ವರದಿಗಾರ: ರಾಸಲೀಲೆ ಪ್ರಕರಣದ ಸಿಡಿಯಲ್ಲಿ ಇರುವುದು ನಾನಲ್ಲ ಎಂದು ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ವಾದಿಸಿದ ಹಿನ್ನಲೆಯಲ್ಲಿ ತನಿಖಾ ಸಂಸ್ಥೆ ಆ ಸಿಡಿಯನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಿಕೊಟ್ಟಿದ್ದ ವರದಿಯ ಅಂಶಗಳು ಬಹಿರಂಗವಾಗಿದ್ದು, ನಿತ್ಯಾನಂದನ ರಾಸಲೀಲೆಯ ಸಿಡಿ ಅಸಲಿಯೆಂದು ಹೇಳಿದೆ.
ವಿಡಿಯೊದಲ್ಲಿ ಯುವತಿ ಹಾಗೂ ವ್ಯಕ್ತಿಯೊಬ್ಬರು ರಾಸಲೀಲೆಯಲ್ಲಿ ತೊಡಗಿದ್ದು ದಾಖಲಾಗಿದೆ. ಅದನ್ನು ಪರೀಕ್ಷಿಸಲಾಗಿ, ರಾಸಲೀಲೆಯಲ್ಲಿ ತೊಡಗಿದ್ದ ಆ ವ್ಯಕ್ತಿಯೇ ನಿತ್ಯಾನಂದ ಸ್ವಾಮಿ ಎಂಬುದು ಖಾತ್ರಿಯಾಗಿದೆ. ವಿಡಿಯೊ ತಿರುಚಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನಿತ್ಯಾನಂದ ಸ್ವಾಮಿ ಮತ್ತು ತಮಿಳು ಸಿನಿಮಾ ನಟಿಯೊಬ್ಬರು ಇದ್ದಾರೆ ಎನ್ನಲಾದ ರಾಸಲೀಲೆ ಸಿಡಿಯನ್ನು ನಿತ್ಯಾನಂದನ ಕಾರು ಚಾಲಕ ಜಾನ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ. ಇದಾದ ನಂತರ ನಿತ್ಯಾನಂದ ತಲೆಮರೆಸಿಕೊಂಡಿದ್ದ. ಆತನನ್ನು ಪತ್ತೆಹಚ್ಚಿದ ಕರ್ನಾಟಕ ಪೊಲೀಸರು ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ನನಗೆ ಪುರುಷತ್ವವೇ ಇಲ್ಲ ಎಂದು ನಿತ್ಯಾನಂದ ವಾದಿಸಿದ್ದ. ಆದರೆ ವೈದ್ಯಕೀಯ ತಪಾಸಣೆ ನಂತರ ನಿತ್ಯಾನಂದನಿಗೆ ಪುರುಷತ್ವ ಇರುವುದು ಸಾಬೀತಾಗಿತ್ತು.
2010ರಲ್ಲಿ ಬಹಿರಂಗವಾದ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಐಡಿ ಅಧಿಕಾರಿಗಳು, ಅದೇ ವರ್ಷದ ಮೇ 12ರಂದು ರಾಸಲೀಲೆಯ ಅಸಲಿ ಹಾಗೂ ನಿತ್ಯಾನಂದ ಅವರ ಹಲವು ವಿಡಿಯೊಗಳನ್ನು ಎರಡು ಕವರ್ಗಳಲ್ಲಿ ದೆಹಲಿಯ ಎಫ್ಎಸ್ಎಲ್ ಅಧಿಕಾರಿಗಳಿಗೆ ಕಳುಹಿಸಿದ್ದರು. ಆ ವಿಡಿಯೊಗಳ ಪರೀಕ್ಷೆಯ ವರದಿಯನ್ನು ಎಫ್ಎಸ್ಎಲ್ ಸಹಾಯಕ ನಿರ್ದೇಶಕ ಸಿ.ಪಿ.ಸಿಂಗ್, 2010ರ ಜೂನ್ 2ರಂದು ಅಂದಿನ ಸಿಐಡಿ ಡಿಐಜಿ ಚರಣ್ ರೆಡ್ಡಿ ಅವರಿಗೆ ಕಳುಹಿಸಿದ್ದರು. ಈಗ ಆ ವರದಿಯ ಅಂಶಗಳೇ ಬಹಿರಂಗವಾಗಿವೆ.
ಎರಡು ಪ್ರತ್ಯೇಕ ಕವರ್ಗಳಲ್ಲಿ ಡಿ.ವಿ.ಡಿ ಹಾಗೂ ಮೆಮೊರಿ ಕಾರ್ಡ್ ಇದ್ದವು. ಅವುಗಳಲ್ಲಿ 283 ವಿಡಿಯೊಗಳ ಸಂಗ್ರಹವಿತ್ತು. ಎಲ್ಲ ವಿಡಿಯೊಗಳನ್ನು ಹೊಂದಾಣಿಕೆ ಮಾಡಿ ನೋಡಿ ವರದಿ ಸಿದ್ದಪಡಿಸಿದ್ದೇವೆ. ಜತೆಗೆ ಆ ಕಾರ್ಡ್ನಲ್ಲಿದ್ದ 34 ವಿಡಿಯೊ ತುಣುಕುಗಳು ಅಳಿಸಿದ್ದು ಗೊತ್ತಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ರಾಸಲೀಲೆಯ ಸಿಡಿ ಬಹಿರಂಗವಾದ ಬಳಿಕ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಭಾರೀ ಪ್ರತಿಭಟನೆಗಳು ಹಾಗೂ ಬಿಡದಿ ಆಶ್ರಮಕ್ಕೆ ಮುತ್ತಿಗೆ ಹಾಕಲಾಗಿತ್ತು ಮತ್ತು ರಾಜ್ಯದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.
