ವರದಿಗಾರ: ವಿಧಾನಸೌಧದ ವಜ್ರ ಮಹೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ರ ಸಾಧನೆ ಮತ್ತು ಶೌರ್ಯವನ್ನು ಸ್ಮರಿಸಿದ್ದು, ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.
ಬುಧವಾರ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, ಕರ್ನಾಟಕ ವೀರ ಯೋಧರ ಭೂಮಿ. ಇಲ್ಲಿ ರಾಣಿ ಅಬ್ಬಕ್ಕಾ, ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ವಿಜಯನಗರ ಅರಸರ ಕೊಡುಗೆ ಅಪಾರವಿದೆ. ಟಿಪ್ಪು ಅಪ್ರತಿಮ ವೀರನಾಗಿದ್ದ. ಸೇನೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಬ್ರಿಟಿಷರ ವಿರುದ್ದ ಹೋರಾಡಿ ವೀರಮರಣವನ್ನು ಅಪ್ಪಿದ ಟಿಪ್ಪು ಸುಲ್ತಾನ್ ಅವರು ನಾಡಿನ ಅಭಿವೃದ್ಧಿಯ ಪಥ ಬದಲಿಸಿದ ಮುಂಚೂಣಿ ನೇತಾರ. ಯುದ್ಧಭೂಮಿಯಲ್ಲಿ ಮೈಸೂರು ರಾಕೆಟ್ ಬಳಸಿದ ಅಪ್ರತಿಮ ನಾಯಕ. ಟಿಪ್ಪು ರೂಪಿಸಿದ್ದ ರಾಕೆಟ್ ತಂತ್ರಜ್ಞಾನವನ್ನು ಯುರೋಪಿಯನ್ನರು ನಂತರ ಬಳಸಿಕೊಂಡರು ಎಂದು ಕೋವಿಂದ್ ಹೇಳಿದರು.
ಕೋವಿಂದ್ ಅವರು ಟಿಪ್ಪು ಬಗ್ಗೆ ಮಾತನಾಡುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಮೇಜು ತಟ್ಟಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ ಮತ್ತು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿರುವ ಬಿಜೆಪಿ ಶಾಸಕರು ಈ ವೇಳೆ ಇರಿಸು ಮುರುಸು ಅನುಭವಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿ ರಾಜ್ಯದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ರಾಷ್ಟ್ರಪತಿಯಿಂದ ಟಿಪ್ಪು ಸುಲ್ತಾನ್ ರ ಶ್ಲಾಘನೆಯು ಇನ್ನಷ್ಟು ಮಹತ್ವವನ್ನು ಪಡೆದಿದೆ.
