ವರದಿಗಾರ-ರಾಯ್ಬರೇಲಿ:ಕಾಂಗ್ರೆಸ್ ಅಧ್ಯಕ್ಷೆ ‘ಸೋನಿಯಾ ಗಾಂಧಿ ನಾಪತ್ತೆ’ಯಾಗಿದ್ದಾರೆ ಎಂಬ ಭಿತ್ತಿಪತ್ರಗಳು ಅವರು ಪ್ರತಿನಿಧಿಸುತ್ತಿರುವ ಲೋಕಸಭಾ ಕ್ಷೇತ್ರ ರಾಯ್ಬರೇಲಿಯ ಹಲವೆಡೆ ಮಂಗಳವಾರ ರಾರಾಜಿಸಿದೆ.
ರಾಯ್ಬರೇಲಿಯ ಮಹಾನಂದಪುರ, ಗೋರಾ ಬಜಾರ್ ಮತ್ತು ಸರ್ಕಾರಿ ಕಾಲೋನಿಯಲ್ಲಿ ‘ಸೋನಿಯಾ ಗಾಂಧಿಯನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು’ ಎಂದು ಭಿತ್ತಿಪತ್ರಗಳಲ್ಲಿ ಘೋಷಿಸಲಾಗಿದೆ.
ರಾರಾಜಿಸಿದ ಭಿತ್ತಿಪತ್ರದ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ಇದು ಆರ್ಎಸ್ಎಸ್ ಮತ್ತು ಬಿಜೆಪಿ ಪಕ್ಷದ ಕೃತ್ಯವೆಂದು ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಅವರು ಈ ವರ್ಷ ಒಮ್ಮೆಯೂ ರಾಯ್ ಬರೇಲಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಲೋಕಸಭಾ ಕ್ಷೇತ್ರ ಅಮೇಠಿಗೆ ಫೆಬ್ರವರಿಯಿಂದ ಇದುವರೆಗೂ ಭೇಟಿ ನೀಡಿಲ್ಲ. ಇದರಿಂದ ಬೇಸತ್ತ ಸ್ಥಳೀಯರು ‘ಸೋನಿಯಾ ನಾಪತ್ತೆಯಾಗಿದ್ದಾರೆ’ ಎಂಬ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎನ್ನಲಾಗಿದೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರಕ್ಕೆ ಭೇಟಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
