ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಕ್ಷೇತ್ರವಾದ ಗೋರಖ್ಪುರದ ಸ್ಥಳೀಯ ಬಿಜೆಪಿ ಮಹಿಳಾ ಘಟಕದ ನಾಯಕಿಯೊಬ್ಬರನ್ನು ಲಂಚದ ನೆಪದಲ್ಲಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ.
ಬಿಜೆಪಿಯ ಗೋರಖ್ಪುರ ಶಾಖೆಯ ಮಹಿಳಾ ಮೋರ್ಚಾದ ನಾಯಕಿ ಸರಿತಾ ಸಿಂಗ್ ಇದೀಗ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಧ್ಯ ಪ್ರವೇಶಿಸಿದ ಬಳಿಕ ಬಂಧನಕ್ಕೊಳಗಾಗಿದ್ದಾರೆ.
ಮೂಲಗಳ ಪ್ರಕಾರ, ಗೋರಖ್ಪುರದ ಎಸ್ಸೈ ರಾಜ್ ಕುಮಾರ್ ಅವರ ಮೊಬೈಲ್ ಫೋನ್ ಅಕ್ಟೋಬರ್ 13ರಂದು ಕಳವಾಗಿತ್ತು. ಈ ಪ್ರಕರಣದಲ್ಲಿ ಶಂಕಿತ ಆರೋಪಿ ಹರ್ಷಿತ್ ಬಂಧನಕ್ಕೊಳಗಾಗಿದ್ದರು.
ವಿಚಾರಣೆಯ ವೇಳೆ ಹರ್ಷಿತ್, ತಾನು ಮೂರು ಮೊಬೈಲ್ ಫೋನ್ ಗಳನ್ನು ಕಳವು ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದನು. ಹರ್ಷಿತ್ ನ ತಾಯಿ ರೀತಾ ಪಾಂಡೆ ಸಹಾಯಕ್ಕಾಗಿ ಬಿಜೆಪಿಯ ಮಹಿಳಾ ಘಟಕದ ನಾಯಕಿ ಸರಿತಾ ಸಿಂಗ್ ರನ್ನು ಸಂಪರ್ಕಿಸಿದರು.
ಸರಿತಾ ಸಿಂಗ್, 50,000 ರೂಪಾಯಿಗಳನ್ನು ಕೊಟ್ಟಲ್ಲಿ ಹರ್ಷಿತ್ ನನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಲ್ಲಿ 25000 ಗೋರಖ್ಪುರ ಮಂದಿರದ ಕಾರ್ಯದರ್ಶಿ ದ್ವಾರಿಕಾ ತಿವಾರಿಗೆ ನೀಡಲು ಹಾಗೂ ಉಳಿದದ್ದು ಪೊಲೀಸರ ಖರ್ಚು ಎಂದು ಹೇಳಿದ್ದರು. ಆತನ ತಾಯಿ ರೀತಾ ಪಾಂಡೆ, 50,000 ರೂಪಾಯಿಗಳನ್ನು ನೀಡಿದ್ದರು.
ಹಣ ನೀಡಿದ ಬಳಿಕವೂ ಹರ್ಷಿತ್ ನ ಬಿಡುಗಡೆಯಾಗದ ಕಾರಣ ಆತನ ಕುಟುಂಬದವರು ಅದನ್ನು ವಾಪಸ್ ಮಾಡಲು ಕೇಳಿಕೊಂಡರು.
ಹರ್ಷಿತ್ ನ ಕುಟುಂಬದವರು ನೆರೆಯ ಪ್ರಭಾ ಪಾಂಡೆ ಎನ್ನುವವರ ಸಹಾಯದಿಂದ ಶುಕ್ರವಾರದಂದು ಗೋರಖ್ಪುರಕ್ಕೆ ಬಂದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಭೇಟಿ ಮಾಡಿ ದೂರು ನೀಡಿದರು.
ಮುಖ್ಯಮಂತ್ರಿಯವರು ಅಲ್ಲಿನ ಹಿರಿಯ ಎಸ್ಪಿ ಸತ್ಯಾರ್ಥ ಅನಿರುದ್ಧ ಪಂಕಜ್ ರಿಗೆ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.
ಹರ್ಷಿತ್ ನ ತಾಯಿ ಲಿಖಿತ ದೂರು ನೀಡಿದ ಬಳಿಕ ಆರೋಪಿ ಸರಿತಾ ಸಿಂಗ್ ರನ್ನು ಬಂಧಿಸಲಾಯಿತು. ಅವರ ಮನೆಯಿಂದ 50000 ರೂಪಾಯಿಗಳನ್ನೂ ವಶಪಡಿಸಿಕೊಳ್ಳಲಾಗಿದೆ.
