ವರದಿಗಾರ : ಬಿಹಾರದ ಬಿಜೆಪಿಯ ರಾಜ್ಯಸಭಾ ಸಂಸದ ಮತ್ತು ರಾಜ್ಯಸಭೆಯ ಶ್ರೀಮಂತ ಸದಸ್ಯರಲ್ಲೋರ್ವನಾಗಿರುವ ಅರ್ ಕೆ ಸಿನ್ಹಾರವರ ಒಡೆತನದ ಎಸ್ ಐ ಎಸ್ ಕಂಪನಿಯು ವಿದೇಶಗಳಲ್ಲೂ ತನ್ನೆರಡು ಘಟಕಗಳನ್ನು ಹೊಂದಿರುವ ಕುರಿತಂತೆ ಇತ್ತೀಚೆಗೆ ಸೋರಿಕೆಯಾಗಿರುವ ‘ಪ್ಯಾರಡೈಸ್ ಪೇಪರ್’ ಹಗರಣಗಳ ದಾಖಲೆಗಳಲ್ಲಿ ನಮೂದಾಗಿದೆ. ಈ ಕುರಿತು ಸಂಸದ ಆರ್ ಕೆ ಸಿನ್ಹಾರವರ ಪ್ರತಿಕ್ರಿಯೆಗಾಗಿ ಮಾಧ್ಯಮ ಪ್ರತಿನಿಧಿಗಳು ಅವರನ್ನು ಸಂಪರ್ಕಿಸಿದಾಗ, ತನ್ನ ಕಾರಿನೊಳಗಡೆಯಿಂದಲೇ ಏನೂ ಮಾತನಾಡದೆ, ಪತ್ರಕರ್ತರಿಂದಲೇ ಪೆನ್ನನ್ನು ಪಡೆದು ಒಂದು ಚೀಟಿಯಲ್ಲಿ “ನಾನು 7 ದಿನಗಳಿಂದ ಭಾಗವತ ಯಜ್ಞದಲ್ಲಿದ್ದು, ಮೌನವೃತವನ್ನಾಚರಿಸುತ್ತಿದ್ದೇನೆ” ಎಂದು ಬರೆದು ಪತ್ರಕರ್ತರಿಗೆ ತೋರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು, ಜನರು ವ್ಯಂಗ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ವೀಡಿಯೋ ವೀಕ್ಷಿಸಿ
ನವಂಬರ್ 8 ನ್ನು ಕಪ್ಪು ಹಣ ವಿರೋಧಿ ದಿನವನ್ನಾಗಿ ಆಚರಿಸುವಂತೆ ಕರೆ ನೀಡಿರುವ ಮೋದಿಯವರ ನಿರ್ಧಾರ ಹೊರ ಬರುತ್ತಿದ್ದಂತೆಯೇ ಈ ‘ಪ್ಯಾರಡೈಸ್ ದಾಖಲೆಗಳ ಪಟ್ಟಿ ಹೊರಬಂದಿದ್ದು, ಅದರಲ್ಲಿ ಬಿಜೆಪಿ ಸಮ್ಸದ ಆರ್ ಕೆ ಸಿನ್ಹಾರವರ ಕಂಪನಿಯೂ ಸೇರಿದ್ದು ಆಡಳಿತಾರೂಡ ಕೇಂದ್ರ ಸರಕಾರಕ್ಕೆ ಗಂಟಲ ಮುಳ್ಳಾಗಿ ಪರಿಣಮಿಸಿದೆ ಎನ್ನಲಾಗಿದೆ.
ಕಳೆದ ವರ್ಷ ‘ಪನಾಮ ಪೇಪರ್ ಸೋರಿಕೆ”ಯ ರೀತಿಯಲ್ಲೇ ಈ ಬಾರಿಯೂ ಕಾರ್ಪೊರೇಟ್ ಕಂಪನಿಗಳ ಹಣಕಾಸು ವ್ಯವಹಾರಗಳ ಕುರಿತಂತೆ ಬೆಳಕು ಚೆಲ್ಲುವ ಈ ‘ಪ್ಯಾರಡೈಸ್ ಸೋರಿಕೆ’ ಹೊರಬಂದಿದೆ. ಇದು ಜಾಗತಿಕ ಕಾರ್ಪೊರೇಟ್ ಕಂಪನಿಗಳು ಮುಚ್ಚಿಟ್ಟ ಹಲವು ಗೌಪ್ಯ ಸಂಗತಿಗಳ ಕುರಿತಂತೆ ಬೆಳಕು ಚೆಲ್ಲಿದ್ದು, ಕಾರ್ಪೊರೇಟ್ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ಆರ್ ಕೆ ಸಿನ್ಹಾರವರು 2014 ರಲ್ಲಿ ಬಿಹಾರದಿಂದ ರಾಜ್ಯಸಭಾ ಚುನಾವಣೆಗೆ ಆಯ್ಕೆಯಾಗಿದ್ದಾಗ, ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿದವಿಟ್’ನಲ್ಲಿ, ತಾನು ಶೇರುದಾರನಾಗಿರುವ ಹಾಗೂ ತನ್ನ ಪತ್ನಿ ರೀಟಾ ಕಿಶೋರ್ ನಿರ್ದೇಶಕಿಯಾಗಿರುವ ಈ ವಿದೇಶಿ ಕಂಪನಿಯೊಂದಿಗೆ ತನಗಿರುವ ಸಂಬಂಧಗಳನ್ನು ಉಲ್ಲೇಖಿಸಿರಲಿಲ್ಲವೆಂಬುವುದು ಇಲ್ಲಿ ಗಮನೀಯ ಅಂಶವಾಗಿದೆ. ರಾಜ್ಯಸಭೆಗೆ ಆಯ್ಕೆಯಾದ ನಂತರವೂ ಸದನಕ್ಕೆ ಈ ಕುರಿತು ಮನವರಿಕೆ ಮಾಡಲಿಲ್ಲವೆನ್ನಲಾಗಿದೆ.
