ಮಾಹಿತಿ

ಮಕ್ಕಳಿಗೆ ಕಲಿಸುವುದೆಂದರೆ ಹುಡುಗಾಟವಲ್ಲ:ನಿಮ್ಮ ಮಕ್ಕಳಿಗೆ ಉಪಯುಕ್ತವಾಗುವ ಮಾಹಿತಿ

-ಯೋಗೇಶ್ ಮಾಸ್ಟರ್

ಯಾವುದೇ ಮಗುವು ಯಾವುದಾದರೂ ವಿಷಯದ ಕಲಿಕೆಯಲ್ಲಿ ಅನುತ್ತೀರ್ಣವಾದರೆ ಅದಕ್ಕೆ ಕಾರಣ ಅದಕ್ಕಿರುವಂತಹ ಬುದ್ಧಿಮತ್ತೆಯ ಕೊರತೆ ಎಂದು ತಪ್ಪಾಗಿ ಬಹಳಷ್ಟು ಜನ ತಿಳಿದಿದ್ದಾರೆ. ಇದು ಸರಿಯಲ್ಲ ಮತ್ತು ನಿಜವೂ ಅಲ್ಲ. ಮಗುವಿಗೆ ನೀಡಬೇಕಾದ ತರಬೇತಿಯ ಕೊರತೆ ಮತ್ತು ಅದಕ್ಕೆ ಎಲ್ಲಿ ಸಮಸ್ಯೆ ಇದೆಯೋ ಅಲ್ಲಿಂದ ಸಮಸ್ಯೆ ಬಗೆಹರಿಸುತ್ತಾ, ವಿಷಯವನ್ನು ಸರಳಗೊಳಿಸದಿರುವುದೇ ಆ ಮಗುವಿನ ಅನುತ್ತೀರ್ಣಕ್ಕೆ ಕಾರಣವಿರುತ್ತದೆ.

ಮಕ್ಕಳಿಗೆ ಯಾವ ವಿಶೇಷ ಶಕ್ತಿಗಳೂ ಇರುವುದಿಲ್ಲ.

ಮಕ್ಕಳಿಗೆ ಸ್ವಾಭಾವಿಕವಾಗಿಯೇ ಕೆಲವು ವಿಶೇಷ ಶಕ್ತಿಗಳಿದ್ದು ಅವುಗಳನ್ನು ಗಮನಿಸಿಕೊಂಡು ಅವುಗಳ ಪ್ರಕಾರ ಶಿಕ್ಷಣವನ್ನು ನೀಡಬೇಕು ಮತ್ತು ಕಲಿಕೆಯಲ್ಲಿ ತೊಡಗಿಸಬೇಕು ಎಂದು ಬಹಳಷ್ಟು ಜನರು ನಂಬುತ್ತಾರೆ. ಆದರೆ ಓದುವ ಬರೆಯುವ ಮತ್ತು ಭಾಷೆಗಳ ವಿಷಯಗಳಲ್ಲಿ ಈ ಬಗೆಯ ಶಕ್ತಿಗಳೇನೂ ಇರುವುದಿಲ್ಲ. ಆದರೆ ಅವರಲ್ಲಿ ಇರುವಂತಹ ವಿಶೇಷ ಆಸಕ್ತಿಗಳನ್ನು ಗಮನಿಸಬಹುದು. ಅದರ ಪ್ರಕಾರ ಅವರ ಆಸಕ್ತಿಯ ವಿಷಯವನ್ನು ಗಟ್ಟಿಗೊಳಿಸುವಂತಹ ವಿಚಾರಗಳನ್ನು ಮತ್ತು ಮಾಹಿತಿಗಳನ್ನು ಒದಗಿಸಬೇಕು. ಅದರ ಕುರಿತಾಗಿ ಕೌಶಲ್ಯವನ್ನು ಗಟ್ಟಿಗೊಳಿಸುವಂತಹ ತರಬೇತಿಗಳನ್ನು ನೀಡಬೇಕು. ಎಷ್ಟೋ ಮಕ್ಕಳು ತಮ್ಮ ಸುತ್ತಲೂ ಓದುವ ಬರೆಯುವ ಅಥವಾ ವಿದ್ಯಾವಂತರ ಬಳಗವಿದ್ದರೂ ಅವುಗಳನ್ನು ಅವರನ್ನು ಪ್ರಭಾವಿಸದಿದ್ದರೆ ಅವರು ಅದರ ಬಗ್ಗೆ ಆಸಕ್ತಿಯನ್ನೇ ತಳೆಯುವುದಿಲ್ಲ. ಅಂತೆಯೇ ಪ್ರಭಾವಿಸಿದರೂ, ಆ ಬಗೆಯ ಪ್ರಭಾವ ಉಂಟಾಗಿದೆ ಎಂದು ಗಮನಿಸಿ ತರಬೇತಿಯನ್ನು ನೀಡದಿದ್ದರೆ ಪ್ರಭಾವವೂ ಕೂಡ ಏನೂ ಕೆಲಸಕ್ಕೆ ಬಾರದ್ದಾಗಿರುತ್ತದೆ. ಇಷ್ಟನ್ನು ತಿಳಿದುಕೊಳ್ಳೋಣ. ಪ್ರಭಾವಿಸುವುದು ಎಷ್ಟು ಮುಖ್ಯವೋ ತರಬೇತಿಯೂ ಅಷ್ಟೇ ಮುಖ್ಯ. ಬರೀ ತರಬೇತಿ ನೀಡಿ ಅವರ ಮನಸ್ಸಿನ ಮೇಲೆ ಪ್ರಭಾವಿಸದಿದ್ದರೆ ಅದಂತೂ ಮಗುವಿನ ವ್ಯಕ್ತಿತ್ವವನ್ನೇ ಹಾಳುಗೆಡವುವಂತಹ ತಪ್ಪಿನ ಕೆಲಸ. ಒಟ್ಟಾರೆ ಯಾವುದೇ ಕೌಶಲ್ಯ ತಾನೇ ತಾನಾಗಿ ಅಥವಾ ಇನ್ನಾರೇ ಮುಂದಾಳಾಗಿ ನಿಂತು ತರಬೇತಿ ಪಡೆಯದಿದ್ದರೆ ಅಥವಾ ನೀಡದಿದ್ದರೆ ಅದು ವ್ಯರ್ಥ. ಕೌಶಲ್ಯ ಅಥವಾ ಸ್ಕಿಲ್ ಎನ್ನುವುದು ನಿರಂತರ ಅಭ್ಯಾಸ ಮತ್ತು ತರಬೇತಿಗಳಿಂದ ಮಾತ್ರ ಸಾಧ್ಯ.

ಬುದ್ಧಿಮತ್ತೆಯ ಕೊರತೆಯಿಂದ ಅನುತ್ತೀರ್ಣವಾಗುವುದು.

ಯಾವುದೇ ಮಗುವು ಯಾವುದಾದರೂ ವಿಷಯದ ಕಲಿಕೆಯಲ್ಲಿ ಅನುತ್ತೀರ್ಣವಾದರೆ ಅದಕ್ಕೆ ಕಾರಣ ಅದಕ್ಕಿರುವಂತಹ ಬುದ್ಧಿಮತ್ತೆಯ ಕೊರತೆ ಎಂದು ತಪ್ಪಾಗಿ ಬಹಳಷ್ಟು ಜನ ತಿಳಿದಿದ್ದಾರೆ. ಇದು ಸರಿಯಲ್ಲ ಮತ್ತು ನಿಜವೂ ಅಲ್ಲ. ಮಗುವಿಗೆ ನೀಡಬೇಕಾದ ತರಬೇತಿಯ ಕೊರತೆ ಮತ್ತು ಅದಕ್ಕೆ ಎಲ್ಲಿ ಸಮಸ್ಯೆ ಇದೆಯೋ ಅಲ್ಲಿಂದ ಸಮಸ್ಯೆ ಬಗೆಹರಿಸುತ್ತಾ, ವಿಷಯವನ್ನು ಸರಳಗೊಳಿಸದಿರುವುದೇ ಆ ಮಗುವಿನ ಅನುತ್ತೀರ್ಣಕ್ಕೆ ಕಾರಣವಿರುತ್ತದೆ. ಉದಾಹರಣೆಗೆ ಮಗುವಿಗೆ ಪ್ರಾರಂಭಿಕ ಅಥವಾ ಪ್ರಾಥಮಿಕವಾದ ಸರಳ ವಿಷಯಗಳು ಅರ್ಥವಾಗದೇ ಇದ್ದ ಪಕ್ಷದಲ್ಲಿ, ಅದನ್ನು ಮೀರಿರುವ ವಿಷಯಗಳನ್ನು ಅದಕ್ಕೆ ಕಲಿಸಲು ಯತ್ನಿಸಿದರೆ ಅದರ ಗ್ರಹಿಕೆಯ ಸಾಮರ್ಥ್ಯಕ್ಕೆ ಹೊರೆಯಾಗಬಹುದು. ಆಗ ಅದು ಕಲಿಕೆಯನ್ನು ಸ್ವೀಕರಿಸುವ ಮನಸ್ಥಿತಿಯನ್ನೇ ಹೊಂದದೇ ಪ್ರಾರಂಭದಲ್ಲೇ ತಿರಸ್ಕರಿಸುವ ಕಾರಣದಿಂದ ಅದು ಕಲಿಯಲಾರದೇ ಹೋಗುತ್ತದೆ ಮತ್ತು ಅನುತ್ತೀರ್ಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಅದರ ಬುದ್ಧಿಮಟ್ಟ ಎಂದು ನೋಡುವುದಕ್ಕಿಂತ ಅದು ಎಲ್ಲಿಯವರೆಗೆ ಅರಿತಿದೆ ಎಂದು ಗಮನಿಸಿ ಅದಕ್ಕೆ ಸೂಕ್ತವಾದ ರೀತಿಯಲ್ಲಿ ವಿಷಯವನ್ನು ಸರಳಗೊಳಿಸುತ್ತಾ ಕಲಿಸಬೇಕು. ಇಂಟೆಲಿಜೆನ್ಸ್ ಅಥವಾ ಬುದ್ದಿಮತ್ತೆ ಅನ್ನೋದು ಯಾವ ಮಗುವಿನ ವಿಷಯದಲ್ಲಿಯೂ ಉತ್ತೀರ್ಣ ಅಥವಾ ಅನುತ್ತೀರ್ಣಗೊಳಿಸುವ ವಿಷಯದಲ್ಲಿ ಪ್ರಧಾನವಾಗುವುದಿಲ್ಲ. ಅದಕ್ಕೆ ಕಾರಣ ಕಲಿಕೆಯ ಸ್ವೀಕೃತಿ, ಕಲಿಕೆಯ ಸರಳಗೊಳಿಸಿರುವ ವಿಧಾನ ಮತ್ತು ನೀಡಿರುವ ತರಬೇತಿ ಮಾತ್ರವೇ ಕಾರಣವಾಗಿರುತ್ತದೆ.

ಹೋಂ ವರ್ಕ್‌ಗಳು ಮಕ್ಕಳ ಉತ್ತಮ ಕಲಿಕೆಗೆ ಕಾರಣವಾಗುತ್ತದೆ.

ಮಕ್ಕಳಿಗೆ ಹೋಂವರ್ಕ್‌ಗಳನ್ನು ಕೊಟ್ಟರೆ ಅವರು ಉತ್ತಮವಾಗಿ ಕಲಿಯುತ್ತಾರೆ, ಶಾಲೆಯಲ್ಲಿ ಕಲಿತಿರುವುದು ಪುನರಾವರ್ತನೆಯಾಗುತ್ತದೆ ಎಂಬುದು ಒಂದು ಭ್ರಮೆ. ಪುನರಾವರ್ತನೆಯಾಗಬೇಕಾದರೆ, ಅದನ್ನು ಮಕ್ಕಿಕಾಮಕ್ಕಿ ಉಪಾಧ್ಯಾಯರಿಗೋಸ್ಕರ ಬರೆದರೆ ಏನೂ ಆಗುವುದಿಲ್ಲ. ಬದಲಾಗಿ ಶಾಲೆಯಲ್ಲಿ ಕಲಿತಿರುವ ವಿಷಯವನ್ನು ನವಿರಾಗಿ ಮತ್ತು ಸರಳವಾಗಿ ತಿಳಿಸಿ ಅಲ್ಲಿ ತಿಳಿಯದ ವಿಷಯವನ್ನು ಅಥವಾ ಗೊಂದಲ ಉಂಟುಮಾಡಿರುವ ವಿಷಯವನ್ನು ತಿಳಿಗೊಳಿಸಿದರೆ ಅವರಿಗೆ ಕಲಿಕೆಯು ಸಾಧ್ಯವಾಗುತ್ತದೆ. ಹೋಮ್‌ವರ್ಕ್ ಗಳಿಂದ ಏನೂ ಪ್ರಯೋಜನವಿಲ್ಲ. ಏಕೆಂದರೆ ಈ ಹೋಂವರ್ಕ್‌ಗಳು ಎಲ್ಲಾ ವಿದ್ಯಾರ್ಥಿಗಳಿಗೂ ಸಮವಾಗಿರುತ್ತದೆ. ಮಗುವಿಗೆ ಅರ್ಥವಾಗದ, ಗೊಂದಲವಾಗಿರುವ, ತಿಳಿಯದೇ ತಪ್ಪಿಸಿ ಕೊಂಡಿರುವ ವಿಷಯಗಳು ಹೋಂವರ್ಕ್ ನಲ್ಲಿ ಅಡಕವಾಗಿದೆ ಎಂದು ಹೇಳಲು ಬರುವಂತಿಲ್ಲ. ಏಕೆಂದರೆ ಅರ್ಥವಾಗುವುದು ಮತ್ತು ಅರ್ಥವಾಗದಿರುವುದು ಮಗುವಿಂದ ಮಗುವಿಗೆ ವ್ಯತ್ಯಾಸವಾಗಿರುತ್ತದೆ. ಆದ್ದರಿಂದ ಮಗುವು ಅಂದು ಏನು ತಿಳಿದು ಬಂದಿದೆಯೋ ಅದರ ವಿಶ್ಲೇಷಣೆ ಮಾಡಿ, ಅದಕ್ಕೆ ಯಾವುದು ತಿಳಿದಿಲ್ಲವೋ ಅದನ್ನು ತಿಳಿಸುವುದು ಹೋಂವರ್ಕ್ ಆಗಿರಬೇಕು. ಅದನ್ನು ನಿರ್ಧರಿಸುವುದು ಶಾಲೆಯಲ್ಲಿನ ಉಪಾಧ್ಯಾಯರು ಅಲ್ಲ. ಮನೆಯಲ್ಲಿ ಪೋಷಕರು. ಅಥವಾ ಇನ್ನಾರೋ ಕುಟುಂಬದ ಸದಸ್ಯರು. ಹೋಂ ವರ್ಕ್ ಯಾವುದಾಗಬೇಕೆಂದು ನಿರ್ಧರಿಸಬೇಕಾಗಿರುವುದು ಮನೆಯವರೇ ಅಥವಾ ಆ ಮಗುವೇ.

ಮಗುವು ಓದುವುದನ್ನು ಕಲಿತ ಮೇಲೆ ಪೋಷಕರು ಮನೆಯಲ್ಲಿ ಓದಿಸುವ ಅಗತ್ಯವಿಲ್ಲ.

ಎಷ್ಟೋ ಮನೆಗಳಲ್ಲಿ ಮಕ್ಕಳು ಓದಲು ಕಲಿತಾದ ಮೇಲೆ ಇನ್ನು ಅವರಷ್ಟೇ ಓದಿಕೊಳ್ಳುತ್ತಾರೆ. ತಾವು ಓದಿ ಹೇಳುವ ಅಥವಾ ಅವರು ಓದಿರುವುದನ್ನು ಕೇಳುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಇದು ಶುದ್ಧ ತಪ್ಪು. ಏಕೆಂದರೆ ಓದಲು ಬಂದಿದೆ ಅಂದ ಮಾತ್ರಕ್ಕೆ ಅರ್ಥವಾಗಿದೆ ಎಂದಲ್ಲ. ಅಲ್ಲದೇ ಓದಿರುವ ವಿಷಯದ ಜೊತೆಗೆ ಅರ್ಥ ಮಾಡಿಕೊಳ್ಳಬೇಕಾದ ಹಲವಾರು ವಿಷಯಗಳಿರುತ್ತವೆ. ಅವುಗಳಿಂದಾಗಿಯೇ ವಿಷಯದ ಅರಿವು ಮತ್ತು ಕಲಿಕೆಯು ಪೂರ್ಣಗೊಳ್ಳುವುದು. ಬರಿಯ ಓದಿರುವುದನ್ನು ಮಾತ್ರ ತಿಳಿಯುವುದಾದರೆ ಅದು ಸಾಲುಗಳನ್ನು ಕಲಿತಿರುವುದು ಮಾತ್ರ ಆಗಿರುತ್ತದೆ. ಶಿಕ್ಷಣ ಎಂಬುದು ಸಾಲುಗಳನ್ನು ಮಾತ್ರ ಕಲಿಯುವುದು ಅಲ್ಲವಲ್ಲ. ಮಗುವಿನ ಅನುಭವದ ಇತಿಮಿತಿಯಂತೆ ಓದಿರುವುದನ್ನು ಮಕ್ಕಿಕಾಮಕ್ಕಿ ತಿಳಿಯುತ್ತದೆ. ಆದರೆ ಅದರ ಒಳ ಹೊರಗಿನ ವಿಷಯಗಳನ್ನು, ಆಳ ಎತ್ತರಗಳನ್ನು ಪೋಷಕರು ಅಥವಾ ಶಿಕ್ಷಕರು ತಿಳಿಸಿದರೆ ಓದಿನ ವ್ಯಾಪ್ತಿಯನ್ನು ಮಗುವು ತಿಳಿಯುತ್ತದೆ. ಹಾಗೆಯೇ ತನ್ನ ಓದಿನ ವ್ಯಾಪ್ತಿಯ ಹರವಿನ ಬಗ್ಗೆ ಅದಕ್ಕೆ ಅರಿವೂ ಮೂಡುತ್ತದೆ. ಕನಿಷ್ಟ ಪಕ್ಷ ತಾನು ಓದಿರುವಷ್ಟೇ ವಿಷಯವಲ್ಲ ಎಂಬ ಪ್ರಜ್ಞೆ ಇರುತ್ತದೆ.

ಮಕ್ಕಳಿಗೆ ಸಾಕಷ್ಟು ಸಮಯ ಕೊಟ್ಟು ಬಿಟ್ಟರೆ ನಿಧಾನವಾಗಿ ಕಲಿಯುತ್ತಾರೆ.

ಅವರ ಪಾಡಿಗೆ ಅವರು ಓದಿಕೊಳ್ಳಲು ಸಮಯ ಕೊಟ್ಟುಬಿಟ್ಟರೆ ಅವರು ಕಲಿಯುವ ಗೋಜಿಗೇ ಹೋಗುವುದಿಲ್ಲ. ಏಕೆಂದರೆ ಅವರನ್ನು ಸೆಳೆಯುವ, ಪ್ರಭಾವಿಸುವ ಬೇರೆ ಬೇರೆ ವಿಷಯಗಳು ಬೇಕಾದಷ್ಟಿರುತ್ತವೆ. ಅವರಿಗೆ ಕೊಟ್ಟಿರುವ ಸಾಕಷ್ಟು ಸಮಯದಲ್ಲಿ ಪ್ರಾಧಾನ್ಯತೆ ನೀಡಲು ಬರುವುದಿಲ್ಲ. ಸಮಯದ ಸರಿಯಾದ ನಿರ್ವಹಣೆ ಎಂದರೆ ಕೆಲಸದ ಪ್ರಾಧಾನ್ಯತೆಗಳಿಗನುಗುಣವಾಗಿ ಕೆಲಸ ಮಾಡುವುದು. ಯಾವ ವ್ಯಕ್ತಿಗೆ ತನ್ನ ಮುಕ್ತ ಸಮಯದಲ್ಲಿಯೂ ಪ್ರಧಾನವಾಗಿರುವ ಕೆಲಸವನ್ನು ಮಾಡಿ ಮುಗಿಸಿ ನಂತರ ತನಗೆ ಖುಷಿ ನೀಡುವಂತಹ ಅಥವಾ ಮೋಜು ಅನ್ನಿಸುವಂತಹ ಕೆಲಸಗಳನ್ನು ಮಾಡುವ ಸಾಮರ್ಥ್ಯವಿರುತ್ತದೆಯೋ ಅವನಿಗೆ ಸಮರ್ಥವಾಗಿ ಸಮಯ ನಿರ್ವಹಣೆ ಮಾಡಲು ಸಾಧ್ಯ. ಮಕ್ಕಳಿಗೆ ಸಮಯ ನಿರ್ವಹಣೆ ಮಾಡಲು ಬರುವುದಿಲ್ಲ. ಅದೇ ಕಾರಣದಿಂದ ಮಕ್ಕಳು ತಮಗಿರುವ ಸಾಕಷ್ಟು ಸಮಯದಲ್ಲಿ ಸ್ವಾಧ್ಯಾಯನ ಮಾಡಿಕೊಳ್ಳುತ್ತಾರೆ ಎಂಬ ಹುಂಬ ಧೈರ್ಯ ಬೇಡ.

ಕೆಲವು ಅಂಶಗಳನ್ನು ನಾವು ಗಮನಿಸಲೇ ಬೇಕು:
1. ಜ್ಞಾನ ಎನ್ನುವುದು ಸಾಮಾನ್ಯವಲ್ಲ. ಪ್ರಜ್ಞೆ ಎನ್ನುವುದು ಸಮಪ್ರಮಾಣದಲ್ಲಿ ಎಲ್ಲರಿಗೂ ಇರುವುದಿಲ್ಲ. ಗ್ರಹಿಕೆ ಮತ್ತು ತಿಳುವಳಿಕೆಯ ಸಾಮರ್ಥ್ಯ ಎಲ್ಲಾ ದೇಶಗಳಲ್ಲೂ, ಎಲ್ಲಾ ಕಾಲಘಟ್ಟಗಳಲ್ಲೂ ಸಮಪ್ರಮಾಣವಾಗಿ ಎಂದಿಗೂ ಇರುವುದಿಲ್ಲ. ಆಯಾ ದೇಶ, ಕಾಲದಲ್ಲಿ ಯಾವ ಗುಂಪುಗಳು ಅಥವಾ ವರ್ಗಗಳು ಯಾವ ಸ್ಥಾನಗಳಲ್ಲಿರುತ್ತಮೋ ಅವರ ಮುಂದಿನ ಪೀಳಿಗೆಗಳು ಆ ಧೋರಣೆಗಳನ್ನು, ತಮ್ಮನ್ನು ಗುರುತಿಸಿಕೊಳ್ಳುವ ರೀತಿಗಳನ್ನು ಮತ್ತು ಒಲವು ನಿಲುವುಗಳನ್ನು ಸಾಮಾನ್ಯವಾಗಿ ಹೊಂದಿರುತ್ತಾರೆ. ಆದ್ದರಿಂದ ಕಲಿಸುವ ಮತ್ತು ತರಬೇತಿ ನೀಡುವ ಮಾದರಿಗಳು ಎಲ್ಲಾ ಮಕ್ಕಳಿಗೂ ಒಂದೇ ಬಗೆಯಾಗಿ ಇರುವುದಿಲ್ಲ.

2. ತುಳಿತಕ್ಕೆ ಒಳಗಾಗಿರುವ ಅಥವಾ ಕೆಳಮಟ್ಟದ ಸೇವೆ ಮಾಡುವುದರಲ್ಲಿ ಮಾತ್ರವೇ ಗುರುತಿಸಿಕೊಂಡಿರುವ ವರ್ಗಗಳು ಅಥವಾ ಗುಂಪುಗಳ ಮಕ್ಕಳು ಕೂಡ ತಾವೂ ಕರ್ಮಾಚಾರಿಗಳು (ಆಬ್ಜೆಕ್ಟ್) ಭಾವಿಸಿಕೊಂಡಿರುತ್ತಾರೆ. ಎಷ್ಟೋ ಬಾರಿ ಅವರ ಮನೆಯಿಂದಲೇ ಅವರಿಗೆ ಆ ಬಗೆಯ ತಿಳುವಳಿಕೆಯನ್ನು ನೀಡಿರುತ್ತಾರೆ.

3. ಕೆಳವರ್ಗದ ಕುಟುಂಬಗಳೆಂದು ಭಾವಿಸಿರುವಂತಹ ಮನೆಯ ಮಕ್ಕಳಲ್ಲಿ ಕೆಲವು ಬಗೆಯ ಕೌಶಲ್ಯಗಳು ರೂಢಿಯಾಗಿರುವುದಿಲ್ಲ. ಅಲ್ಲದೇ ಎಷ್ಟೋ ವಿಷಯಗಳು ಪರಿಚಯವೇ ಆಗಿರುವುದಿಲ್ಲ. ಶಾಲೆಯಲ್ಲಿನ ಕಲಿಕೆಯು ಅವರ ವಾಸ್ತವದ ಬದುಕಿಗೆ ವ್ಯತಿರಿಕ್ತವೆನಿಸಬಹುದು. ಕೆಲವು ಸಲ ತನ್ನ ಸಹಪಾಠಿಗಳ ವರ್ತನೆ ಮತ್ತು ಧೋರಣೆಗಳಿಗೂ ಸಾಮ್ಯತೆ ಹೊಂದಿರುವುದಿಲ್ಲ.

4. ಎಂತಹ ಮನೆಯ ಮಕ್ಕಳೆಂದು ಗುರುತಿಸದೇ ಎಲ್ಲಾ ಮಕ್ಕಳಿಗೂ ಒಂದೇ ಬಗೆಯ ಶಿಕ್ಷಣವನ್ನು ನೀಡುವುದೇನೋ ಸರಿ. ಆದರೆ ಕಲಿಸುವಾಗ ಎಲ್ಲರಿಗೂ ಒಂದೇ ಪದ್ಧತಿ ಮತ್ತು ಧೋರಣೆಯನ್ನು ಅನುಸರಿಸಲಾಗದು. ವಸ್ತುವಿಷಯವು ಒಂದೇ ಆಗಿದ್ದರೂ, ಅವರನ್ನು ನಡೆಸಿಕೊಳ್ಳುವ ರೀತಿ, ಅವರು ಪಡೆಯುತ್ತಿರುವ ಶಿಕ್ಷಣವು ಅವರ ಬದುಕನ್ನು ರೂಪಿಸುವ ಮತ್ತು ಅವರ ಕುಟುಂಬಕ್ಕೂ ಅನ್ವರ್ಥವಾಗುವ ರೀತಿಯು ಸಾಧ್ಯವಾಗುತ್ತದೆಯೇ ಎಂದು ಗಮನಿಸಬೇಕು. ಖಂಡಿತವಾಗಿ ಬರೀ ಪಾಠ ಕಲಿಯುವುದೇ ಅವರ ಉದ್ದೇಶವಾದರೆ ಅದು ಏತಕ್ಕೆ ಕಲಿಯಬೇಕು ಎಂಬುದು ಕಲಿಕೆಯ ಮಹೋದ್ದೇಶವಾಗಿರಬೇಕು.

5. ಮೇಲರಿಮೆಯ ಮತ್ತು ಕೀಳರಿಮೆಯ ಕುಟುಂಬಗಳ ಹಿನ್ನೆಲೆಯನ್ನೇ ಮಕ್ಕಳಲ್ಲಿ ಶಿಕ್ಷಕರು ಗಮನಿಸದೇ ಹೋದರೆ, ಅವರಿಗೆ ಯಾವ ರೀತಿಯಲ್ಲಿಯೂ ಯಶಸ್ವಿಯಾಗಿ ಜೀವನ ಕೌಶಲ್ಯಗಳನ್ನು ಕಲಿಸಲು ಸಾಧ್ಯವಿಲ್ಲ. ಶಿಕ್ಷಕರಿಗೆ ಮಕ್ಕಳ ಕೌಟುಂಬಿಕ ಮತ್ತು ಸಾಮಾಜಿಕ ಹಿನ್ನೆಲೆಗಳ ಅರಿವಿರಲೇಬೇಕು. ಮಕ್ಕಳು ತಮ್ಮ ಸಾಧಾರಣ ದೃಷ್ಟಿಯಲ್ಲಿ ಯಾವುದೇ ಗುರಿಯನ್ನು ಹೊಂದಿದ್ದರೂ ಕೂಡಾ ಅವರ ಗುರಿ ಅವರ ಕೌಟುಂಬಿಕ ಮತ್ತು ಸಾಮಾಜಿಕ ಪರಿಸರಕ್ಕೆ ಯಾವ ರೀತಿ ಕಾಣ್ಕೆಯನ್ನು ಸಲ್ಲಿಸಲು ಸಾಧ್ಯ ಎಂಬುದನ್ನು ಶಿಕ್ಷಕರು ಗುರುತಿಸುವಂತೆ ಮಾಡಬೇಕು.

6. ಶಿಕ್ಷಕರು ಮತ್ತು ವಿದ್ಯಾರ್ಥಿಗಳು; ಇವರಿಬ್ಬರ ನಡುವಿನ ಪ್ರತಿನಿತ್ಯದ ಸಂಭಾಷಣೆಯು ವ್ಯಕ್ತಿತ್ವ, ಕೌಟುಂಬಿಕ ಪರಿಸರ, ಸಾಮಾಜಿಕ ಪರಿಸರ; ಇವೆಲ್ಲವನ್ನೂ ರಚನಾತ್ಮಕವಾಗಿ ಕಟ್ಟುವಂತಹ ಪ್ರಕ್ರಿಯೆಯಲ್ಲಿಯೇ ತೊಡಗಿರಬೇಕು. ಇದು ಮುಂದೆ ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳನ್ನು ಎದುರಿಸುವಲ್ಲಿ ನೆರವಾಗುತ್ತದೆ. ಅಲ್ಲದೇ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸಬಲರನ್ನಾಗಿ ಮಾಡುತ್ತದೆ.

ಶಿಕ್ಷಕರ ಕೆಲಸ ಸಿಕ್ಕಾಪಟ್ಟೆ ಮತ್ತು ಕ್ಲಿಷ್ಟ ಅನ್ನಿಸುತ್ತಿದೆಯೇ?

ಹೌದು, ಖಂಡಿತವಾಗಿಯೂ ಕ್ಲಿಷ್ಟ ಮತ್ತು ಬಹಳ ಜವಾಬ್ದಾರಿಯುತವಾಗಿರುವುದು. ಅವರಿಗೆ ಆಸಕ್ತಿ ಇರದಿರುವ ವಿಷಯಗಳನ್ನೆಲ್ಲಾ ಗಮನಿಸಬೇಕು. ಅವುಗಳ ಬಗ್ಗೆ ಎಚ್ಚರ ವಹಿಸಬೇಕು. ಅರಿಯಲಾಗದ ಮಕ್ಕಳ ಮುಂದೆ ಅಭಿಪ್ರಾಯಗಳನ್ನು ನೇರಾನೇರ ವ್ಯಕ್ತಪಡಿಸದೇ ಮೌನವಾಗಿಯೇ ಇರುತ್ತಾ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಕುಟುಂಬಗಳು ಮತ್ತು ಅವರ ಸಾಮಾಜಿಕ ಪರಿಸರ ಮಕ್ಕಳನ್ನು ಸಾಕಷ್ಟು ಕುಲಗೆಡಿಸಿದ್ದರೂ ಅವುಗಳನ್ನು ದೂರದೇ ಕೆಲಸ ಮಾಡುವ ಪರಿಯನ್ನು ಶಿಕ್ಷಕನು ಕಲಿತುಕೊಂಡನಾದರೆ ಒಂದರ್ಧ ಗೆದ್ದಂತೆ. ಇನ್ನುಳಿದದ್ದು ಮಕ್ಕಳನ್ನು ವ್ಯಕ್ತಿಗತವಾಗಿ ಸಮಗ್ರ ಅರಿವನ್ನು ನೀಡುತ್ತಾ ಜೀವನ ಕೌಶಲ್ಯವನ್ನು ಪಡೆಯುವ ತರಬೇತಿಯನ್ನು ನೀಡುವುದು. ಇಷ್ಟು ಮಾಡಲಾಗದಿದ್ದರೆ ಶಿಕ್ಷಕರೇ ಆಗಬಾರದು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group