ರಾಷ್ಟ್ರೀಯ ಸುದ್ದಿ

ಬಾಂಬೇ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಂದ ಮೃತ ಲೋಯಾಗೆ 100 ಕೋಟಿಯ ಆಮಿಷವೊಡ್ಡಲಾಗಿತ್ತು : ಲೋಯಾ ಸಹೋದರಿಯ ಸ್ಪೋಟಕ ಹೇಳಿಕೆ !

► ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರ ಸಾವಿನ ಕುರಿತು ನಿಗೂಢತೆ

► ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಮುಖ ಆರೋಪಿಯಾಗಿದ್ದ “ಹೈ ಪ್ರೊಫೈಲ್” ಕೇಸ್

► ಡಿಸೆಂಬರ್ 30ರಂದು ಅಮಿತ್ ಶಾರನ್ನು ದೋಷಮುಕ್ತಗೊಳಿಸಿದ ತೀರ್ಪು, ಮಾಧ್ಯಮಗಳಲ್ಲಿ ಧೋನಿಯ ಟೆಸ್ಟ್ ಕ್ರಿಕೆಟ್ ವಿದಾಯದ ಹಿಂದೆ ಮರೆಯಾಗಲು ನಡೆದಿತ್ತೇ ಸಂಚು?

ಕೃಪೆ : ಕಾರವಾನ್ ಮ್ಯಾಗಝಿನ್

ವರದಿಗಾರ : ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಬ್ರಿಜ್ ಗೋಪಾಲ್ ಹರಿಕಿಶನ್ ಲೋಯಾ ಸಾವಿನ ಕುರಿತಾದ ನಿಗೂಢತೆ ದಿನದಿಂದ ದಿನಕ್ಕೆ ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತಿದೆ. 2014 ರ  ನವಂಬರ್ 30 ಮತ್ತು ಡಿಸಂಬರ್ 1ರ ಮಧ್ಯೆ ಮೃತಪಟ್ಟಿದ್ದ ಲೋಯಾರವರದ್ದು ಹೃದಯಾಘಾತವೆಂದು ಕುಟುಂಬಿಕರಿಗೆ ತಿಳಿಸಲಾಗಿತ್ತು. ಆದರೆ ಅವರ ಸಾವಿನ ಕುರಿತು ಕುಟುಂಬ ಮೌನ ಮುರಿದಿದ್ದು, ಲೋಯಾ ಅವರ ಸಾವಿನ ಕುರಿತು ನಮಗೆ ಹಲವು ಅನುಮಾನಗಳಿವೆ ಎಂದು ‘ಕಾರವಾನ್ ಮ್ಯಾಗಝಿನ್’ಗೆ ಹೇಳಿಕೆ ನೀಡಿದ್ದರು.

ಇಂದು ಲೋಯಾ ಅವರ ಸಹೋದರಿ,  ಮಹಾರಾಷ್ಟ್ರದ ಧುಲೆಯಲ್ಲಿ ವೈದ್ಯೆಯಾಗಿರುವ ಅನುರಾಧಾ ಬಿಯಾನಿಯವರು, ‘ಬಾಂಬೇ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಮೋಹಿತ್ ಶಾ ನನ್ನ ಸಹೋದರನಿಗೆ 100 ಕೋಟಿಯ ಲಂಚದ ಆಮಿಷ ಒಡ್ಡಿದ್ದರು. ಇದಕ್ಕೆ ಪ್ರತಿಯಾಗಿ ಲೋಯಾ ವಿಚಾರಣೆ ನಡೆಸುತ್ತಿದ್ದ ಎನ್ ಕೌಂಟರ್ ಪ್ರಕರಣದಲ್ಲಿ “ಅನುಕೂಲಕರ ತೀರ್ಪು’ ಒಂದನ್ನು ನೀಡಬೇಕೆಂಬುವುದು ಅವರ ಉದ್ದೇಶವಾಗಿತ್ತು. ದೀಪಾವಳಿಯನ್ನು ಆಚರಿಸಲಿಕ್ಕಾಗಿ ನಮ್ಮ ಕುಟುಂಬದ ಎಲ್ಲರೂ ಗೇಟ್ಗಾಂವ್’ನಲ್ಲಿರುವ ನಮ್ಮ ಪೂರ್ವಜರ ಮನೆಯಲ್ಲಿ ಸೇರಿದ್ದಾಗ ಲೋಯಾ ಈ ಕುರಿತು ನನ್ನಲ್ಲಿ ಹೇಳಿಕೊಂಡಿದ್ದರು. ಇದು ಆತನ ಸಾವಿನ ಒಂದು ವಾರದ ಮೊದಲಾಗಿತ್ತು ಎಂದು ಅನುರಾಧಾ ‘ಕಾರವಾನ್’  ಜೊತೆಗೆ ಹೇಳಿಕೊಂಡಿದ್ದಾರೆ. ಲೋಯಾ ಅವರ ತಂದೆ ಹರಿಕಿಶನ್ ಕೂಡಾ ಇದಕ್ಕೆ ಪೂರಕವಾದ ಹೇಳಿಕೆ ನೀಡಿದ್ದು, ಲೋಯಾ ‘ಅನುಕೂಲಕರ’ ತೀರ್ಪನ್ನು ನೀಡುವುದಕ್ಕೆ ಪ್ರತಿಯಾಗಿ ಆತನಿಗೆ ಬೃಹತ್ ಮೊತ್ತ ಮತ್ತು ಮುಂಬೈನಲ್ಲೊಂದು ಮನೆಯನ್ನು ನೀಡುವ ಆಮಿಷವೊಡ್ಡಲಾಗಿತ್ತೆಂದು ಹೇಳಿದ್ದಾರೆ.

ಲೋಯಾ ಅವರು ಜೂನ್ 2014 ರಲ್ಲಿ ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಶ್ರೀ ಉತ್ಪತ್’ರವರು ವರ್ಗಾವಣೆಯಾದ ನಂತರ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಉತ್ಪತ್’ರವರು ಜೂನ್’ನಲ್ಲಿ, ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಅಮಿತ್ ಶಾ ಒಮ್ಮೆಯೂ ಕೋರ್ಟಿಗೆ ಹಾಜರಾಗದ್ದರ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸಿವ್ಯಕ್ತಪಡಿಸಿ, “ಪ್ರತಿ ಬಾರಿಯೂ ನಿಮ್ಮ ಕಕ್ಷಿದಾರ ವಿನಾಕಾರಣ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿ,  ಮುಂದಿನ ವಿಚಾರಣೆಯನ್ನು ಜೂನ್ 26, 2014 ಕ್ಕೆ ನಿಗದಿಪಡಿಸಿದ್ದರು. ಆದರೆ ಜೂನ್ 25 ರಂದೇ ಉತ್ಪತ್’ರವರನ್ನು ಪುಣೆಗೆ ವರ್ಗಾವಣೆ ಮಾಡಲಾಗಿತ್ತು.  ಆದರೆ ವಾಸ್ತವದಲ್ಲಿ ಇದು ಸೊಹ್ರಾಬುದ್ದೀನ್ ಪ್ರಕರಣವನ್ನು ಒಬ್ಬನೇ ಅಧಿಕಾರಿಯಿಂದ ವಿಚಾರಣೆ ನಡೆಸಬೇಕೆಂಬ 2012 ರಲ್ಲಿ ಸುಪ್ರೀಮ್ ಕೋರ್ಟ್ ನೀಡಿದ್ದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿತ್ತು.

ಅನುರಾಧಾ ಬಿಯಾನಿಯವರು ಮುಂದಿವರೆಯುತ್ತಾ, 2010 ಜೂನ್’ನಿಂದ 2015 ಸೆಪ್ಟಂಬರ್ ವರೆಗೆ ‘ಬಾಂಬೇ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದ ಮೋಹಿತ್ ಶಾ, ನನ್ನ ಸಹೋದರ ಲೋಯಾಗೆ ತಡ ರಾತ್ರಿಗಳಲ್ಲಿ ಕರೆ ಮಾಡಿ, ನಾಗರಿಕ ಉಡುಪಿನಲ್ಲಿ ಭೇಟಿಯಾಗುವಂತೆ ಹೇಳುತ್ತಿದ್ದರು. ಈ ಪ್ರಕರಣದಲ್ಲಿ ನೀವೊಂದು ಅನುಕೂಲಕರ ತೀರ್ಪನ್ನು ನೀಡಬೇಕು. ಅದು ನಿಮ್ಮಿಂದ ಸಾಧ್ಯವಿದೆ ಕೂಡಾ. ಅದಕ್ಕೆ ಪ್ರತಿಯಾಗಿ ಬೃಹತ್ ಮೊತ್ತಗಳ ಆಮಿಷಗಳು ನಿಮ್ಮನ್ನು ಹುಡುಕಿಕೊಂಡು ಬರುವುದು ಎಂದು ಮೋಹಿತ್ ಶಾ ಹೇಳಿರುವರೆಂದು ಅನುರಾಧಾ ಹೇಳಿದ್ದಾರೆ. ಮತ್ತೂ ಮುಂದಿವರೆಯುವ ಅನುರಾಧಾ, ‘ಮೋಹಿತ್ ಅವರು, ಲೋಯಾರವರಲ್ಲಿ ಡಿಸಂಬರ್ 30ರ ಒಳಗೆ ತೀರ್ಪು ನೀಡಿದರೆ ಜನ ಅದನ್ನು ಗಮನಿಸುವುದಿಲ್ಲ, ಏಕೆಂದರೆ ಆ ವೇಳೆ ಇನ್ನೊಂದು ಸ್ಪೋಟಕ ಕಥೆಯಿರುತ್ತದೆ ಎಂದವರು ಹೇಳಿದ್ದರೆಂದು ಅನುರಾಧಾ ಹೇಳುತ್ತಾರೆ. ಲೋಯಾ ಅವರ ತಂದೆಯೊಂದಿಗೆ ಕೂಡಾ ಇದನ್ನು ಬಹಳ ಬೇಸರದಿಂದ ಹಂಚಿಕೊಂಡಿದ್ದ ಅವರು, ನಾನು ನನ್ನ ವೃತ್ತಿಗೆ ರಾಜೀನಾಮೆ ನೀಡುತ್ತೇನೆ. ನನ್ನ ಗ್ರಾಮಕ್ಕೆ ಮರಳಿ ಕೃಷಿ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರೆಂದು ಅವರ ತಂದೆ ಹರಿಕಿಶನ್ ನೆನಪಿಸಿಕೊಳ್ಳುತ್ತಾರೆ.

ಲೋಯಾರವರ ಸಾವಿನ ನಂತರ ಎಂ ಬಿ ಗೋಸಾವಿ ಪ್ರಕರಣದ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ಡಿಸಂಬರ್ 15 ರಿಂದ ಮೂರು ದಿನಗಳ ಕಾಲ ಅಮಿತ್ ಶಾರವರ ಪರ ವಕೀಲರ ಹೇಳಿಕೆಗೆಳನ್ನು ದಾಖಲಿಸಿದ್ದರು. ಇದೇ ವೇಳೆ ಪಿರ್ಯಾದುದಾರರಾಗಿದ್ದ ಸಿಬಿಐಯ ಹೇಳಿಕೆಗಳನ್ನು ಕೇವಲ 15 ನಿಮಿಷಗಳಲ್ಲಿ ಮುಗಿಸಿದ್ದರು !! ಡಿಸಂಬರ್ 17 ಕ್ಕೆ ತನ್ನ ವಿಚಾರಣೆಯನ್ನು ಪೂರ್ತಿಗೊಳಿಸಿದ ಗೋಸಾವಿ, ತೀರ್ಪನ್ನು ಡಿಸಂಬರ್ 30ಕ್ಕೆ ಕಾಯ್ದಿರಿಸುತ್ತಾರೆ. ಲೋಯಾರವರ ಸಾವಿನ ಸರಿಯಾದ ಒಂದು ತಿಂಗಳ ನಂತರ ಗೋಸಾವಿ ತನ್ನ ತೀರ್ಪು ಪ್ರಕಟಿಸುತ್ತಾರೆ. ತನ್ನ ತೀರ್ಪಿನಲ್ಲಿ ಅಮಿತ್ ಶಾ ವಕೀಲರ ವಾದವನ್ನು ಎತ್ತಿ ಹಿಡಿದ ಅವರು, ಸಿಬಿಐ ರಾಜಕೀಯ ದುರುದ್ದೇಶಗಳಿಂದ ಅಮಿತ್ ಶಾರವರ ಮೇಲೆ ಪ್ರಕರಣ ದಾಖಲಿಸಿತ್ತೆಂದು ತೀರ್ಪು ಕೊಡುತ್ತಾರೆ ಮತ್ತು ಅಮಿತ್ ಶಾರವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸುತ್ತಾರೆ. ಕಾಕಾತಳೀಯವೆಂಬಂತೆ ಅದೇ ದಿನ ಕ್ರಿಕೆಟರ್ ಎಂ ಎಸ್ ಧೋನಿ ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿಯಾದ ಸುದ್ದಿಯನ್ನೇ ಎಲ್ಲಾ ರಾಷ್ಟ್ರೀಯ ಮಾಧ್ಯಮಗಳು ಬಿತ್ತರಗೊಳಿಸಲು ಪ್ರಾರಂಭಿಸಿದ್ದವು ಮತ್ತು ಅಮಿತ್ ಶಾ ಪ್ರಕರಣದಲ್ಲಿ ನಿರ್ದೋಷಿಯಾಗಿದ್ದು ಕೇವಲ ಒಂದು ಮೂಲೆಯ ಸುದ್ದಿಯಾಗಿ ಮಾರ್ಪಟ್ಟಿತ್ತು.

ಬಾಂಬೇ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ, ಲೋಯಾರ ಸಾವಿನ ಎರಡೂವರೆ ತಿಂಗಳು ಕಳೆದು ಅವರ ಮನೆಗೆ ಭೇಟಿ ಕೊಟ್ಟಿದ್ದರು. ಅದರ ನಂತರ ಲೋಯಾರವರ ಮಗ ಅನುಜ್ ಒಂದು ಪತ್ರ ಬರೆದಿದ್ದು, ಅದರಲ್ಲಿ ಅನುಜ್ ಅವರು, ನಮ್ಮ ಕುಟುಂಬಕ್ಕೆ ಬೆದರಿಕೆ ಇದೆ. ಅವರೇನು ಬೇಕಾದರೂ ಮಾಡಲು ಹೇಸದವರು. ಮೋಹಿತ್ ಶಾರೊಂದಿಗೆ ನನ್ನ ತಂದೆಯ ಸಾವಿನ ಕುರಿತೊಂದು ತನಿಖಾ ಆಯೋಗವನ್ನು ರಚಿಸಿ ಎಂದೂ ಕೂಡಾ ನಾನು ವಿನಂತಿಸಿದ್ದೆ ಎಂದು ಆ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಅನುಜ್ ತಮ್ಮ ಪತ್ರದ ಎರಡು ಕಡೆಗಳಲ್ಲಿ ” ನನಗೆ ಅಥವಾ ನನ್ನ ಕುಟುಂಬಕ್ಕೇನಾದರೂ ಸಂಭವಿಸಿದರೆ ಅದಕ್ಕೆ ಮುಖ್ಯ ನ್ಯಾಯಾಧೀಶ ಮೋಹಿತ್ ಶಾ ಮತ್ತು ಈ ಪ್ರಕರಣದಲ್ಲಿ ಭಾಗಿಯಾಗಿರುವವರೇ ಪ್ರಮುಖ ಕಾರಣ ಎಂದು ಬರೆದಿದ್ದಾರೆ ಎಂದು ಘಟನೆಯ ಕುರಿತು ತನಿಖಾ ವರದಿ ಸಿದ್ಧಪಡಿಸಿರುವ “ಕಾರವಾನ್ ಮ್ಯಾಗಝಿನ್” ನ ಪತ್ರಕರ್ತ ನಿರಂಜನ್ ಟಾಕ್ಲೇ ಬರೆದುಕೊಂಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group