ವರದಿಗಾರ: ಆರೆಸ್ಸೆಸ್ ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಪ್ರಧಾನಿ ಮೋದಿ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿ 90ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಿನಿ ವಿಧಾನ ಸೌಧವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ಮಾಡುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಆಧಾರರಹಿತ ಆರೋಪ ಮಾಡಲು ಕಳ್ಳರಿಂದ ಮಾತ್ರ ಸಾಧ್ಯ. ಬಿಜೆಪಿ ಢೋಂಗಿಗಳ ಪಕ್ಷ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
‘ಸಬ್ ಕಾ ಸಾಥ್- ಸಬ್ ಕಾ ವಿಕಾಸ್, ಮನ್ ಕಿ ಬಾತ್ ಕೇವಲ ಪ್ರಚಾರ. ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸರಕಾರಕ್ಕೆ ಪತ್ರ ಬರೆದು, ತಮ್ಮ ಟಿಪ್ಪು ಜಯಂತಿಯಲ್ಲಿ ತನ್ನ ಹೆಸರು ಹಾಕದಂತೆ ಹೇಳುತ್ತಾರೆ. ಇದು ಸಂವಿಧಾನದ ಮೇಲಿರುವ ಗೌರವವೇ’ ಎಂದು ಪ್ರಶ್ನಿಸಿದ್ದಾರೆ.
