ದಮಾಮ್, ನ.26: ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿಅರೇಬಿಯಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ವಾಮಂಜೂರಿನ ಮಹಿಳೆ ವಿಜಯಾ(44) ಇಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತವರಿಗೆ ತಲುಪಿದ್ದಾರೆ. ಅವರನ್ನು ಸಂಕಷ್ಟದಿಂದ ಪಾರುಮಾಡಲು ಇಂಡಿಯನ್ ಸೋಶಿಯಲ್ ಫೋರಮ್ ನಡೆಸಿದ ಕಾರ್ಯವನ್ನು ಕುಟುಂಬಸ್ಥರು ಶ್ಲಾಘಿಸಿದ್ದಾರೆ.
ನಿನ್ನೆ ರಾತ್ರಿ ಸೌದಿ ಪ್ರಾಯೋಜಕನು ದಮಾಮ್ ವಿಮಾನ ನಿಲ್ದಾಣದ ಎಮಿಗ್ರೇಶನ್ ವರೆಗೂ ಕರೆದುಕೊಂಡು ಬಂದಿದ್ದು, ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಿರಲಿಲ್ಲ. ವಿಜಯಾ ಅವರು ತವರಿಗೆ ಮರಳುತ್ತಿರುವ ವಿಚಾರವನ್ನು ಖಚಿತಪಡಿಸಿಕೊಳ್ಳಲು ದಮಾಮ್ ವಿಮಾನ ನಿಲ್ದಾಣದ ಜೆಟ್ ಏರ್ ವೇಸ್ ಚೆಕ್ ಇನ್ ಕೌಂಟರ್ ನ್ನು ಸಂಪರ್ಕಿಸಿದ್ದರು.
ಮಂಗಳೂರಿಗೆ ಬಂದಿಳಿದ ವಿಜಯಾರನ್ನು ಅಥಾವುಲ್ಲಾ ಜೋಕಟ್ಟೆ ನೇತೃತ್ವದ ಎಸ್ ಡಿಪಿಐ ನಿಯೋಗವು ಸ್ವಾಗತಿಸಿತು. ನಿಯೋಗದಲ್ಲಿ ಎಸ್ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಇಸ್ಮಾಯಿಲ್ ಇಂಜಿನಿಯರ್, ನೂರುಲ್ಲಾ ಕುಳಾಯಿ, ನಾಸಿರ್ ಉಳಾಯಿಬೆಟ್ಟು, ವುಮನ್ಸ್ ಇಂಡಿಯಾ ಮೂವ್ ಮೆಂಟ್ ರಾಜ್ಯ ಕಾರ್ಯದರ್ಶಿ ಆಯಿಶಾ ಬಜ್ಪೆ, ಪಾಪ್ಯುಲರ್ ಫ್ರಂಟ್ ಬಜ್ಪೆ ವಲಯಾಧ್ಯಕ್ಷ ಎ.ಕೆ.ಅಶ್ರಫ್ ಉಪಸ್ಥಿತರಿದ್ದರು.
ವಿಜಯಾರವರ ಮಾತುಗಳು
ಘಟನೆಯ ವಿವರ :
ಬಡ ಕುಟುಂಬದ ಆಸರೆಯಾಗಿದ್ದ ವಿಜಯಾರವರು 2015ರಲ್ಲಿ ಸೌದಿಅರೇಬಿಯದ ದಮಾಮ್ ಗೆ ತೆರಳಿದ್ದರು. ಮೊದಲ ಮೂರು ತಿಂಗಳ ಕಾಲ ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದು ಅನಂತರದ ದಿನಗಳಲ್ಲಿ ವಿಜಯಾರವರು ಸರಿಯಾಗಿ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಇದರಂದಾಗಿ ಅನಾರೋಗ್ಯಪೀಡಿತ ಪತಿ ಬಾಲಪ್ಪ ಬಾಲಕೃಷ್ಣ ಮತ್ತು ಮಗ ಜಗಜೀವನ್ ಸಾಕಷ್ಟು ಸಂಕಟ ಮತ್ತು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಇಂಡಿಯನ್ ಸೋಶಿಯಲ್ ಫೋರಮ್ ನ ಗಮನಕ್ಕೂ ತಂದಿದ್ದರು. ಹೀಗಾಗಿ ಪ್ರಕರಣವು ಭಾರತೀಯ ರಾಯಭಾರ ಕಚೇರಿಯಲ್ಲಿ ದಾಖಲಾಗಿ ಅವರ ಬಿಡುಗಡೆಗಾಗಿ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಿಸಿತ್ತು. ವಿಜಯಾರವರು ದಮಾಮ್ -ಮುಂಬೈ – ಮಂಗಳೂರು ಮಾರ್ಗವಾಗಿ ಜೆಟ್ ಏರ್ ವೇಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದಾರೆ.
ವಿಜಯಾ ಪ್ರಕರಣ ಶೀಘ್ರ ಇತ್ಯರ್ಥವಾಗಲು ಸಹಕರಿಸಿದ ಎಸ್ ಡಿಪಿಐ ಮುಖಂಡರಿಗೂ ಮತ್ತು ಮಾಧ್ಯಮ ಪ್ರತಿನಿಧಿಗಳಿಗೂ ಇಂಡಿಯನ್ ಸೋಶಿಯಲ್ ಫೋರಮ್ ಅಭಿನಂದನೆ ಸಲ್ಲಿಸುತ್ತದೆ.
