ವರದಿಗಾರ: ಬಾಲಿವುಡ್ ಚಿತ್ರ ‘ಪದ್ಮಾವತಿ’ ವಿರೋಧಿಸುವವರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದ್ದು, ತಲೆ ಕಡಿಯುವವರು, ಮೂಗು ಕತ್ತರಿಸುವವರೂ ಮಾಧ್ಯಮಗಳಲ್ಲಿ ಯಾವುದೇ ಭಯವಿಲ್ಲದೇ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಇನ್ನೊಬ್ಬನಂತೂ ಟಿವಿ ಚರ್ಚೆಯೊಂದರಲ್ಲಿ ಖಡ್ಗ ಝಳಪಿಸುತ್ತಿದ್ದ. ಬೆದರಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ ಹಿಂಸಾವಾದಿಗಳನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ಮಟ್ಟ ಹಾಕಬಹುದೆಂದು ನಂಬಿದ್ದರೆ, ಇದೀಗ ಬಿಜೆಪಿ ನಾಯಕರೇ ದೀಪಿಕಾರ ತಲೆ ಕಡಿಯುವವರಿಗೆ ಇನಾಮು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ವಿಷಯಗಳನ್ನೂ ಹಂಚುವ ಪ್ರಧಾನಿ ಈ ವಿವಾದದಲ್ಲಿ ಮೌನವಾಗಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಇದೀಗ ಹೈದರಾಬಾದಿನಲ್ಲಿ ಆಯೋಜಿಸಲಾಗಿದ್ದ Global Entrepreneurship Summit (GES) ಕಾರ್ಯಕ್ರಮದಲ್ಲಿ ಭಾಗವಹಿಸಲು ದೀಪಿಕಾ ಪಡುಕೋಣೆ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ರ ಮಗಳು ಇವಾಂಕಾ ಟ್ರಂಪ್ ಭಾಗವಹಿಸಲಿದ್ದಾರೆ.
ನವೆಂಬರ್ 28ರಿಂದ 30ರ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೀಪಿಕಾ ಈ ಮೊದಲು ಒಪ್ಪಿದ್ದರೂ ಇದೀಗ ನಿರಾಕರಿಸಿದ್ದಾರೆ. ಅವರ ನಿರಾಕರಣೆಗೆ ಕಾರಣ ತಿಳಿದು ಬಂದಿಲ್ಲವಾದರೂ ಪದ್ಮಾವತಿ ವಿವಾದವೇ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
