ವರದಿಗಾರ: ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರವು 500,1000 ರೂಪಾಯಿ ಮುಖ ಬೆಲೆಯ ನೋಟು ನಿಷೇಧಗೊಳಿಸಿ ನಾಳೆಗೆ ಒಂದು ವರ್ಷ ಪೂರೈಸುತ್ತಿದೆ. ಕೇಂದ್ರ ಸರಕಾರದ ನಡೆದ ವಿರುದ್ಧ ಮತ್ತೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಇದೊಂದು ಅತ್ಯಂತ ಬೇಜವಾಬ್ದಾರಿ ನಿರ್ಧಾರ ಮತ್ತು ಸಂಘಟಿತ ಲೂಟಿ ಎಂದು ಮನಮೋಹನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೋಟು ನಿಷೇಧವು ಆರ್ಥಿಕತೆ, ಪ್ರಜಾಪ್ರಭುತ್ವಕ್ಕೆ ಕಪ್ಪು ದಿನವಾಗಿತ್ತು ಎಂದು ಅವರು ಹೇಳಿದ್ದಾರೆ.
ಗುಜರಾತಿನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದರಿಂದ ಗುಜರಾತ್ ಪ್ರವಾಸ ಕೈಗೊಂಡಿರುವ ಮನಮೋಹನ್ ಸಿಂಗ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯೀಕರಣದ ಯಾವ ಉದ್ದೇಶವೂ ಈಡೇರಿಲ್ಲ. ಅದಲ್ಲದೇ ದೇಶಾದ್ಯಂತ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆಯು ಸಣ್ಣ ವ್ಯಾಪಾರಿಗಳಿಗೆ ದುಸ್ವಪ್ನವಾಗಿವೆ ಎಂದು ಅವರು ಟೀಕಿಸಿದ್ದಾರೆ.
