ವರದಿಗಾರ : ಜೆಟ್ ಏರ್’ವೇಸ್ ವಿಮಾನ ಅಪಹರಣದ “ನಾಟಕ” ವಾಡಿದ್ದ ಗುಜರಾತ್ ಮೂಲದ ಮುಂಬೈ ಆಭರಣ ಉದ್ಯಮಿ ಬ್ರಿಜ್ ಕಿಶೋರ್ ಸಲ್ಲಾ, ಅಪಹರಣಕಾರನೋರ್ವ ಮುಸ್ಲಿಮನೆಂದು ಬಿಂಬಿಸಿಕೊಳ್ಳಲು ಗೂಗ್ಲ್ ಭಾಷಾಂತರವನ್ನು ಉಪಯೋಗಿಸಿದ್ದನೆಂಬ ಆತಂಕಕಾರಿ ವಿಚಾರ ಈಗ ಬಯಲಾಗಿದೆ.
ಮುಂಬೈ-ದೆಹಲಿ ನಡುವಿನ ಜೆಟ್ ಏರ್’ವೇಸ್ ವಿಮಾನದ ಶೌಚಾಲಯದಲ್ಲಿ ಪತ್ತೆಯಾದ ಚೀಟಿ ಒಂದರಲ್ಲಿ, ಈ ವಿಮಾನದಲ್ಲಿ ಅಪಹರಣಕಾರರಿದ್ದಾರೆ ಮತ್ತು ಅವರಲ್ಲಿ ಬಾಂಬ್ ಇದೆಯೆಂಬ ಸಂದೇಶ ಇಂಗ್ಲೀಷ್ ಮತ್ತು ಉರ್ದುವಿನಲ್ಲಿ ಬರೆದಿತ್ತು. ವಿಮಾನ ಕೂಡಲೇ ಅಹ್ಮದಾಬಾದಿನಲ್ಲಿ ತುರ್ತು ಭೂಸ್ಪರ್ಶಗೈದಿತ್ತು. ವಿಮಾನದಲ್ಲಿ ಒಟ್ಟು 122 ಜನ ಪ್ರಯಾಣಿಕರಿದ್ದರು.
“ವಿಮಾನದಲ್ಲಿ ಒಟ್ಟು 12 ಜನ ಅಪಹರಣಕಾರರಿದ್ದಾರೆ. ವಿಮಾನವನ್ನು ಪಾಕ್ ಅಕ್ರಮಿತ ಕಾಶ್ಮೀರಕ್ಕೆ ಕೊಂಡೊಯ್ಯಬೇಕು. ದೆಹಲಿಯಲ್ಲೇನಾದರೂ ಇಳಿಸಲು ಲ್ಯಾಂಡಿಂಗ್ ಗೇರ್ ಅದುಮಿದಲ್ಲಿ ಕಾರ್ಗೋ ವಿಭಾಗದಲ್ಲಿ ಅಡಗಿಸಿಟ್ಟಿರುವ ಬಾಂಬ್ ಸಿಡಿಯುತ್ತೆ” ಎಂದು ಬ್ರಿಜ್ ಕಿಶೋರ್ ಚೀಟಿಯಲ್ಲಿ ಬರೆದಿದ್ದ. ಇದರ ಉರ್ದು ಭಾಷಾಂತರಕ್ಕಾಗಿ ಆತ ಗೂಗ್ಲ್ ಟ್ರಾನ್ಸ್ಲೇಟರ್ ಉಪಯೋಗಿಸಿ, ಚೀಟಿಯ ಕೊನೆಯಲ್ಲಿ ‘ಅಲ್ಲಾಹು ದೊಡ್ಡವನು’ ಎಂದು ಬರೆದಿದ್ದ. ಅಪಹರಣಕಾರರು ಮುಸ್ಲಿಮರಾಗಿದ್ದಾರೆ ಎಂದು ಹೊರ ಜಗತ್ತಿಗೆ ತೋರಿಸಿಕೊಳ್ಳುವ ಉದ್ದೇಶ ಆತ ಹೊಂದಿದ್ದ ಎಂಬುವುದು ಇದರಿಂದ ಸ್ಪಷ್ಟವಾಗುತ್ತಿದೆ.
ಇಷ್ಟೊಂದು ವ್ಯವಸ್ಥಿತವಾಗಿ ಯೋಜನೆ ರೂಪಿಸಿದ್ದ ಬ್ರಿಜ್ ಕಿಶೋರ್ ಬಂಧನದ ನಂತರ ಮಾತ್ರ, ತಾನು ಜೆಟ್ ಏರ್’ವೇಸ್’ನಲ್ಲಿ ಉದ್ಯೋಗದಲ್ಲಿರುವ ತನ್ನ ಗೆಳತಿಯನ್ನು ಅಲ್ಲಿಂದ ಕೆಲಸ ಬಿಡಿಸುವ ಪ್ರಯತ್ನ ಇದಾಗಿದ್ದು ಎಂದು ಹೇಳಿಕೊಂಡಿದ್ದಾನೆ. ಆದರೆ ಪೊಲೀಸರ ಸೂಕ್ತ ತನಿಖೆಯಲ್ಲಿ ಮಾತ್ರ ಸತ್ಯಾಂಶ ಹೊರಬರಬೇಕಾಗಿದೆ
