▪ರಾಜ್ಯದಲ್ಲಿ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ
ವರದಿಗಾರ: ಪ್ರಧಾನಿ ನರೇಂದ್ರ ಮೋದಿಗೆ ನನ್ನನ್ನು ಕಂಡರೆ ಭಯವೆಂದು ಸಿದ್ದರಾಮಯ್ಯ ಹೇಳಿರುವುದು ಮೂರ್ಖತನದ ಪರಮಾವಧಿ. ಮುಖ್ಯಮಂತ್ರಿಯಾಗಿ ಈ ರೀತಿ ಹೇಳಿಕೆ ನೀಡುವುದು ಶೋಭೆಯಲ್ಲ ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಅವರು ತುಮಕೂರಿನ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದು, ಸೊಕ್ಕಿನಿಂದ ಮೆರೆಯುತಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಲುಬಿಲ್ಲದ ನಾಲಿಗೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾರೆ. ಅವರು ತಮ್ಮ ಮಾತಿನ ಮೇಲೆ ನಿಗಾ ವಹಿಸಬೇಕು. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ನೀಡುವ ಹೇಳಿಕೆಗಳ ಬಗ್ಗೆ ಎಚ್ಚರ ವಹಿಸಬೇಕೆಂದು ಇದೇ ಸಂದರ್ಭ ಸಿದ್ದರಾಮಯ್ಯರಿಗೆ ಕಿವಿಮಾತು ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ಧರ್ಮಸ್ಥಳಕ್ಕೆ ಭೇಟಿ ಸಂದರ್ಭ ಉಪವಾಸ ಮಾಡಿದ್ದರು. ಆದರೆ, ಸಿದ್ದರಾಮಯ್ಯನವರು ಮೀನು, ಕೋಳಿ ತಿಂದು ಶ್ರೀ ಕ್ಷೇತ್ರಕ್ಕೆ ಹೋಗಿ ಪೂಜೆ ಸಲ್ಲಿಸಿ ಭಕ್ತರಿಗೆ ಅಪಮಾನ ಮಾಡಿದ್ದಾರೆ. ರಾಜ್ಯಕ್ಕೆ ಇಂತಹ ಕೆಟ್ಟ ಮುಖ್ಯಮಂತ್ರಿ ಇದ್ದಾರಲ್ಲ ಎಂದು ನೋವಾಗುತ್ತಿದೆ ಎಂದು ಹೇಳಿದ್ದಾರೆ.
