ನವದೆಹಲಿ: ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ಸೋಮವಾರ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರಕಾರ ಸಮರ್ಥಿಸಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಜನರು ತಮ್ಮ ದೇಶಪ್ರೇಮವನ್ನು ಬಹಿರಂಗವಾಗಿ ಪ್ರದರ್ಶಿಸಿಕೊಂಡೇ ಇರಬೇಕಾದ ಅಗತ್ಯವಿದೆಯೇ’ ಎಂದು ಪ್ರಶ್ನಿಸಿದೆ.
ರಾಷ್ಟ್ರಗೀತೆ ಹಾಡದ ಜನರು ಕಡಿಮೆ ದೇಶಪ್ರೇಮಿಗಳು ಎಂದು ನಾವು ಯಾಕೆ ಭಾವಿಸಬೇಕು? ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ ಆದೇಶವನ್ನು ಪ್ರಶ್ನಿಸಿದರೆ ರಾಷ್ಟ್ರ ವಿರೋಧಿ ಎಂಬ ಹಣೆಪಟ್ಟೆ ಕಟ್ಟುತ್ತಾರೆ ಎಂಬ ಭೀತಿಯು ಜನರಲ್ಲಿದೆ. ದೇಶಪ್ರೇಮಿಗಳು ಎನಿಸಿಕೊಳ್ಳಲು ರಾಷ್ಟ್ರಗೀತೆ ಹಾಡುವ ಅಗತ್ಯ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಸುಪ್ರೀಂ ಕೋರ್ಟ್ ಆದೇಶದಲ್ಲಿರುವ ‘ಕಡ್ಡಾಯ’ ಪದವನ್ನು ಕೈಬಿಡುವ ಬಗ್ಗೆ ಯೋಚಿಸಬೇಕು ಎಂದು ಪೀಠ ಹೇಳಿದೆ. ಹಾಗಾದರೆ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಡುವುದು ಐಚ್ಛಿಕವಾಗುತ್ತದೆ.
ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರದಲ್ಲಿ ಸರಕಾರ ಸ್ಪಷ್ಟವಾದ ನಿರ್ಧಾರವನ್ನು ಕೈಗೊಳ್ಳಬೇಕು. ಇಂತಹ ವಿಚಾರಗಳ ಹೊರೆಯನ್ನು ಸುಪ್ರೀಂ ಕೋರ್ಟ್ ಮೇಲೆ ಹೊರಿಸಬಾರದು ಎಂದು ಪೀಠ ಹೇಳಿದೆ. ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂಬ ಆದೇಶವನ್ನು ಮಾರ್ಪಡಿಸುವ ಸುಳಿವನ್ನು ಸುಪ್ರೀಂ ಕೋರ್ಟ್ ನೀಡಿದೆ. ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡುವುದನ್ನು ಮುಂದುವರಿಸಬೇಕು ಎಂಬ ಇಚ್ಛೆ ಸರಕಾರಕ್ಕೆ ಇದ್ದಿದ್ದರೆ ಈ ಬಗ್ಗೆ ಸುತ್ತೋಲೆಯನ್ನು ಯಾಕೆ ಹೊರಡಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸಿನಿಮಾ ಮಂದಿರಗಳು ಸಂಪೂರ್ಣವಾಗಿ ಮನರಂಜನೆ ಕೇಂದ್ರಗಳು. ಜನರು ಮನರಂಜನೆಗಾಗಿಯೇ ಸಿನಿಮಾ ನೋಡಲು ಹೋಗುತ್ತಾರೆ. ಅಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಸರ್ಕಾರ ಬಯಸಿದರೆ ಅದನ್ನು ಸುಪ್ರೀಂ ಕೋರ್ಟ್ ಯಾಕೆ ಮಾಡಬೇಕು? ಸರ್ಕಾರವೇ ಈ ಬಗ್ಗೆ ನಿಯಮಗಳನ್ನು ರೂಪಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
