ವರದಿಗಾರ :ಭಯಾನಕ ಘಟನೆಯೊಂದರಲ್ಲಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಗರದ ಹೃದಯ ಭಾಗದಲ್ಲೇ 19 ವರ್ಷ ವಯಸ್ಸಿನ ಲೋಕಸೇವಾ ಅಯೋಗದ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ದುಷ್ಕರ್ಮಿಗಳು ಮೂರು ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಇದರ ಕುರಿತು ದೂರು ನೀಡಲು ಹೋದ ಸಂತ್ರಸ್ತೆಯನ್ನು ಪೊಲೀಸರು, ‘ ಸಿನಿಮೀಯ ಮಾದರಿಯಲ್ಲಿ ನೀನು ಬಹಳ ಚೆನ್ನಾಗಿ ಕಥೆ ಕಟ್ಟಿದ್ದೀಯಾ’ ಎಂದು ಅಣಕವಾಡಿದ ಘಟನೆ ವರದಿಯಾಗಿದೆ.
ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ತನ್ನ ಪರೀಕ್ಷಾ ತರಬೇತಿ ಕೇಂದ್ರದಿಂದ ವಾಪಸ್ ಮನೆಗೆ ಬರುತ್ತಿದ್ದಾಗ ಸಂಜೆ ಸುಮಾರು ಏಳು ಗಂಟೆಯ ವೇಳೆಗೆ ಆರೋಪಿಗಳಲ್ಲೊಬ್ಬನಾದ ಗೋಲು ಬಿಹಾರಿ ಎನ್ನುವಾತ ಅವಳನ್ನು ಏಕಾಂತ ಸ್ಥಳಕ್ಕೆ ಎಳೆದೊಯ್ದಿದ್ದಾನೆ. ಗೋಲು ಬಿಹಾರಿ ತನ್ನ ಸ್ವಂತ ಮಗಳನ್ನೇ ಕೊಲೆ ಮಾಡಿದ ಆರೋಪದ ಮೇಲೆ ಜೈಲುಪಾಲಾಗಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ತನ್ನ ಅಳಿಯನಾದ ಅಮರ್ ಘುಂಟು ಎನ್ನುವಾತನಿಗೆ ಕರೆ ಮಾಡಿ ಘಟನಾ ಸ್ಥಳಕ್ಕೆ ಬರುವಂತೆ ಹೇಳಿದ ಗೋಲು ಬಿಹಾರಿ, ಇಬ್ಬರು ಕಿರಾತಕರು ಸೇರಿ ಮೂರು ಗಂಟೆಗಳಷ್ಟು ಕಾಲ ತಮ್ಮ ದುಷ್ಕೃತ್ಯ ನಡೆಸಿದ್ದಾರೆ. ಅಚ್ಚರಿಯೆಂದರೆ ದುಷ್ಕರ್ಮಿಗಳೊಬ್ಬ ತಮ್ಮ ಕೃತ್ಯದ ಮಧ್ಯೆ ಚಾ ಮತ್ತು ಸಿಗರೇಟು ತರಲು ಬಿಡುವು ಮಾಡಿ ಹೋಗಿರುವುದಾಗಿದೆ.
ರಾತ್ರಿ ಹತ್ತು ಗಂಟೆಯ ವೇಳೆಗೆ ಸಂತ್ರಸ್ತೆ ತನ್ನ ಪೋಷಕರಿಗೆ ಕರೆ ಮಾಡಿ ಘಟನೆಯ ಕುರಿತು ತಿಳಿಸಿದ್ದಾಳೆ. ಆಕೆಯ ತಂದೆ ರೈಲ್ವೇ ಸುರಕ್ಷಾ ದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಪೋಷಕರೊಂದಿಗೆ ಎಂಪಿ ನಗರ ಪೊಲೀಸ್ ಠಾಣೆಗೆ ತೆರಳಿ ಘಟನೆಯ ಕುರಿತು ವಿವರಿಸಿದಾಗ ಅವರು ಹಬೀಬ್ ಗಂಜ್ ಠಾಣೆಗೆ ದೂರು ಸಲ್ಲಿಸುವಂತೆ ತಿಳಿಸಿದ್ದಾರೆ. ಅದರಂತೆ ಅಲ್ಲಿಗೆ ತೆರಳಿದಾಗ ಪೇದೆಯೋರ್ವ ಸಂತ್ರಸ್ತೆಯೊಂದಿಗೆ ‘ಸಿನಿಮೀಯ ಮಾದರಿಯಲ್ಲಿ ಬಹಳ ಚೆನ್ನಾಗಿ ಕಥೆ ಕಟ್ಟಿದ್ದೀಯ’ ಎಂದು ಅಣಕವಾಡಿದ್ದಾನೆ ಎಂದು ತಿಳಿದು ಬಂದಿದೆ.
ಸಂತ್ರಸ್ತೆಯ ಕುಟುಂಬದ ಸದಸ್ಯರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯಪ್ರದೇಶ ಸರಕಾರ ಸಂತ್ರಸ್ತೆಯ ದೂರನ್ನು ಅವಗಣಿಸಿದ ಇಬ್ಬರು ಪೊಲೀಸರನ್ನು ಅಮಾನತು ಮಾಡಿದ್ದು, ಓರ್ವ ಹಿರಿಯ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಿದೆ
