ವರದಿಗಾರ : ಈ ತಿಂಗಳ ಆದಿಯಲ್ಲಿ ನಡೆದ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ತನ್ನ ಹುಟ್ಟುಹಬ್ಬವನ್ನು ಮುಂಬೈನ ಪ್ರವಾಸಿ ತಾಣ ಅಲಿ ಬಾಗಿನಲ್ಲಿ ಭರ್ಜರಿಯಾಗಿ ಆಚರಿಸಿದ್ದರು. ಅದರ ರಂಗು ರಂಗಿನ ಫೋಟೋಗಳನ್ನು ನೋಡಿದವರು ತಾವೂ ಅದರಲ್ಲಿ ಭಾಗಿಯಾಗಿದ್ದರೇ ಎಂದೊಮ್ಮೆ ಯೋಚಿಸಿದ್ದುಂಟು. ಏಕೆಂದರೆ ಹುಟ್ಟುಹಬ್ಬದ ಸಂತೋಷಕೂಟ ಅಷ್ಟೊಂದು ವ್ಯವಸ್ಥಿತವಾಗಿ ನಡೆದಿತ್ತು. ಎಲ್ಲರೂ ಸಂತೋಷದೊಂದಿಗೆ ವಾಪಾಸ್ ಬಂದರೆ ಶಾರೂಖ್ ಖಾನ್ ಮಾತ್ರ ತನ್ನದೇ ಹುಟ್ಟುಹಬ್ಬದ ದಿನ ಅಲಿ ಬಾಗಿನ ಎಂ ಎಲ್ ಸಿ ಜಯಂತ್ ಪಾಟೀಲ್ ಜೊತೆ ವಾಗ್ವಾದ ನಡೆಸಿದ್ದಾರೆಂದು ತಿಳಿದು ಬಂದಿದೆ.
ನಡೆದದ್ದೇನು?
ಶಾರೂಖ್ ಖಾನ್ ಹುಟ್ಟುಹಬ್ಬ ಮುಗಿಸಿ ತನ್ನ ವಿಹಾರ ನೌಕೆಯಲ್ಲಿ ವಾಪಾಸ್ ಮುಂಬೈಗೆ ಬರುತ್ತಿದ್ದಾಗ, ಅಲಿಬಾಗಿನ ಶಾಸಕರಾಗಿರುವ ಜಯಂತ್ ಪಾಟೀಲ್ ಕೊಲಾಬಾದ ರಾಯಿಗಡದಲ್ಲಿರುವ ತನ್ನ ನಿವಾಸಕ್ಕೆ ಅದೇ ದಕ್ಕೆಯ ಮೂಲಕ ತನ್ನ ಬೋಟ್ ಹತ್ತಲು ಬಂದಿದ್ದರು. ಆದರೆ ಶಾರೂಖ್ ಖಾನ್ ತೀರದಲ್ಲಿದ್ದ ತನ್ನ ಅಪಾರ ಅಭಿಮಾನಿಗಳನ್ನು ಎದುರಿಸುವುದನ್ನು ತಪ್ಪಿಸಲು ತನ್ನ ನೌಕೆಯಲ್ಲೇ ಇದ್ದು, ಕೆಲವು ನಿಮಿಷಗಳಷ್ಟು ಕಾಲ ಹೊರ ಬರಲೇ ಇಲ್ಲ. ಈ ವೇಳೆ ಶಾಸಕ ಜಯಂತ್ ಪಾಟೀಲ್’ಗೆ ಶಾರೂಖ್ ಅಲ್ಲಿಂದ ಹೊರ ಬರದೇ ತನ್ನ ನೌಕೆ ಹತ್ತಲು ಸಾಧ್ಯವಿರಲಿಲ್ಲ. ಕೆಲ ಸಮಯ ಕಾದ ಜಯಂತ್ ಪಾಟೀಲ್, ನಿಯಂತ್ರಣ ಕಳಕೊಂಡು ಜೋರು ದನಿಯಲ್ಲಿ ಶಾರೂಖ್ ಖಾನ್’ರೊಂದಿಗೆ, ನೀವೊಬ್ಬ ಸೂಪರ್ ಸ್ಟಾರ್ ಆಗಿರಬಹುದು, ಆದರೆ ಅಲಿ ಬಾಗಿನ ಒಡೆಯನಲ್ಲವೆಂಬುವುದನ್ನು ನೆನಪಿಡಬೇಕೆಂದು ಹೇಳಿದ್ದಾರೆ. ಈ ವೇಳೆ ಶಾರೂಖ್ ಏನೊಂದು ಮಾತನಾಡದೆ ತನ್ನ ನೌಕೆಯೊಳಗಡೆ ಇದ್ದರು. ಜಯಂತ್ ಪಾಟೀಲ್ ಹೋದ ನಂತರವಷ್ಟೆ ಶಾರೂಖ್ ಹೊರ ಬಂದಿದ್ದಾರೆ. ಇದರ ವೀಡಿಯೋ ಕೂಡ ಈಗ ಹೊರಬಂದಿದೆ.
