ವರದಿಗಾರ-ಬಹರೈನ್: 71ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಹರೈನ್ ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಇಂಡಿಯನ್ ಸೋಶಿಯಲ್ ಫೋರಂ ಬಹರೈನ್ ಘಟಕದ ವತಿಯಿಂದ ಸ್ವಾತಂತ್ರ್ಯೊತ್ಸವ ದಿನಾಚರಣೆಯು ಇಲ್ಲಿನ ರಿಫಾ ಏರಿಯಾದಲ್ಲಿ ನಡೆಯಿತು.
ರಿಫಾ ಘಟಕದ ಅಧ್ಯಕ್ಷ ನಿಝಾಂ ಮಂಗಳೂರು ಪ್ರಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಮಧ್ಯರಾತ್ರಿ ನಿರ್ಭೀತಿಯಿಂದ ಒಬ್ಬಂಟಿ ಮಹಿಳೆ ನಡೆಯುತ್ತಾರೋ ಅಂದು ದೇಶವು ನೈಜ ಸ್ವಾತಂತ್ರ್ಯವನ್ನು ಪಡೆಯುತ್ತದೆ ಎಂದು ಗಾಂಧೀಜಿ ಹೇಳಿದ್ದರು, ಆದರೆ ಇಂದು ಮಧ್ಯಾಹ್ನ ಮನೆಯಿಂದ ಹೊರ ಹೋಗುವ ಮಹಿಳೆ ಮನೆಗೆ ಮರಳಿ ಬರುತ್ತಾಳೆ ಎನ್ನುವ ಧೈರ್ಯ ಮನೆಯವರಿಗೆ ಇಲ್ಲದಿರುವ ಪರಿಸ್ಥಿತಿಯಲ್ಲಿ ನಾವು ಜೀವಿಸುತ್ತಿದ್ದೇವೆ ಎಂದರು. ದೇಶದಲ್ಲಿ ಅವಿತುಕೊಂಡಿರುವ ಭ್ರಷ್ಟರ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ದೇಶದ ಯುವ ಜನತೆಯ ಮೇಲಿರುವ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಘಟಕದ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ್ ಮಾತನಾಡಿ, ನಾವು ಅನಿವಾಸಿ ಭಾರತೀಯರು ಅಂದ ಮಾತ್ರಕ್ಕೆ ನಮ್ಮ ದೇಶವನ್ನು ನಾವು ಯಾವುದೇ ವಿಚಾರದಲ್ಲಿ ಇನ್ನೊಬ್ಬರಿಗೆ ಬಿಟ್ಟು ಕೊಡಬಾರದು, ನಾವು ದುಡಿಯುವ ದೇಶಕ್ಕೆ ಗೌರವ ನೀಡಿ, ನಮ್ಮ ಮನಸ್ಸಿನಲ್ಲಿ ನಿತ್ಯವು ದೇಶ ಪ್ರೇಮವನ್ನು ಉಳಿಸಿಕೊಳ್ಳುವವರಾಗಬೇಕೆಂದು ಹೇಳಿದರು, ಕಾರ್ಯಕ್ರಮದಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೊರಮ್ ಬಹರೈನ್ ಕರ್ನಾಟಕ ಘಟಕದ ಅಧ್ಯಕ್ಷರಾದ ಇರ್ಷಾದ್ ತುಂಬೆ ಉಪಸ್ಥಿತರಿದ್ದರು. ರಿಯಾಝ್ ತೋಡಾರ್ , ಅಶ್ರಫ್ ಕೊಲ್ಪೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
