ನಿಮ್ಮ ಬರಹ

ಮುಂಜಿ ವಿವಾದ ಮತ್ತು ಅದರ ವೈಜ್ಞಾನಿಕ ಸತ್ಯಗಳು

ಲೇಖಕ : ಇಸ್ಮತ್ ಫಜೀರ್

ಮೊನ್ನೆ ಈಶ್ವರಪ್ಪ ಎಂಬ ಹರಕು ಬಾಯಿಯ ರಾಜಕಾರಣಿ “ಮೂಡನಂಬಿಕೆ ನಿಷೇಧದ ಹೆಸರಲ್ಲಿ ಹಿಂದೂಗಳ ನಂಬಿಕೆಗಳನ್ನು ಸಿದ್ಧರಾಮಯ್ಯ ಸರ್ಕಾರ ಹರಣ ಮಾಡುತ್ತಿದೆ. ಮುಸ್ಲಿಮರ ಮುಂಜಿಯನ್ನೂ ಮೂಡನಂಬಿಕೆ ವ್ಯಾಪ್ತಿಗೆ ತರಬೇಕು” ಎಂಬರ್ಥದಲ್ಲಿ ಮಾತನಾಡಿದರು. ಆ ಬಳಿಕ ಮತ್ತೂ ಮುಂದುವರಿದು ಸಿದ್ಧರಾಮಯ್ಯ ಸರಕಾರ ಮೂಢನಂಬಿಕೆಗಳ ನಿಷೇಧದ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ. ಧೈರ್ಯವಿದ್ದರೆ ಮುಸ್ಲಿಮರ ಮುಂಜಿ ನಿಷೇಧಿಸಲು ಸಾಧ್ಯವೇ? ಎಂದು ಸವಾಲು ಹಾಕುವ ರೀತಿಯಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು.  ಇಂತಹ ಮಾತುಗಳನ್ನಾಡಿ ಹದಿನೈದು ನಿಮಿಷಗಳೊಳಗೆ ಈಶ್ವರಪ್ಪನನ್ನು ದಕ್ಷಿಣ ಕನ್ನಡದ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹರಾಜು ಹಾಕಿದ್ದಾರೆ. ಈಶ್ವರಪ್ಪನಂತಹ ಕೊಳಕರಿಗೆ ಜವಾಬು ಕೊಡಬೇಕಾಗಿಲ್ಲ ಆದರೆ ಮುಂಜಿಯ ಹಿಂದಿರುವ ವೈಜ್ಞಾನಿಕ ಲಾಭಗಳೇನು ಮತ್ತು ಅದು ಯಾವೆಲ್ಲಾ ಸಮುದಾಯಗಳಲ್ಲಿ ಒಂದು ಧಾರ್ಮಿಕ ಪರಂಪರೆಯಾಗಿತ್ತು ಎಂದು ನೋಡೋಣ.

ಮುಂಜಿ (circumcission) ಮುಸ್ಲಿಮರಿಗೆ ನಾಲ್ಕು ಸಾವಿರ ವರ್ಷಗಳ ಹಿಂದಿನಿಂದಲೂ ಕಡ್ಡಾಯ ಪದ್ದತಿ ಯಾಗಿದೆ. ಪ್ರವಾದಿ ಇಬ್ರಾಹಿಮ್ (ಅ.ಸ) ಕಾಲದಿಂದ ಅವರ ಪರಂಪರೆಯಾಗಿ ಮುಸ್ಲಿಮರು ಗಂಡುಮಕ್ಕಳಿಗೆ ಕಡ್ದಾಯವಾಗಿ ಮುಂಜಿಮಾಡಿಸುತ್ತಾ ಬಂದಿದ್ದಾರೆ.
ಜಗತ್ತಿನಾದ್ಯಂತದ ಮುಸ್ಲಿಮರು ಮಾತ್ರವಲ್ಲದೇ ಕೆಲವು ಪ್ರದೇಶಗಳಲ್ಲಿ ಮುಸ್ಲಿಮೇತರರೂ ಮುಂಜಿ ಮಾಡಿಸುತ್ತಾರೆ.
ಸೆಂಟ್ರಲ್ ಅಮೆರಿಕಾ, ಅಮೆಝಾನ್, ಆಸ್ಟ್ರೇಲಿಯಾ ಮುಂತಾದ ದೇಶಗಳ ಕೆಲವು ಆದಿವಾಸಿ ಜನಾಂಗಗಳು ಮತ್ತು ಅಬ್ ಸೀನಿಯಾದ ಕ್ರೈಸ್ತರೂ ಮುಂಜಿಕಾರ್ಯ ನಿರ್ವಹಿಸುತ್ತಾರೆ.

ಶತಮಾನದ ಹಿಂದೆ ಕೇರಳದ ಒಂದು ಬಲಿಷ್ಟ ಸಮುದಾಯವಾದ ನಾಯರ್ ಗಳೂ ಮುಂಜಿ ಮಾಡಿಸುತ್ತಿದ್ದರು ಎಂದು 1949 ರಲ್ಲಿ ತಿರುವನಂತಪುರದ ರೆಡ್ಡಿಯಾರ್ ಪ್ರೆಸ್ ಎಂಡ್ ಬುಕ್ ಡಿಪೋ ಪ್ರಕಟಿಸಿದ ಶ್ರೀ ಕುರುಪ್ಪುಮ್ ವೀಟಿಲ್ ಕೆ.ಎನ್.ಗೋಪಾಲ ಪಿಳ್ಳೈ ಯವರು ರಚಿಸಿದ ” ಕೇರಳ ಮಹಾಚರಿತ್ರಂ ” ಎಂಬ ಗ್ರಂಥದ ಎರಡನೇ ಭಾಗದ ಪುಟ ಸಂಖ್ಯೆ 54 ಮತ್ತು 55 ರಲ್ಲಿ “ನಾಯರ್ ಮಾರುಡೆ ಪೂರ್ವಿಕಾಚಾರಂಙಲ್” ಎಂಬ ಶೀರ್ಷಿಕೆಯಡಿ ನಾಯರ್ ಗಳ ಮುಂಜಿಕರ್ಮದ ಕುರಿತಂತೆ ಐತಿಹಾಸಿಕ ದಾಖಲೆಗಳನ್ನು ನೀಡಿದ್ದಾರೆ.

ಮುಂಜಿ ಎಂದರೇನು? :

ಗಂಡು ಮಕ್ಕಳ ಜನನಾಂಗದ ಮುಂತುದಿಯ ಚರ್ಮವನ್ನು ಕತ್ತರಿಸುವ ಕ್ರಮಕ್ಕೆ ಮುಂಜಿ ಎನ್ನುತ್ತಾರೆ. ಹಿಂದೆಲ್ಲಾ ಕೇರಳ ಮತ್ತು ಕರಾವಳಿ ಕರ್ನಾಟಕ ದಲ್ಲಿ ವಸ್ಸ ಎಂಬ ಕ್ಷೌರಿಕ ಜನಾಂಗದವರು ಮುಂಜಿ ಮಾಡುವ ಕಸುಬು ಮಾಡುತ್ತಿದ್ದರು. ( ನನಗೆ ಮತ್ತು ನನ್ನ ತಲೆಮಾರಿನವರನ್ನು ವಸ್ಸಗಳೇ ಮುಂಜಿ ಮಾಡಿದ್ದರು) ಜಗತ್ತಿನಾದ್ಯಂತ ಬೇರೆ ಬೇರೆ ಪ್ರದೇಶಗಳಲ್ಲಿ ಮುಂಜಿ‌ ಮಾಡುವ ಕುಲಕಸುಬಿನ ಸಮುದಾಯಗಳಿವೆ.
ಇತ್ತೀಚಿನ ಒಂದೂವರೆ ದಶಕದಿಂದೀಚೆಗೆ ಕರಾವಳಿ ಕರ್ನಾಟಕ ದಲ್ಲಂತೂ ಅದನ್ನು ವೈದ್ಯರೇ ನಿರ್ವಹಿಸುತ್ತಾರೆ. ಪ್ರಸ್ತುತ ಅದೊಂದು ಶಸ್ತ್ರಕ್ರಿಯೆಯ ಪ್ರಕ್ರಿಯೆಯಂತಾಗಿದೆ.(surgical procedure) ಮುಂಜಿಯ ಆರೋಗ್ಯ ಸಂಬಂಧೀ ಉಪಯುಕ್ತತೆಗಳನ್ನು ಹಲವು ಸಂಶೋಧನೆಗಳ ಮೂಲಕ ಅರಿತು ವೈದ್ಯಕೀಯ ಜಗತ್ತು ನಿಬ್ಬೆರಗಾಗಿದೆ. ಈ ನಿಟ್ಟಿನಲ್ಲಿ ನಡೆದ ಎಲ್ಲಾ ಸಂಶೋಧನಾ ವರದಿಗಳಲ್ಲೂ ವೈದ್ಯಕೀಯ ವಿಜ್ಞಾನಿಗಳು ಮುಂಜಿಯ ಉಪಯುಕ್ತತೆಯ ಬಗ್ಗೆ ಏಕಾಭಿಪ್ರಾಯ ತಳೆದಿದ್ದಾರೆ. ಯಾವನೇ ಒಬ್ಬ ವಿಜ್ಞಾನಿಯೂ ಮುಂಜಿಯನ್ನು ನಿರುತ್ಸಾಹಗೊಳಿಸಿಲ್ಲ.

ಮುಂಜಿಯ ಉಪಯುಕ್ತತೆಗಳು:

ಮುಂಜಿ ಮಾಡಿದವರಿಗೆ ಏಡ್ಸ್ , ಸಿಫಿಲಿಸ್ ಮುಂತಾದ ಗುಹ್ಯ ರೋಗಗಳು ಬರುವ ಸಾಧ್ಯತೆ ಇತರರಿಗಿಂತ 60% ಕಡಿಮೆಯೆಂದು ಹಲವು ಸಂಶೋಧನೆಗಳಿಂದ ಸಾಬೀತಾಗಿದೆ. ಮುಂಜಿ ಮಾಡಿಸಿದವರಿಗೆ ಇತರರಿಗಿಂತ ಹಲವು ಪಟ್ಟು ಹೆಚ್ಚು ಲೈಂಗಿಕ ಸುಖ ಸಿಗುತ್ತದೆ.ಚರ್ಮರಹಿತ ಮುಂತುದಿಗೆ ಸಂವೇದನಾ ಶೀಲತೆ ಕಡಿಮೆಯಿರುವುದರಿಂದ ಶೀಘ್ರ ಸ್ಖಲನ ಸಮಸ್ಯೆ ತೀರಾ ಕಡಿಮೆ.( ಮುಂಜಿ ಮಾಡಿಸಿಯೂ ಆ ಸಮಸ್ಯೆ ಭಾದಿಸುತ್ತಿದ್ದರೆ ಅದು ಮಾನಸಿಕ ಉದ್ಱೇಗದಿಂದ)
ಪುರುಷ ಜನನಾಂಗದ ಮುಂದೊಗಲಲ್ಲಿರುವ ಸೂಕ್ಷ್ಮ ವಾದ ಗ್ರಂಥಿ ಸಮೂಹದಿಂದ ಸ್ಮೆಗ್ಮಾ (smegma) ಎಂಬ ಅಲ್ಪ ಜಿಡ್ಡಾದ ಪದಾರ್ಥ ಸ್ರವಿಸುತ್ತಿರುತ್ತದೆ.ಮುಂಜಿ ಮಾಡಿಸದವರು ಜನನಾಂಗದ ಮುಂತುದಿಯ ಚರ್ಮವನ್ನು ಹಿಂದಕ್ಕೆಳೆದು ನೋಡಿದರೆ ಮುಂತುದಿಯ ಚರ್ಮದೊಳಗಿನ ಪದರದಲ್ಲಿ ಸುತ್ತಲೂ ಬಿಳಿ ಬಣ್ಣದ ಒಂಥರಾ ಗಟ್ಟಿಯಾದ ಹಾಲಿನ ಪುಡಿಯಂತಹದ್ದು ಇರುವುದು ಕಂಡುಬರುತ್ತದೆ.( ಮುಂಜಿ ಮಾಡದವರು ಪ್ರತಿನಿತ್ಯವೂ ಜನನಾಂಗದ ಮುಂದೊಗಲನ್ನು ಹಿಂದೆ ಸರಿಸಿ ಶುದ್ಧಿ ಮಾಡುವುದರಿಂದ ಸ್ಮೆಗ್ಮಾ ಗಟ್ಟಿಯಾಗಿ ಶೇಖರಣೆಯಾಗುವುದನ್ನು ತಡೆಯಬಹುದು)
ಶುದ್ಧಿ ಮಾಡದಿದ್ದರೆ ಸ್ಮೆಗ್ಮಾ ಸ್ರಾವವು ಅಲ್ಲೇ ಗಟ್ಟಿಯಾಗಿ ಶೇಖರಣೆಯಾಗುವುದರಿಂದ(ಜನನಾಂಗದ ಮುಂದೊಗಲು ಹಿಂದೆ ಸರಿಯದಂತಹ ಸ್ಥಿತಿ) Phimosis ನಿರ್ಮಾಣವಾಗುತ್ತದೆ. ಈ ಫಿಮೋಸಿಸ್ ಗೆ ಏಕೈಕ ಶಾಶ್ವತ ಪರಿಹಾರ ಮುಂಜಿ ಮಾತ್ರ. ಮೂತ್ರಾಂಗದ ಸೋಂಕು ಆಗಾಗ ಆಗುವವರಿಗೆ ವೈದ್ಯರು ಮುಂಜಿ ಮಾಡಿಸಲು ಸಲಹೆ ನೀಡುತ್ತಾರೆ.

ಜನನಾಂಗದ ಮುಂದೊಗಲಲ್ಲಿ ಶೇಖರಣೆಯಾಗಿ ಗಟ್ಟಿಯಾದ ಸ್ಮೆಗ್ಮಾ ಮುಂದೆ ಜನನಾಂಗದ ಕ್ಯಾನ್ಸರ್ ಗೂ ಕಾರಣವಾಗುತ್ತದೆ. 70% ಜನನಾಂಗದ ಕ್ಯಾನ್ಸರ್ ಗೆ ಸ್ಮೆಗ್ಮಾ ಕಾರಣ ಎಂದು ಡೈಲಿ ಎಂಡ್ ಲವ್ ಎಂಬ ಪಾಶ್ಚಾತ್ಯ ವೈದ್ಯ ಲೇಖಕರು ಜಂಟಿಯಾಗಿ ರಚಿಸಿದ Short practice of surgery ಎಂಬ ಕೃತಿಯಲ್ಲಿಯೂ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಡಾ. ಪಿ.ಎಂ. ಮ್ಯಾಥ್ಯೂ ಎಂಬ ವೈದ್ಯ ಲೇಖಕರು ರಚಿಸಿದ ಮಲಯಾಳಂ ಕೃತಿ ” ಬಾಲ್ಯಂ, ಕೌಮಾರಂ, ಯೌವನಂ,ವಾರ್ಧಕ್ಯಂ” ಎಂಬ ಕೃತಿಯಲ್ಲಿಯೂ ದಾಖಲಿಸಿದ್ದಾರೆ.  ಸ್ಮೆಗ್ಮಾ ಸ್ರಾವವು ಗಟ್ಟಿಯಾಗಿ ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಅದು ಹೆಣ್ಣಿನ ಜನನಾಂಗದ ಮೂಲಕ ಗರ್ಭಕೋಶ ಸೇರಿ ಗರ್ಭಕೋಶದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇದೆ. ಸ್ಮೆಗ್ಮಾ ಶೇಖರಣೆಯಿಂದಾಗಿ ಪುರುಷರಿಗೆ ಗೊನೇರಿಯಾ ಎಂಬ ಒಂದು ವಿಧದ ಗುಹ್ಯ ರೋಗ ಭಾದಿಸುವ ಸಾಧ್ಯತೆಯೂ ಇದೆ. ಮುಂಜಿ ಮಾಡಿಸಿದವರಿಗೆ ಸ್ಮೆಗ್ಮಾ ಶೇಖರಣೆಯಾಗುವ ಪ್ರಮೇಯವೇ ಇಲ್ಲ. ಆಗಾಗ ಮೂತ್ರ ಹನಿಯುವ ಸಮಸ್ಯೆ, ಮೂತ್ರ ಬಂದರೆ ಅರೆ ಕ್ಷಣವೂ ನಿಯಂತ್ರಿಸಲಾಗದ ಸಮಸ್ಯೆ, ಜನನಾಂಗದ ದ್ವಾರ ಚಿಕ್ಕದಿರುವ ಸಮಸ್ಯೆ ಇಂತಹ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಮುಂಜಿ ಏಕೈಕ ಶಾಶ್ವತ ಪರಿಹಾರ ಎಂಬುವುದು ವೈದ್ಯಕೀಯ ಜಗತ್ತು ಅಂಗೀಕರಿಸಿದ ಸತ್ಯ.

ಸದ್ರಿ ಬರಹದ ಲೇಖಕ ಇಸ್ಮತ್ ಫಜೀರ್’ರವರ ಈ ಬರಹ 2014 ರಲ್ಲಿ “ಅಕ್ಷರ ಗೌರವ ಪುರಸ್ಕಾರ” ಕ್ಕೆ ಪಾತ್ರವಾಗಿದೆ

ಓದುಗರ ಗಮನಕ್ಕೆ :  ಮೊನ್ನೆ ಈಶ್ವರಪ್ಪ ಅವರು‌‌ ಮುಂಜಿ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಬಳಿಕ ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೇ ಸರ್ಕ್ಯುಲೇಟ್ ಮಾಡಲಾಗುತ್ತಿದೆ. ಆದರೆ ಎಲ್ಲೂ ಮೂಲ ಲೇಖಕನಾದ ನನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿಲ್ಲ. ಇದೊಂದು ವಿಧದ ಕೃತಿಚೌರ್ಯ. ಈ ಲೇಖನವನ್ನು ಪ್ರಕಟಿಸುವ ಹಕ್ಕನ್ನು ನಾನು “ವರದಿಗಾರ” ನ್ಯೂಸ್ ಪೋರ್ಟಲ್ ಅಲ್ಲದೇ ಬೇರೆ ಯಾರಿಗೂ ಕೊಟ್ಟಿಲ್ಲ. ಈ ಲೇಖನವನ್ನು ನನ್ನ 2008 ರಲ್ಲಿ ಪ್ರಕಟವಾದ “ಆರೋಗ್ಯ ಸಿಂಚನ” ಎಂಬ ಕೃತಿಯಿಂದ ನನ್ನ ಅನುಮತಿಯಿಲ್ಲದೆ ಚೌರ್ಯ ನಡೆಸಿ ಈಗ ಪ್ರಸಾರಿಸಲಾಗುತ್ತಿದೆ. ಸದ್ರಿ ಲೇಖನವನ್ನು ನಾನು ಈ ಹಿಂದೆ ಹುಸೈನ್ ಕಾಟಿಪಳ್ಳ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದ “ನಿಲಾವು” ಎಂಬ ಬ್ಯಾರಿ ನಿಯತಕಾಲಿಕೆಯಲ್ಲೂ ಪ್ರಕಟಿಸಿದ್ದೆ. ಈ ಲೇಖನ ಪ್ರಕಟವಾದ ನನ್ನ ಕೃತಿ ಆರೋಗ್ಯ ಸಿಂಚನಕ್ಕೆ 2014 ರಲ್ಲಿ ಅಕ್ಷರ ಪ್ರತಿಷ್ಠಾನ ಆಲದಪದವು ಇದರ “ಅಕ್ಷರ ಗೌರವ ಪುರಸ್ಕಾರವೂ ದೊರೆತಿದೆ”. ಇಲ್ಲಿ ಈ ಲೇಖನವನ್ನು ಸ್ವಲ್ಪ ಪರಿಷ್ಕರಿಸಿರುವೆ.
– ಇಸ್ಮತ್ ಪಜೀರ್

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group