ವರದಿಗಾರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ಮೋದಿಯವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ರವರ ಮಗ ಜಯ್ ಶಾ ಮೇಲೆ ಇರುವ ಅವ್ಯವಹಾರದ ಆರೋಪದ ಕುರಿತಂತೆ ಮೌನ ವಹಿಸಿರುವ ಬಗ್ಗೆ ಚಾಟಿ ಬೀಸಿದ್ದಾರೆ. ಮೋದಿಯವರು ಒಂದು ಸಾಲನ್ನಾದರೂ ಈ ಕುರಿತು ಮಾತನಾಡಬೇಕೆಂದು ವ್ಯಂಗ್ಯವಾಡಿದ್ದಾರೆ.
ಮೋದಿಯವರೇ ತಾವು ಗುಜರಾತಿಗೆ ಬಂದು ಭಾಷಣದ ಮೇಲೆ ಭಾಷಣಗಳನ್ನು ಮಾಡಿದ್ದೀರಿ. ಆದರೆ ಒಂದು ಸಾಲನ್ನಾದರೂ ಜಯ್ ಶಾರವರ ಅವ್ಯವಹಾರದ ಕುರಿತಂತೆ ತುಟಿ ಬಿಚ್ಚಲಿಲ್ಲವೆಂಬುವುದು ಭ್ರಷ್ಟಾಚಾರದ ಕುರಿತು ನಿಮ್ಮ ದ್ವಂದ್ವ ನಿಲುವನ್ನು ಸ್ಪಷ್ಟಪಡಿಸುತ್ತದೆ ಎಂದು ಮಾತಿನ ಮೂಲಕ ದಾಳಿ ಮಾಡಿದ್ದಾರೆ. ಅಮಿತ್ ಶಾರವರ ಮಗ ಜಯ್ ಶಾ, ತನ್ನ ತಂದೆ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ನಂತರದ ಒಂದು ವರ್ಷದ ಅವಧಿಯೊಳಗೆ ನಷ್ಟದಲ್ಲಿದ್ದ ತನ್ನ ಕಂಪನಿ 16000 ಪಟ್ಟು ಹೆಚ್ಚಿಗಿನ ವಹಿವಾಟು ನಡೆಸಿದ ಕುರಿತು ‘ದಿ ವೈರ್’ ಸುದ್ದಿ ತಾಣ ವರದಿ ಪ್ರಕಟಿಸಿತ್ತು. ಮೋದಿಯವರು ಇದುವರೆಗೂ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.
ರಾಹುಲ್ ಗಾಂಧಿಯವರು ಗುಜರಾತಿನ ಹಿಂದುಳಿದ ವರ್ಗದ ನಾಯಕರಾಗಿರುವ ಅಲ್ಪೇಶ್ ಠಾಕೂರ್ ಮತ್ತವರ ಬೃಹತ್ ಸಂಖ್ಯೆಯ ಬೆಂಬಲಿಗರು ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರುವ ರಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಇದೇ ವೇಳೆ ಅವರು, ಭ್ರಷ್ಟಾಚಾರದ ಕುರಿತು ಉದ್ದುದ್ದ ಭಾಷಣ ಬಿಗಿಯುವ ಬಿಜೆಪಿ ಗುಜರಾತಿನ ಪಾಟೀದಾರ್ ಆಂದೋಲನದ ನಾಯಕ ನರೇಂದ್ರ ಪಟೇಲ್ ಬಿಜೆಪಿಗೆ ಸೇರಲು ಒಂದು ಕೋಟಿಯ ಆಮಿಷ ಒಡ್ಡಿರುವುದನ್ನು ತೀವ್ರವಾಗಿ ಟೀಕಿಸಿಸಿದ್ದರು. ನರೇಂದ್ರ ಪಟೇಲ್ ಬಿಜೆಪಿಗೆ ಸೇರಿದ ಕೆಲವೇ ಗಂಟೆಯೊಳಗೆ ಬಿಜೆಪಿಯ ಅನೈತಿಕ ರಾಜಕೀಯ ನಡೆಯನ್ನು ಜನರ ಮುಂದೆ ಬಯಲುಗೊಳಿಸಿದ್ದರು. ನೀವು ಅದೆಷ್ಟೇ ಕೋಟಿ ಕೊಟ್ಟರೂ ಗುಜರಾತಿನ ಈ ಧ್ವನಿಯನ್ನು ಅಡಗಿಸಲಾರಿರಿ ಎಂದು ರಾಹುಲ್ ಬಿಜೆಪಿಯನ್ನು ಟೀಕಿಸಿದರು.
ರಾಹುಲ್ ಗಾಂಧಿ ಭಾಷಣದ ವೇಳೆ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗುತ್ತಿದ್ದ ಬೃಹತ್ ಜನಸಮೂಹವನ್ನು ಹಿಂದುಳಿದ ನಾಯಕ ಅಲ್ಪೇಶ್ ಠಾಕೂರ್, ಮೌನವಹಿಸಿ ರಾಹುಲ್ ಭಾಷಣ ಕೇಳುವಂತೆ ವಿನಂತಿಸಿದಾಗ ರಾಹುಲ್ ಗಾಂಧಿ, ಅಲ್ಪೇಶ್ ರವರೇ ನೀವು ಈ ಯುವಸಮೂಹವನ್ನು ಸುಮ್ಮನಿರುವಂತೆ ಕೇಳುತ್ತಿದ್ದೀರಾ ? ಇಲ್ಲ ಖಂಡಿತಾ ಅವರು ಸುಮ್ಮನಿರಲಾರರು. ಏಕೆಂದರೆ ಮೋದಿ ಇವರನ್ನು ಆ ಮಟ್ಟಿಗೆ ಶೋಷಿಸಿದ್ದಾರೆ. ಅವರು ಸುಮ್ಮನಿರಬೇಕಾದ ಯುವಜನತೆಯಲ್ಲ. ನೀವು, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾಣಿಯವರ ನಾಯಕತ್ವ ಇವರೆಲ್ಲರೂ ಸುಮ್ಮನಿರಬೇಕೆಂದು ಕಲಿಸಿಲ್ಲ ಎಂದು ರಾಹುಲ್ ಗಾಂಧಿ ತನ್ನ ಭಾಷಣದಲ್ಲಿ ಯುವ ನಾಯಕತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
