ವರದಿಗಾರ : ಚಾಮರಾಜನಗರ ಎಸ್ ಡಿ ಪಿ ಐ ಮತ್ತು ಇತರೆ ಕನ್ನಡ ಪರ ಹೋರಾಟಗಾರರು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಆಚರಣೆಗೆ ಚಾಮರಾಜನಗರ ಡಿವೈಎಸ್ಪಿ ತಡೆಯೊಡ್ಡಿದ್ದು ಮಾತ್ರವಲ್ಲ ನಿಮಗೊಂದು ಗತಿ ಕಾಣಿಸ್ತೀನಿ ಎಂದು ಬೆದರಿಸಿದ್ದಾರೆ ಎಂದು ಕನ್ನಡ ಪರ ಹೋರಾಟಗಾರರು ಆರೋಪಿಸಿದ್ದಾರೆ. ರಾಜ್ಯೋತ್ಸವ ಆಚರಣೆಗೆ ಮುಂದಾದ ಹೋರಾಟಗಾರರನ್ನು ಬಂಧಿಸಿದ ಘಟನೆಯೂ ವರದಿಯಾಗಿದೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸರು ಬಂಧಿಸಿ ಕರೆದುಕೊಂಡು ಹೋಗುತ್ತಿರುವಾಗ ಪೊಲೀಸ್ ವಾಹನದಲ್ಲೇ ಈ ಕುರಿತು ವೀಡಿಯೋ ಒಂದರಲ್ಲಿ ಘಟನೆಯ ಕುರಿತು ವಿವರಿಸಿದ ಚಾಮರಾಜನಗರದ ಹೋರಾಟಗಾರ ಅಬ್ರಾರ್ ಅಹ್ಮದ್, ರಾಜ್ಯೋತ್ಸವ ಆಚರಣೆಗೆ ಮುಂದಾದ ನಮ್ಮನ್ನು ಪೊಲೀಸರು ಅವಾಚ್ಯವಾಗಿ ನಿಂದಿಸಿ, ನಿನಗೊಂದು ಗತಿ ಕಾಣಿಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಏಕೆ, ಮುಸ್ಲಿಮರು ರಾಜ್ಯೋತ್ಸವ ಆಚರಿಸುವುದು ತಪ್ಪೇ?” ಎಂದವರು ಪ್ರಶ್ನಿಸಿದ್ದಾರೆ.
ಈ ಕುರಿತು ಅಬ್ರಾರ್ ಅಹ್ಮದ್’ರವರಲ್ಲಿ “ವರದಿಗಾರ” ತಂಡ ಮಾತನಾಡಿಸಿದಾಗ, ಕನ್ನಡ ರಾಜ್ಯೋತ್ಸವವನ್ನು ಧ್ವಜಾರೋಹಣ ಮಾಡಿ, ಬೈಕ್ ರಾಲಿ ನಡೆಸಿ ಆಚರಿಸುವುದೆಂದು ತೀರ್ಮಾನಿಸಿದ್ದೆವು. ಆದರೆ ಕೊನೆ ಕ್ಷಣದಲ್ಲಿ ಪೊಲೀಸರ ವಿನಂತಿಯ ಪ್ರಕಾರ ಬೈಕ್ ರಾಲಿಯನ್ನು ಕೈಬಿಟ್ಟು, ನಮ್ಮ ಕಛೇರಿಯಲ್ಲಿ ಧ್ವಜಾರೋಹಣ ಮಾಡಿ, ಚಾಮರಾಜನಗರದ ಶಾಸಕರು ಭಾಗವಹಿಸಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಸಾಗುತ್ತಿದ್ದಾಗ ದಾರಿ ಮಧ್ಯೆ ನಮ್ಮವರನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆಂದು ಅವರು ತಿಳಿಸಿದ್ದಾರೆ. ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಕೂಡಲೇ ಇದರ ವಿರುದ್ಧ ಹೋರಾಟವನ್ನು ಮಾಡಲಿದ್ದೇವೆಂದು ಅವರು ಇದೇ ವೇಳೆ ತಿಳಿಸಿದ್ದಾರೆ.
