ವರದಿಗಾರ : ತಮಿಳು ಚಿತ್ರ ನಟ ವಿಜಯ್ ಅಭಿನಯದ ‘ಮೆರ್ಸೆಲ್ ಚಿತ್ರದಲ್ಲಿ GST ಕುರಿತಾಗಿನ ಹೇಳಿಕೆಗಳನ್ನು ಮುಂದಿಟ್ಟುಕೊಂಡು ವಿವಾದಗಳನ್ನು ಸೃಷ್ಟಿಸಿದ್ದ ಬಿಜೆಪಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ವಿಜಯ್’ರವರು ಕ್ರೈಸ್ತ ಧರ್ಮಾನುಯಾಯಿ ಎಂಬುವುದನ್ನು ತೋರಿಸಲು ಅವರ ಮತದಾನದ ಗುರುತು ಚೀಟಿಯನ್ನು ಟ್ವಿಟ್ಟರ್’ನಲ್ಲಿ ಪೋಸ್ಟ್ ಮಾಡಿದೆ. ಇದು ಬಿಜೆಪಿ ತನ್ನನ್ನು ವಿಮರ್ಶಿಸಿದವರನ್ನು ಟೀಕಿಸಲು ಯಾವ ಹೀನ ಮಟ್ಟಕ್ಕಿಳಿಯಲೂ ತಯಾರಿದೆ ಎಂಬುವುದಕ್ಕೆ ನಿದರ್ಶನವಾಗಿದೆ ಎಂದು ವಿಜಯ್ ಅಭಿಮಾನಿಗಳು ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಮತ್ತು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಹೆಚ್ ರಾಜಾ, ವಿಜಯ್’ರವರ ಹೆಸರು ‘ಜೋಸೆಫ್ ವಿಜಯ್’ ಎಂದು ನಮೂದಾಗಿರುವ ಮತದಾನದ ಗುರುತು ಚೀಟಿಯನ್ನು ಪೋಸ್ಟ್ ಮಾಡಿದ್ದು, ‘ಸತ್ಯ ಕಹಿಯಾಗಿರುತ್ತದೆ’ ಎಂದು ಹೇಳಿಕೊಂಡಿದ್ದಾರೆ. ಗುರುತು ಚೀಟಿಯ ಜೊತೆ 2014 ರಲ್ಲಿ ವಿಜಯ್ ‘ಕುಮುದಂ’ ನಿಯತಕಾಲಿಕದ ಸಂಪಾದಕರಿಗೆ ಬರೆದದ್ದೆಂದು ಹೇಳಲಾದ ಪತ್ರವನ್ನೂ ಪೋಸ್ಟ್ ಮಾಡಿದ್ದು, ಅದರಲ್ಲಿ ವಿಜಯ್ ತನ್ನನ್ನು ‘ಉತ್ತಮ ನಟ’ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕಾಗಿ ಸಂಪಾದಕರಿಗೆ ಧನ್ಯವಾದ ಸಲ್ಲಿಸಿರುವ ಕುರಿತು ಉಲ್ಲೇಖಿಸಿದ್ದಾರೆ.
ಈ ಕುರಿತು ಆಕ್ರೊಶ ವ್ಯಕ್ತಪಡಿಸಿರುವ ವಿಜಯ್ ಅವರ ಅಸಂಖ್ಯಾತ ಅಭಿಮಾನಿಗಳು, ಬಿಜೆಪಿ ಪಕ್ಷವು, ಹಿಂದೂ ಅಲ್ಲದವರಿಗೆ ಸರಕಾರವನ್ನು ಪ್ರಶ್ನಿಸುವ ಹಕ್ಕಿಲ್ಲವೆಂಬಂತೆ ವರ್ತಿಸುತ್ತಿದೆ. ಸರಕಾರದ ಯೋಜನೆಗಳು ಜನರ ಮೇಲಾಗುತ್ತಿರುವ ಪರಿಣಾಮಗಳನ್ನು ಪ್ರಶ್ನಿಸಿದವರ ಮೇಲೆ ಈ ರೀತಿಯ ದಾಳಿಗಳಾಗುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ. ಉದ್ರಿಕ್ತ ವಿಜಯ್ ಅಭಿಮಾನಿಗಳು ವಿಕಿಪೀಡಿಯಾ ಪೇಜಿನಲ್ಲಿ ರಾಜಾ ಅವರ ಹೆಸರನ್ನು ‘ರಾಜಾ ಶರ್ಮಾ’ ಎಂದು ಬದಲಾಯಿಸಿದರಲ್ಲದೆ, ಅವರ ವೈಯುಕ್ತಿಕ ದಾಖಲೆಗಳ ಜಾಗದಲ್ಲಿ ರಾಜಾರವರ ಪಕ್ಷವನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ.
Truth is bitter pic.twitter.com/woFdxOntRn
— H Raja (@HRajaBJP) October 22, 2017
