ವರದಿಗಾರ : ವಿಶ್ವಹಿಂದೂ ಪರಿಷತ್ ಸಂಘಟನೆಯ ವತಿಯಿಂದ ಉಡುಪಿಯಲ್ಲಿ ಆಯೋಜಿಸಿರುವ ‘ಧರ್ಮ ಸಂಸದ್’ ಕಾರ್ಯಕ್ರಮದ ಭಾಗವಾಗಿ ನಡೆಯುತ್ತಿರುವ “ಹಿಂದೂ ವೈಭವ ಪ್ರದರ್ಶಿನಿ” ಮಳಿಗೆಗಳ ವೀಕ್ಷಣೆಗೆ ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅನುವು ಮಾಡಿಕೊಡುವಂತೆ ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರನ್ನು ಅಧಿಕೃತವಾಗಿ ಕೋರಿದ್ದಾರೆ.
ಈ ಕುರಿತಾಗಿ ಸುತ್ತೋಲೆಯೊಂದು ಹೊರಡಿಸಿರುವ ಉಡುಪಿ ಜಿಲ್ಲಾ ಶಿಕ್ಷಣಾಧಿಕಾರಿಗಳು, ‘ನವಂಬರ್ 24, 25 ಮತ್ತು 26 ರಂದು ನಡೆಯಲಿರುವ ‘ಧರ್ಮ ಸಂಸದ್’ ಕಾರ್ಯಕ್ರಮದ ಅಂಗವಾಗಿ ‘ಧರ್ಮ ದರ್ಶಿನಿ ವೈಭವ’ವನ್ನು ಆಯೋಜಿಸಲಾಗಿದ್ದು, ಅಲ್ಲಿರುವ ಸ್ಟಾಲುಗಳ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಮಕ್ಕಳಿಗೆ ಅನುವು ಮಾಡಿಕೊಡಬೇಕೆಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಸುತ್ತೋಲೆಯನ್ನು ನವಂಬರ್ 15 ರಂದು ಕಳಿಸಲಾಗಿದೆ. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರಿಗೆ ಇದರ ಪ್ರತಿಯನ್ನು ಕಳಿಸಲಾಗಿದೆ.
ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲವಂತೆ !
ಇದರ ಕುರಿತು ‘ವರದಿಗಾರ‘ ತಂಡ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವಂತಹ ಪ್ರಮೋದ್ ಮಧ್ವರಾಜ್’ರವರನ್ನು ಸಂಪರ್ಕಿಸಿದಾಗ ಅವರು, ಈ ಕುರಿತು ನನಗೆ ಮಾಹಿತಿಯೇ ಇಲ್ಲ, ಜಿಲ್ಲಾ ಶಿಕ್ಷಣಾಧಿಕಾರಿಯ ಜೊತೆ ಈ ಕುರಿತು ಮಾತನಾಡಿ ಮಾಹಿತಿ ಪಡೆದು ನಂತರ ಪ್ರತಿಕ್ರಿಯಿಸುತ್ತೇನೆಂದ ಸಚಿವರು ನಂತರ ಪ್ರತಿಕ್ರಿಯೆಗಾಗಿ ಸಂಪರ್ಕಕ್ಕೆ ಸಿಗಲಿಲ್ಲ.
ಶಿಕ್ಷಣಾಧಿಕಾರಿಯ ಸ್ಪಷ್ಟನೆ
ಸುತ್ತೋಲೆ ಕಳುಹಿಸಿರುವ ಕುರಿತು ಉಡುಪಿ ಜಿಲ್ಲಾ ಶಿಕ್ಷಣಾಧಿಕಾರಿ ಶೇಷಶಯನ ಕೆ ಅವರೊಂದಿಗೆ ‘ವರದಿಗಾರ’ ತಂಡ ಮಾಹಿತಿ ಕೇಳಿದಾಗ ಅವರು, ಕಾರ್ಯಕ್ರಮದ ಹಿನ್ನೆಲೆ ತಿಳಿಯದೆ ನಾನು ಸುತ್ತೋಲೆ ಕಳುಹಿಸಿದ್ದು, ಕೂಡಲೇ ಈ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಸಮರ್ಥನೆಗಳೇನೇ ಇದ್ದರೂ, ಒಟ್ಟಿನಲ್ಲಿ ಮುಗ್ಧ ಶಾಲಾ ಮಕ್ಕಳ ಮನಸ್ಸಿನಲ್ಲಿ ಕೋಮುವಾದದ ವಿಷ ಬೀಜ ಬಿತ್ತುವ ಕಾರ್ಯಕ್ರಮಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿಯೇ ಮುತುವರ್ಜಿ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದೆ. ಕೂಡಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಈ ಕುರಿತು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.
