆಯೂ ಈ ಶಾಲೆಗೆ ಇಲ್ಲದಿರುವುದು ವಿಪರ್ಯಾಸವೇ ಸರಿ.
ಇಲ್ಲಿನ ದುಸ್ಥಿತಿ ಕಂಡು ಸ್ಥಳೀಯರು ತಮ್ಮ ಮಕ್ಕಳನ್ನು ಆಸುಪಾಸಿನ ಖಾಸಗಿ ಶಾಲೆಗೆ ದಾಖಲಾತಿ ಮಾಡುತ್ತಿದ್ದಾರೆ. ಈ ಕಾರಣಗಳಿಂದ ಮುಂದಿನ ಶೈಕ್ಷಣಿಕ ವರ್ಷಗಳಿಂದ ಇಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗುವ ಸಾಧ್ಯತೆ ಹೆಚ್ಚಿದ್ದು , ಸಂಬಂದಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಈ ಶಾಲೆಯನ್ನು ಮುಚ್ಚಬೇಕಾದ ಪರಿಸ್ಥಿತಿ ಎದುರಿಸುವಲ್ಲಿ ಸಂಶಯವಿಲ್ಲ.
ವರದಿ: ಸಫ್ವಾನ್ ಯು.ಪಿ.
ಸಂಚಾಲಕರು, ಯುವ ಘಟಕ, ಆಮ್ ಆದ್ಮಿ ಪಾರ್ಟಿ, ದ.ಕ ಜಿಲ್ಲೆ.
