ವರದಿಗಾರ-ವಿಶೇಷ ವರದಿ: ಹಜ್ ಯಾತ್ರಿಗಳಿಗೆ ನೀಡಲಾಗುವ ಸಬ್ಸಿಡಿಯನ್ನು ನಿಲ್ಲಿಸಬೇಕು, ಹಜ್ ಭವನಗಳಿಗೆ ಅನುದಾನ ಕಡಿತಗೊಳಿಸಬೇಕೆಂಬುವುದು ಇಲ್ಲಿನ ಕೆಲ ವಿತಂಡವಾದಿಗಳ ಕುತರ್ಕವಾಗಿದೆ. ಆದರೆ ಮಾಹಿತಿ ಹಕ್ಕಿನ ಮೂಲಕ ಪಡೆದ ಈ ಕುರಿತ ಮಾಹಿತಿಗಳು ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಈ ಕುರಿತ ಒಂದು ವರದಿಯ ಮೂಲಕ ನೈಜತೆಯನ್ನು ಪ್ರತಿಬಿಂಬಿಸುವ ಪ್ರಯತ್ನ.
ಮಾಹಿತಿ ಹಕ್ಕಿನ ಮೂಲಕ ಪಡೆದ ದಾಖಲೆಗಳ ಪ್ರಕಾರ, 31 ಮಾರ್ಚ್ 2017 ವರೆಗೆ ಭಾರತೀಯ ಹಜ್ ಕಮಿಟಿ ಸುಮಾರು 825.5 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಲ್ಲಿ ನಿಗದಿತ ಠೇವಣಿಯ ರೂಪದಲ್ಲಿ ಜಮೆ ಮಾಡಿದೆ. ಈ ಮೊತ್ತವು ಸಂಪೂರ್ಣವಾಗಿ ಹಜ್ ಕಮಿಟಿಯು ಭಾರತೀಯ ಹಜ್ ಯಾತ್ರಿಕರಿಂದ ಸಂಗ್ರಹಿಸಿದ್ದಾಗಿದೆ. ದಾಖಲೆಗಳ ಪ್ರಕಾರ ಹಜ್ ಕಮಿಟಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 522.5 ಕೋಟಿ ರೂಪಾಯಿ, ಕೆನರಾ ಬ್ಯಾಂಕ್ ನಲ್ಲಿ 283 ಕೋಟಿ ರೂಪಾಯಿ ಹಾಗೂ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ 20 ಕೋಟಿ ರೂಪಾಯಿಗಳನ್ನು ನಿಗದಿತ ಠೇವಣಿಯ ರೂಪದಲ್ಲಿ ಹೊಂದಿದೆ.
ಹಾಗೆ ನೋಡಿದರೆ ಹಜ್ ಕಮಿಟಿ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಆರಂಭದಲ್ಲಿ ವಿದೇಶಾಂಗ ಸಚಿವಾಲಯದ ಅಧೀನದಲ್ಲಿದ್ದರೆ, ಇದೀಗ ಅಲ್ಪಸಂಖ್ಯಾತ ಕಲ್ಯಾಣ ಸಚಿವಾಲಯದ ಅಧೀನದಲ್ಲಿದೆ. ಹಣಕಾಸು ಸಚಿವಾಲಯದ ಪ್ರಕಾರ ಹಜ್ ಕಮಿಟಿ ಒಂದು ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾಗಿದೆ. ರಹಸ್ಯವಾಗಿ ಉಳಿಯ ಬಯಸಿದ ಭಾರತೀಯ ಹಜ್ ಕಮಿಟಿಯ ಅಧಿಕಾರಿಯೊಬ್ಬರ ಪ್ರಕಾರ, ಹಜ್ ಕಮಿಟಿ ಆಫ್ ಇಂಡಿಯಾ ಒಂದು ಸರಕಾರಿ ಸಂಸ್ಥೆಯಾಗಿದ್ದರೂ, ಸರಕಾರದಿಂದ ಯಾವುದೇ ರೀತಿಯ ಆರ್ಥಿಕ ಸಹಾಯ ಹಜ್ ಕಮಿಟಿಗೆ ಲಭಿಸುವುದಿಲ್ಲ. ಹಜ್ ಕಮಿಟಿಯು ಸಂಪೂರ್ಣವಾಗಿ ಮುಸಲ್ಮಾನರಿಂದ ಬರುವ ಹಣದಿಂದಲೇ ನಡೆಯುತ್ತಿದೆ.
ಹಜ್ ಕಮಿಟಿಯು ಮುಂಬೈಯಲ್ಲಿರುವ ಹಜ್ ಹೌಸ್ ಮದುವೆ ಸಮಾರಂಭಗಳಿಗೆ ಹಾಗೂ ಇನ್ನಿತರ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಬಾಡಿಗೆಗೆ ನೀಡುತ್ತದೆ. ಮದುವೆ ಸಮಾರಂಭಗಳಿಗೆ ಹಜ್ ಹೌಸ್ ಹಾಲ್ ನಲ್ಲಿ 50-60 ಸಾವಿರ ರೂಪಾಯಿಗಳ ಬಾಡಿಗೆ ಸಂಗ್ರಹಿಸಲಾಗುತ್ತಿದ್ದರೆ, ಇತರ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳಿಗೆ ರಿಯಾಯಿತಿ ದರದಲ್ಲಿ ಹಜ್ ಹೌಸನ್ನು ಬಾಡಿಗೆಗೆ ನೀಡಲಾಗುತ್ತಿದೆ. ಇದಲ್ಲದೆ ಪ್ರತೀ ವರ್ಷ ವಿದೇಶ ವ್ಯವಹಾರದ ಮೂಲಕ ಹಜ್ ಕಮಿಟಿ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಿದೆ.
ಮಾಹಿತಿ ಹಕ್ಕಿನ ಮೂಲಕ ದೊರೆತ ದಾಖಲೆಗಳ ಪ್ರಕಾರ ಹಜ್ ಕಮಿಟಿ 2014-15 ರಲ್ಲಿ ಬ್ಯಾಂಕಿನಲ್ಲಿರುವ ಫಿಕ್ಸೆಡ್ ಡೆಪೋಸಿಟ್ ಮೊತ್ತದ ಮೇಲೆ 46.22 ಕೋಟಿ ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಸಂಪಾದಿಸಿದೆ. 2010-11 ರಿಂದ 2014-15ರ ವರೆಗೆ ಹಜ್ ಕಮಿಟಿ 120 ಕೋಟಿ ರೂಪಾಯಿಗಳನ್ನು ಬಡ್ಡಿಯ ರೂಪದಲ್ಲಿ ಸಂಪಾದಿಸಿದೆ.
ಹಜ್ ಕಮಿಟಿ ಸರಕಾರಿ ಸಂಸ್ಥೆಯಾದ ಕಾರಣ ದೇಶದಾದ್ಯಂತ ನಿರ್ಮಿಸಲಾದ ಹಜ್ ಹೌಸ್ ಗಳು ಸರಕಾರಿ ಆಸ್ತಿಯಾಗುತ್ತವೆ. ಆದರೆ ಯಾವುದೇ ಹಜ್ ಹೌಸ್ ಸರಕಾರದ ಹಣದಿಂದ ನಿರ್ಮಿಸಲಾಗಿಲ್ಲ, ಎಲ್ಲಾ ಹಜ್ ಹೌಸ್ ಗಳು ಹಜ್ ಯಾತ್ರಿಗಳ ಹಣದಿಂದ ನಿರ್ಮಿಸಿದ್ದಾಗಿವೆ. ಹಜ್ ಕಮಿಟಿ ಅಧಿಕಾರಿಯೊಬ್ಬರ ಹೇಳಿಕೆಯ ಪ್ರಕಾರ ಕೆಲವೊಂದು ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರಕಾರಗಳು ಹಜ್ ಹೌಸ್ ನಿರ್ಮಿಸುವಾಗ ಸ್ವಲ್ಪ ಮಟ್ಟಿನ ಆರ್ಥಿಕ ನೆರವನ್ನು ನೀಡಿವೆ.
ಮುಂಬೈಯಲ್ಲಿರುವ ಹಜ್ ಹೌಸ್ ನ ನಿರ್ಮಾಣ ಕಾರ್ಯ 1983ರ ಮಾರ್ಚ್ 7ರಂದು ಶುರುವಾಗಿತ್ತು. 102 ಕೊಠಡಿಗಳು ಹಾಗೂ ಒಂದು ಎಸಿ ಹಾಲ್ ಇರುವ ಈ ಹಜ್ ಹೌಸ್ ನ ನಿರ್ಮಾಣಕ್ಕೆ ಭಾರತ ಸರಕಾರದಿಂದ ಯಾವುದೇ ತರದ ಆರ್ಥಿಕ ಸಹಾಯವನ್ನೋ, ಸಾಲವನ್ನೋ ಪಡೆಯಲಾಗಿಲ್ಲ. ನಿರ್ಮಾಣದ ಸಂಪೂರ್ಣ ಖರ್ಚನ್ನು ಹಜ್ ಕಮಿಟಿ ವಹಿಸಿತ್ತು.
ಸುಳ್ಳು ಮಾಹಿತಿಗಳ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ವಿತಂಡವಾದಿಗಳಿಗೆ ಈ ಮಾಹಿತಿಗಳು ಸಹ್ಯವಾಗಲ್ಲವಾದರೂ, ಪ್ರಜ್ಞಾವಂತ ಜನರು ಈ ಕುರಿತ ಮಾಹಿತಿಯನ್ನು ಇತರರಿಗೂ ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ.
