ವರದಿಗಾರ: ಎಲ್ಲಾ ಶಿವಭಕ್ತರು ಹಿಂದೂಗಳು ಎನ್ನುವ ಮಾತಿನಲ್ಲಿ ನ್ಯಾಯವಿಲ್ಲ. ಇದು ಅತ್ಯಂತ ಅನ್ಯಾಯದ ಮಾತು. ಶಿವ ಭಕ್ತರಲ್ಲಿ ಕೆಲವರು ಮಾತ್ರ ಹಿಂದೂಗಳು ಆಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಬೆಂಗಳೂರಿನ ಮಾನವ ಧರ್ಮಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಶಿವನನ್ನು ಪೂಜಿಸುವವರೆಲ್ಲರೂ ಹಿಂದೂಗಳು ಎಂಬ ಮಾತನ್ನು ಪೇಜಾವರ ಸ್ವಾಮೀಜಿ ಮತ್ತು ಇತರ ಕೆಲವು ಯತಿಗಳು ಹೇಳುತ್ತಾ ಬಂದಿದ್ದಾರೆ. ಆದರೆ ಶಿವಭಕ್ತರೆಲ್ಲರೂ ಹಿಂದೂಗಳಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ಅವರು ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಬಲಿ ಚಕ್ರವರ್ತಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿವನ ಪರಂಪರೆಯನ್ನು ಪಾಲಿಸುವ 18 ಕೋಮುಗಳು ಈ ದೇಶದಲ್ಲಿವೆ. ಇವರೆಲ್ಲರೂ ಅವೈದಿಕರಾಗಿದ್ದಾರೆ. ತಳಸಮುದಾಯಕ್ಕೆ ಸಂಬಂಧಪಟ್ಟವರಾಗಿದ್ದು, ವೈದಿಕ ಮೌಲ್ಯಗಳನ್ನು ಸಂಪೂರ್ಣವಾಗಿ ನಿರಾಕರಿಸುವ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದ್ದಾರೆ.
ಶಿವ ಪರಂಪರೆಯನ್ನು ದಮನ ಮಾಡುವುದು ಆರ್ಯರ ಗುರಿಯಾಗಿತ್ತು. ಇದಕ್ಕಾಗಿ ಅವರು ಮೊದಲು ದಾಳಿ ಮಾಡಿದ್ದು ಶಿವ ಸಂಸ್ಕೃತಿಯ ಮೇಲೆ. ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ನಾಯಕತ್ವವನ್ನು ನಾಶ ಮಾಡಿ ಏಕ ಧರ್ಮ ಮತ್ತು ಏಕ ಸಂಸ್ಕೃತಿ ಕಟ್ಟುವ ಕೆಲಸವನ್ನು ಪ್ರಾಚೀನ ಕಾಲದಿಂದಲೂ ವೈದಿಕರು ಮಾಡುತ್ತಾ ಬಂದಿದ್ದಾರೆ ಎಂದು ವಿಶ್ಲೇಷಿಸಿದರು.
ದೇಶದ ಪ್ರತಿಯೊಂದು ಸಮುದಾಯ ಕೂಡಾ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಸಂದರ್ಭ ಒದಗಿ ಬಂದಿದೆ. ಆಯಾ ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ನಾಯಕರು ಈ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ತಮ್ಮ ಸಮುದಾಯಗಳ ಏಳಿಗೆಗೆ ದುಡಿಯಬೇಕು ಎಂದು ಕರೆ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
