ಮಾಹಿತಿ

ಗಲ್ಫ್ ಉದ್ಯೋಗ ಕಳೆದುಕೊಂಡು ನಿರಾಶೆಯಾಗಿದ್ದೀರಾ? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ

 ವರದಿಗಾರ-ಮಾಹಿತಿ: ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಹಲವು ಅನಿವಾಸಿ ಭಾರತೀಯರು, ಗಲ್ಫ್ ರಾಷ್ಟ್ರ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗ ಕಳೆದುಕೊಂಡ ಹಲವರು ಇದೀಗಾಗಲೇ ಊರಿಗೆ ಸೇರಿದ್ದು, ಉದ್ಯೋಗವಿಲ್ಲದೆ ಚಿಂತಿತರಾಗಿದ್ದಾರೆ. ಹಲವು ಯುವಕರು ಉದ್ಯೋಗ ಕಳೆದುಕೊಂಡು ವಿದೇಶದಲ್ಲೇ ಉಳಿದಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡು ಊರಿಗೂ ಹೋಗಲಾಗದೆ ಕಾನೂನಿನ ಮುಂದೆ ಅಲೆದಾಡುತ್ತಾ ದಿನ ಕಳೆಯುತ್ತಿದ್ದಾರೆ. ಹಲವು ಅನಿವಾಸಿ ಭಾರತೀಯ ಸಂಘಟನೆಗಳ ಸದಸ್ಯರು ಸಂಕಷ್ಟಕ್ಕೊಳಗಾದವರನ್ನು ಊರಿಗೆ ಕಳುಹಿಸಿಕೊಡುವಲ್ಲಿಯೂ ಯಶಸ್ವಿಯಾಗಿದ್ದಾರೆ.
 
ಊರಿನಲ್ಲಿದ್ದು ಉದ್ಯೋಗ ವಂಚಿತರಾಗಿರುವ ಯುವಕರಿಗೆ ಕರ್ನಾಟಕ ಸರಕಾರ ಒಂದು ಉತ್ತಮ ಯೋಜನೆಯನ್ನು ರೂಪಿಸಿದೆ. ತಮ್ಮ ಇಚ್ಚೆಯ ವ್ಯಾಪರನ್ನು ಮಾಡಿ, ಆರ್ಥಿಕ ಸಂಕಷ್ಟಗಳಿಂದ ಪಾರಾಗಿ, ತಮ್ಮ ಜೀವನವನ್ನು ಮುಂದುವರಿಸಿ ಸುಖ ಮತ್ತು ನೆಮ್ಮದಿಯಿಂದಿರಿ. ಯಾವುದೇ ಉದ್ಯಮಿಯು ಹುಟ್ಟುವಾಗಲೇ ಉದ್ಯಮಿಯಾಗಿ ಬಂದಿಲ್ಲ. ತನ್ನ ಕಠಿಣ ಪರಿಶ್ರಮದ ಪ್ರಯತ್ನದ ಫಲದಿಂದ ಉದ್ಯಮಿಯಾಗಿದ್ದಾನೆ. ಶ್ರಮ ವಹಿಸಿ, ಮುತುವರ್ಜಿ ವಹಿಸಿ… ನಿಮ್ಮ ಕನಸು ನಿಮ್ಮ ಬೆನ್ನ ಹಿಂದೆ ಬಂದು ನಿಲ್ಲುತ್ತೆ. ತಮ್ಮಲ್ಲಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ. ಯಶಸ್ಸು ಖಂಡಿತಾ ತಮ್ಮನ್ನು ಹುಡುಕಿಕೊಂಡು ಬರುತ್ತೆ. ಶುಭವಾಗಲಿ.
ಉದ್ಯೋಗ ವಂಚಿತರಾಗಿರುವ ಯುವಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ‘ವರದಿಗಾರ’ ವಿನಂತಿಸುತ್ತದೆ.
 

ಕರ್ನಾಟಕ ಸರಕಾರ 2017 ಮೇ 19ರಂದು ಬಿಡುಗಡೆಗೊಳಿಸಿದ ನಡವಳಿಕೆಯನ್ನು ಯತಾವತ್ತಾಗಿ ಕೆಳಗೆ ನೀಡಲಾಗಿದೆ:

 

———————————————————————————————————
ಕರ್ನಾಟಕ ಸರಕಾರದ ನಡವಳಿಗಳು:
ವಿಷಯ:- ಕೊಲ್ಲಿ ರಾಷ್ಟ್ರಗಳಿಂದ ಹಿಂತಿರುಗಿ ಉದ್ಯೋಗಾವಕಾಶ ವಂಚಿತರಾಗುವ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.
 
ಓದಲಾಗಿದೆ:-
1. 2017-18ನೇ ಸಾಲಿನ ಅಯವ್ಯಯ ಭಾಷಣದ ಕಂಡಿಕೆ 224
2. ವ್ಯವಸ್ಥಾಪಕ ನಿರ್ದೇಶಕರು, ಕೆ.ಎಂ.ಡಿ.ಸಿ. ಬೆಂಗಳೂರು ಇವರ ಪ್ರಸ್ತಾವನೆ ಸಂಖ್ಯೆ: ಕಅಅನಿ/ ಅಯವ್ಯ ಭಾಷಣ/ 05/ 2017/-18, ದಿನಾಂಕ: 07.04.2017
 
ಪ್ರಸ್ತಾವನೆ:-
ಸನ್ಮಾನ್ಯ ಮುಖ್ಯಮಂತ್ರಿಯವರು ಮೇಲೆ (1) ರಲ್ಲಿನ 2017-18ನೇ ಸಾಲಿನ ತಮ್ಮ ಅಯವ್ಯಯ ಭಾಷಣದ ಕಂಡಿಕೆ 224ರಲ್ಲಿ ಈ ಕೆಳಕಂಡಂತೆ ಘೋಷಿಸಿರುತ್ತಾರೆ.
“ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡಿ ಹಿಂತಿರುಗಿರುವ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಹೊಂದಲು ಕೇರಳ ಮಾದರಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು”.
ಕೊಲ್ಲಿ ರಾಷ್ಟ್ರಗಳಿಗೆ ರಾಜ್ಯದಿಂದ ಉದ್ಯೋಗ ಅರಸಿ ನಂತರ ಹಂತಿರುಗಿ ಬರುವ ಉದ್ಯೋಗಾವಕಾಶ ವಂಚಿತರಾದ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೊಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಹಾಗೂ ಆರ್ಥಿಕ ಸ್ಥಿತಿ ಉತ್ತಮ ಪಡಿಸಲು ಕೇರಳ ರಾಜ್ಯದ ಮಾದರಿಯಲ್ಲಿ ಯೋಜನೆಯನ್ನು ನಿಗಮದ ವತಿಯಿಂದ ಅನುಷ್ಠಾನಗೊಳಿಸಲು ಮೇಲೆ (2)ರಲ್ಲಿ ಓದಲಾದ ಪ್ರಸ್ತಾವನೆಯನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಬೆಂಗಳೂರು ಇವರು ಸರಕಾರಕ್ಕೆ ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
 
ಸರ್ಕಾರಿ ಆದೇಶ ಸಂಖ್ಯೆ: ಎಂಡಬ್ಲ್ಯೂಡಿ 58 ಎಂಡಿಸಿ2017, ಬೆಂಗಳೂರು, ದಿನಾಂಕ: 19.0.2017
 
ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ 2017-18ನೇ ಸಾಲಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರ ಆಯವ್ಯಯ ಭಾಷಣದ ಕಂಡಿಕೆ 224ರಲ್ಲಿ ಘೋಷಿಸಿರುವಂತೆ ಕೊಲ್ಲಿ ರಾಷ್ಟ್ರಗಳಿಂದ ಹಿಂತಿರುಗಿ ಬರುವ ಉದ್ಯೋಗಾವಕಾಶ ವಂಚಿತರಾದ ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಈ ಕೆಳಕಂಡಂತೆ ಸಾಲ ಸೌಲಭ್ಯವನ್ನು ಕಲ್ಪಿಸಲು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಬೆಂಗಳೂರು ಇವರ ವತಿಯಿಂದ ಯೋಜನೆಯನ್ನು 2017-18ನೇ ಸಾಲಿನಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಲು ಸರ್ಕಾರದ ಮಂಜೂರಾತಿಗಾಗಿ ಆದೇಶಿಸಲಾಗಿದೆ.
 
ಮಾರ್ಗಸೂಚಿಗಳು:-
1. ಈ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಫಲಾನುಭವಿಗಳಿಗೆ ಗರಿಷ್ಠ ರೂ.10.00 ಲಕ್ಷಗಳ ಸಾಲವನ್ನು ಶೇ.5% ರ ದರದಲ್ಲಿ ಕೊಲ್ಯಾಟರಲ್ ಭದ್ರತೆ (Collateral Security) ಯೊಂದಿಗೆ ನಿಗಮದಿಂದ ಸಾಲ ಸೌಲಭ್ಯವನ್ನು ಒದಗಿಸುವುದು.
2. ನಿಗಮದಿಂದ ಶೇ.90 ರಷ್ಟು ಸಾಲ ಮಂಜೂರು ಮಾಡಲಾಗುವುದು. ಇನ್ನುಳಿದ ಶೇ.10 ರಷ್ಟು ಮೊತ್ತವನ್ನು ಫಲಾನುಭವಿಯೇ ಭರಿಸತಕ್ಕದ್ದು.
3. ನಿಗಮದಿಂದ ಒದಗಿಸಲಾಗಿರುವ ಸಾಲವನ್ನು 7 ವರ್ಷಗಳೊಳಗೆ ಫಲಾನುಭವಿಯು ಸಮಾನ ಕಂತುಗಳಲ್ಲಿ ನಿಗದಿತ ಬಡ್ಡಿಯೊಂದಿಗೆ ಮರುಪಾವತಿಸತಕ್ಕದ್ದು.
4. 2017-18ನೇ ಸಾಲಿನಲ್ಲಿ ಒಟ್ಟು 33 ಫಲಾನುಭವಿಗಳಿಗೆ ಒಟ್ಟು ರೂ.330.00 ಲಕ್ಷಗಳ ಸಾಲ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ.
 
ಅರ್ಹತೆಗಳು:-
1. ಫಲಾನುಭವಿಗಳು ರಾಜ್ಯದ ಮತೀಯ ಅಲ್ಪಸಂಖ್ಯಾತರಾಗಿರತಕ್ಕದ್ದು.
2. ಫಲಾನುಭವಿಗಳು ರಾಜ್ಯದ ಖಾಯಂ ನಿವಾಸಿಯಾಗಿರತಕ್ಕದ್ದು.
3. ಫಲಾನುಭವಿಗಳ ವಯಸ್ಸು 18ರಿಂದ 45ವರ್ಷಗಳಾಗಿರತಕ್ಕದ್ದು.
4. ಕುಟುಂಬದ ವಾರ್ಷಿಕ ಆದಾಯ ಮಿತಿಯು ರೂ. 4.50ಲಕ್ಷಗಳಾಗಿರತಕ್ಕದ್ದು.
5. ಅಭ್ಯರ್ಥಿಯು Final exit ಆಗಿರುವ ಬಗ್ಗೆ Passport ಮತ್ತು Visa ಪ್ರತಿ ಒದಗಿಸತಕ್ಕದ್ದು.
 
ದಾಖಲೆಗಳು:-
1. ನಿಗದಿತ ನಮೂನೆಯಲ್ಲಿ ಅರ್ಜಿ.
2. ಫಲಾನುಭವಿಯ ಇತ್ತೀಚಿನ 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
3. ಜಾತಿ ಪ್ರಮಾಣ ಪತ್ರ.
4. ಆದಾಯ ಪ್ರಮಾಣ ಪತ್ರ.
5. ಪಡಿತರ ಚೀಟಿ/ ಮತದಾರ ಚೀಟಿ
6. ಆಧಾರ್ ಕಾರ್ಡ್.
7. ಫಲಾನುಭವಿಯು ತಾನು ಕೈಗೊಳ್ಳಲು ಉದ್ದೇಶಿಸಿರುವ ಆರ್ಥಿಕ ಚಟುವಟಿಕೆಯ ಬಗ್ಗೆ ಪ್ರಾಜೆಕ್ಟ್ ವರದಿ (Project Report) ಸಲ್ಲಿಸತಕ್ಕದ್ದು.
8. ಫಲಾನುಭವಿ ಅಥವಾ ಅವರ ಕುಟುಂಬ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರಕಾರದ ನೌಕರರಲ್ಲದ ಬಗ್ಗೆ ದೃಢೀಕರಣ ಪತ್ರ (Affidavit).
9. ಈ ಯೋಜನೆಯಡಿ ಪಡೆದ ಸಾಲ ಸೌಲಭ್ಯವನ್ನು ಯಾರಿಗೂ ಪರಭಾರೆ ಮಾಡದಿರುವ ಬಗ್ಗೆ ದೃಢೀಕರಣ ಪತ್ರ (Affidavit).
 
ಆಯ್ಕೆ ಸಮಿತಿ:-
1. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಧಿಕಾರಿ-ಅಧ್ಯಕ್ಷರು.
2. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ-ಉಪಾಧ್ಯಕ್ಷರು.
3. ಜಿಲ್ಲಾ ಜಂಟಿ ನಿರ್ದೇಶಕರು ವಾಣಿಜ್ಯ ಮತ್ತು ಕೈಗಾರಿಕೆ – ಸದಸ್ಯರು.
4. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ – ಸದಸ್ಯರು.
5. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು – ಸದಸ್ಯ ಕಾರ್ಯದರ್ಶಿ.
 
ಯೋಜನೆಯ ಅನುಷ್ಠಾನದ ವಿವಿಧ ಹಂತಗಳು:-
1. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ನಿಗಮವು ನಿಗಧಿತ ವೇಳಾಪಟ್ಟಿಯನ್ನು ಸಿದ್ಧಪಡಿಸಿ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳತಕ್ಕದ್ದು.
2. ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು, ಪ್ರಚಲಿತ ವಿದ್ಯನ್ಮಾನ ಪತ್ರಿಕೆಗಳಲ್ಲಿ ಅರ್ಜಿಗಳನ್ನು ಆಹ್ವಾನಿಸತಕ್ಕದ್ದು.
3. ಅರ್ಹ ಫಲಾನುಭವಿಗಳು ಈ ಯೋಜನೆಯಡಿ ಸೌಲಭ್ಯ ಪಡೆಯಲು ನಿಗಧಿಪಡಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು. ಇಲ್ಲವಾದಲ್ಲಿ ಅರ್ಜಿಗಳನ್ನು ಆಯ್ಕೆ ಸಮಿತಿಗೆ ಮಂಡಿಸಲಾಗುವುದಿಲ್ಲ.
4. ಸ್ವೀಕರಿಸಿದ ಅರ್ಹ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಸಮಿತಿಯ ಮುಂದೆ ಮಂಡಿಸತಕ್ಕದ್ದು.
5. ಈ ಎಲ್ಲಾ ಆಯ್ಕೆ ವಿಧಾನವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕರು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಅರ್ಹ ಸಹಾಯಧನವನ್ನು ಬಿಡುಗಡೆಗೊಳಿಸಲು ಕೇಂದ್ರ ಕಛೇರಿಗೆ ಅಂತಿಮ ಅರ್ಹ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಕಳುಹಿಸತಕ್ಕದ್ದು.
6. ನಿಗಮದಿಂದ ಬಿಡುಗಡೆ ಮಾಡಲಾದ ಸಹಾಧನವನ್ನು ನಿಗದಿತ ಉದ್ದೇಶಕ್ಕೆ ವಿನಿಯೋಗಿಸಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಖಚಿತಪಡಿಸಿಕೊಳ್ಳತಕ್ಕದ್ದು.
 
ಈ ಯೋಜನೆಯ ವೆಚ್ಚವನ್ನು 2017-18ನೇ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಲೆಕ್ಕ ಶೀರ್ಷಿಕೆ 4225-03-190-03 ರಲ್ಲಿ ಒದಗಿಸಲಾಗಿರುವ ಅನುದಾನದಿಂದ ಭರಿಸತಕ್ಕದ್ದು.
 
ಈ ಯೋಜನೆಯನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 253 ವೆಚ್ಚ-3/2017, ದಿನಾಂಕ 03.05.2017 ಹಾಗೂ ಯೋಜನಾ ಇಲಾಖೆಯ ಟಿಪ್ಪಣಿ ಸಂಕ್ಯೆ: ಪಿಡಿ 80 ಐಎಂಎಂ 2017, ದಿನಾಂಕ: 02.05.2017 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.
 
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ
(ಎಂ.ನಾಗರತ್ನ)
ಸರ್ಕಾರದ ಜಂಟಿ ಕಾರ್ಯದರ್ಶಿ,
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ,
———————————————————————————————————
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group