ವರದಿಗಾರ : ಕಳೆದ ಕೆಲ ದಿನಗಳಿಂದ ಸಾಮಾಜಿಕ ತಾಣಗಳಾದ ಟ್ವಿಟ್ಟರ್, ಫೇಸ್ಬುಕ್ ಮತ್ತು ವಾಟ್ಸಪ್ ಸೇರಿದಂತೆ ಎಲ್ಲಾ ಕಡೆ ಪಂಜಾಬಿನ ‘ಸುಂದರಿ ಪೊಲೀಸ್’ ಅಧಿಕಾರಿ ಹರ್ಲೀನ್ ಮಾನ್ ಫೋಟೋ ಎಗ್ಗಿಲ್ಲದೆ ಶೇರ್ ಆಗಿ ವೈರಲ್ ಆಗಿತ್ತು. ಅದಕ್ಕೆ ಮಸಾಲೆಭರಿತ ಶೀರ್ಷಿಕೆಗಳು ಕೆಲವರಿಂದ ವ್ಯಕ್ತವಾಗಿದ್ದವು. ಕೆಲವರಂತೂ ಹರ್ಲೀನ್ ಮಾನ್ ಇರುವ ಪೊಲೀಸ್ ಠಾಣೆಯಲ್ಲಿ ಬಂಧನಕ್ಕೊಳಪಡಲು ಯುವಕರು ಸರತಿ ಸಾಲಿನಲ್ಲಿದ್ದಾರೆಂದೂ ಬರೆದುಕೊಂಡಿದ್ದರು.
ಆದರೆ ವೈರಲ್ ಆದ ಫೋಟೋದ ವಾಸ್ತವ ಈಗ ಬಯಲಾಗಿದೆ. ಅದು ಹರ್ಲೀನ್ ಮಾನ್ ಅಲ್ಲ. ಆಕೆ ಪಂಜಾಬ್ ಪೊಲೀಸ್ ಅಧಿಕಾರಿ ಕೂಡಾ ಅಲ್ಲ. ಆಕೆಯ ಹೆಸರು ಕೈನಾತ್ ಆರೋರಾ ಮತ್ತು ಆಕೆ ಓರ್ವ ಬಾಲಿವುಡ್ ನಟಿ. ಇತ್ತೀಚೆಗೆ ತನ್ನ ಪಂಜಾಬಿ ಚಲನಚಿತ್ರದ ಶೂಟಿಂಗ್’ನಲ್ಲಿದ್ದಾಗ ಕ್ಲಿಕ್ಕಿಸಿದ್ದ ಫೋಟೋಗಳೇ ಈಗ ವೈರಲ್ ಆಗಿವೆ. ಆ ಚಿತ್ರದ ಹೆಸರು ”ಜಗ್ಗಾ ಜಿಯುಂಡೇ’ ಎಂದಾಗಿದೆ.
ಈ ಕುರಿತು ತನ್ನ ಇನ್’ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿರುವ ಕೈನಾತ್ ಆರೋರಾ, “”ನಾನು ಹರ್ಲೀನ್ ಮಾನ್ ಅಲ್ಲ, ಅದು ಪಂಜಾಬಿ ಚಿತ್ರ ಜಗ್ಗ ಜಿಯುಂಡೇಯಲ್ಲಿನ ನನ್ನ ಪಾತ್ರದ ಹೆಸರಷ್ಟೇ. ಕಳೆದ ಮೂರು ದಿನಗಳಿಂದ ನನ್ನ ಫೋನಿಗೆ ಹಲವಾರು ಸಂದೇಶಗಳು ಈ ಕುರಿತು ಬಂದಿದೆ. ನಾನು ನಿಜ ಜೀವನದ ಪೊಲೀಸ್ ಅಲ್ಲ” ಎಂದು ಬರೆದುಕೊಂಡಿದ್ದಾರೆ.
ಕೈನಾತ್ ‘ಗ್ರಾಂಡ್ ಮಸ್ತಿ’ ಸೇರಿದಂತೆ ಹಲವಾರು ಬಾಲಿವುಡ್ ಸಿನೆಮಾಗಳಲ್ಲೂ ನಟಿಸಿದ್ದಾರೆ.
