ವರದಿಗಾರ : ಪ್ರಕರಣವೊಂದರ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಯುವಕನೋರ್ವ ಠಾಣೆಯಿಂದ ಬಿಡುಗಡೆಗೊಂಡ ಕೂಡಲೇ ಮೃತನಾಗಿದ್ದುದನ್ನು ಪ್ರಶ್ನಿಸಿದ ಗುಂಪಿನ ಮೇಲೆ ಗೋಲೀಬಾರ್ ನಡೆಸಿದ್ದರಿಂದಾಗಿ ಓರ್ವ ರೈತ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿರುವ ಪ್ರಕರಣ ಗುಜರಾತಿನ ದಹೋಡಾಜಿಲ್ಲೆಯ ಚಿಲಕೊಟ್ಟ ಗ್ರಾಮದಲ್ಲಿ ನಡೆದಿದೆ.
ಮೂಲಗಳ ಪ್ರಕಾರ, 31ರ ಹರೆಯದ ಕಾನೇಶ್ ಗಮಾರ ಎನ್ನುವ ವ್ಯಕ್ತಿಯನ್ನು ಅವನ ಇನ್ನೋರ್ವ ಸ್ನೇಹಿತನೊಂದಿಗೆ ಅಕ್ಟೋಬರ್ 26 ರ ಮುಂಜಾನೆ ಪೊಲೀಸರು ಬಂಧಿಸಿದ್ದರು. ಕಾನೇಶ್ ಗಮಾರನ ಅಣ್ಣನನ್ನು ಪೊಲೀಸರು ದರೋಡೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹುಡುಕುತ್ತಿದ್ದರು. ಅಣ್ಣನ ಕುರಿತು ಪ್ರಶ್ನಿಸಲು ವಿಚಾರಣೆಯ ನೆಪದಲ್ಲಿ ಬಂಧಿಸಿದ್ದ ಕಾನೇಶ್ ಗಮಾರನನ್ನು 26 ರ ಮುಂಜಾನೆ 3 ಗಂಟೆಯ ವೇಳೆಗೆ ಪೊಲೀಸರು ಬಿಡುಗಡೆಗೊಳಿಸಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದಾನೆ.
ಮೃತದೇದಹವನ್ನು ಸೂಕ್ತ ತನಿಖೆಗಾಗಿ ಮತ್ತು ದೌರ್ಜನ್ಯ ನಡೆಸಿದ್ದ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕುಟುಂಬಸ್ಥರು ಮತ್ತು ಗ್ರಾಮದ ಜನರು ಜೆಸವಾಡ ಪೊಲೀಸ್ ಠಾಣೆಯ ಎದುರು ತಂದು ಪ್ರತಿಭಟಿಸುತ್ತಿದ್ದರು. ಪೊಲೀಸರು ಕೇವಲ ಅಪಘಾತದ ಪ್ರಕರಣ ದಾಖಲಿಸಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಠಾಣೆಯ ಮೇಲೆ ಕಲ್ಲು ತೂರಾಟ ಮಾಡಲು ಪ್ರಾರಂಭಿಸಿದಾಗ, ಪೊಲೀಸರು ಗೋಲೀಬಾರ್ ನಡೆಸಿದ್ದು, ಆ ವೇಳೆ 45ರ ಹರೆಯದ ರಾಮ್ಸು ಮೊಹಾನಿಯಾ ಎನ್ನುವ ಆಮ್ಲಿ ಗ್ರಾಮದ ರೈತನೋರ್ವನ ತಲೆಗೆ ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಉಳಿದ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ವಡೋದರಾದ SSG ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಹಾಯಕ ಪೊಲಿಸ್ ಅಧೀಕ್ಷಕ ತೇಜಸ್ ಪಟೇಲ್ ಪ್ರಕಾರ, ಕಾನೇಶ್ ಗಮಾರನನ್ನು ದರೋಡೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಆತನ ಅಣ್ಣನ ಕುರಿತು ಕೇಳಲು ಠಾಣೆಗೆ ಕರೆದಿದ್ದು, ಅದೇ ದಿನ ಬಿಟ್ಟು ಕಳುಹಿಸಿದ್ದೇವೆ. ಆತನ ಸಾವಿನ ಕುರಿತು ಪ್ರಕರಣ ದಾಖಲಿಸುವಂತೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬಂದು ಒತ್ತಾಯಿಸುತ್ತಿದ್ದರು. ಅದರದ್ದೇ ಪ್ರಕ್ರಿಯೆಯಲ್ಲಿ ಪೊಲೀಸರು ತೊಡಗಿದ್ದಾಗ ಸುಮಾರು 500 ರಷ್ಟಿದ್ದ ಗ್ರಾಮಸ್ಥರು ಠಾಣೆಯ ಮೇಲೆ ಕಲ್ಲು ತೂರಾಟ ಪ್ರಾರಂಭಿಸಿದ್ದು, ಕೆಲವೊಂದು ಪೊಲೀಸ್ ವಾಹನಗಳಿಗೆ ಬೆಂಕಿ ಹಾಕಿದರು. ಅದನ್ನು ನಿಗ್ರಹಿಸಲು ಗೊಲೀಬಾರ್ ಮಾಡಲಾಯಿತೆಂದು ಹೇಳಿಕೆ ನೀಡಿದ್ದಾರೆ.
