ವರದಿಗಾರ: ಹಾದಿಯಾ ಮತ್ತು ಶಫಿನ್ ಜಹಾನ್ ವಿವಾಹವನ್ನು ತಿರಸ್ಕೃತಗೊಳಿಸಿದ್ದ ಕೇರಳ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಹಾದಿಯಾ ಪತಿ ಶಫಿನ್ ಜಹಾನ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್ ಇಂದು ಮದ್ಯಾಹ್ನ 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ಗೃಹ ಬಂಧನದಿಂದ ಸ್ವತಂತ್ರಗೊಳಿಸಿದೆ.
ಹಾದಿಯಾರನ್ನು ಸುಪ್ರೀಂ ಕೋರ್ಟ್ ವಿಚಾರಣೆ ಸಂದರ್ಭ, ‘ನಾನು ನನ್ನ ಪತಿ ಶಫಿನ್ ಜಹಾನ್ ಜೊತೆ ಇರಲು ಬಯಸುತ್ತೇನೆ’. ನನ್ನ ನಂಬಿಕೆಯ ಪ್ರಕಾರ ಜೀವನ ನಡೆಸಲು ಬಯಸುತ್ತೇನೆ. 11 ತಿಂಗಳು ನಾನು ಅಕ್ರಮ ಬಂಧನದಲ್ಲಿದ್ದೆ ಮತ್ತು ನಾನು ಉತ್ತಮ ವೈದ್ಯೆಯಾಗಲು ಬಯಸುತ್ತಿದ್ದು, ನನ್ನ ಶಿಕ್ಷಣವನ್ನು ಪತಿಯ ಸಹಾಯದಿಂದ ಮುಂದುವರಿಸಬೇಕಿದೆ. ಕೇರಳ ರಾಜ್ಯ ಸರಕಾರ ನನ್ನ ಶಿಕ್ಷಣದ ಖರ್ಚನ್ನು ಭರಿಸಬೇಕಾಗಿಲ್ಲ ಮತ್ತು ಈ ಖರ್ಚನ್ನು ನನ್ನ ಪತಿ ಭರಿಸುತ್ತಾರೆ. ನನಗೆ ಸ್ವಾತಂತ್ರ್ಯ ಬೇಕೆಂದು ಹಾದಿಯಾ ಹೇಳಿದ್ದಾರೆ.
ಹಾದಿಯಾರ ಹೇಳಿಕೆಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಹಾದಿಯಾರನ್ನು ತಮಿಳುನಾಡಿನ ಸೇಲಂಗೆ ಹೋಮಿಯೊಪತಿ ಅಧ್ಯಯನಕ್ಕಾಗಿ ಕಳುಹಿಸಿಕೊಡುವಂತೆ ಆದೇಶ ನೀಡಿದ್ದು, ಈ ಸಂದರ್ಭ ತನ್ನ ಇಷ್ಟದಂತೆ ಯಾರನ್ನೂ ಭೇಟಿಯಾಗುವ ಸ್ವಾತಂತ್ರ್ಯವನ್ನು ನೀಡಿದೆ. ಮುಂದಿನ ವಿಚಾರಣೆಯನ್ನು 2018ರ ಜನವರಿ 3ನೇ ವಾರಕ್ಕೆ ಮುಂದೂಡಿದೆ.
ಹೋಮಿಯೊಪತಿ ಕಾಲೇಜು ಮುಖ್ಯಸ್ಥರನ್ನು ಹಾದಿಯಾರ ಮಾರ್ಗದರ್ಶಕರಾಗಿ ನ್ಯಾಯಾಲಯ ನೇಮಿಸಿದ್ದು, ಹಾದಿಯಾಗೆ ಮರು ಪ್ರವೇಶ ನೀಡುವ ಜತೆಗೆ ವಸತಿ ಸೌಲಭ್ಯವನ್ನೂ ನೀಡುವಂತೆ ಕಾಲೇಜು ಮತ್ತು ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಿದೆ.
ಹಾದಿಯಾರನ್ನು ತಮಿಳುನಾಡಿನ ಸೇಲಂಗೆ ತಲುಪಿಸಲು ಸೂಕ್ತ ಭದ್ರತೆಯೊಂದಿಗೆ ವ್ಯವಸ್ಥೆ ಮಾಡುವಂತೆ ಕೇರಳ ಪೊಲೀಸರಿಗೆ ನ್ಯಾಯಾಲಯ ಸೂಚನೆಯನ್ನು ನೀಡಿದ್ದು, 11ತಿಂಗಳು ಹಾದಿಯಾಗೆ ಭದ್ರತೆ ಒದಗಿಸುವಂತೆ ತಮಿಳುನಾಡು ಸರಕಾರಕ್ಕೆ ಆದೇಶಿಸಿದೆ.
