ಅಭಿಪ್ರಾಯ

ಕಮಲ್ ಹಸನ್ ರನ್ನು ನಂಬಬಹುದೇ?

ಲೇಖನ: ಇಸ್ಮತ್ ಪಜೀರ್

ಈ ಶೀರ್ಷಿಕೆ ಅಸಂಬದ್ಧ ಎನಿಸಬಹುದು. ನಮಗೆ ನಟ ಕಮಲ್ ಹಸನ್ ಅವರ ವಿಶ್ವಾಸಾರ್ಹತೆ ಎಂದೂ ಅಗತ್ಯವಿಲ್ಲ. ನಮಗೆ ಬೇಕಿರುವುದು ರಾಜಕಾರಣಿ ಕಮಲ್ ಹಾಸನ್ ರವರ ವಿಶ್ವಾಸಾರ್ಹತೆ ಮಾತ್ರ.

ಕಮಲ್ ಹಸನ್ ಈ ದೇಶ ಕಂಡ ಓರ್ವ ಅದ್ಭುತ ನಟ. ರಜನೀಕಾಂತ್ ತನ್ನ ಭಾವನಾತ್ಮಕ ಪ್ರವೃತ್ತಿ ಮತ್ತು ಹೇಳಿಕೆಗಳಿಂದ ತನ್ನ ವೃತ್ತಿಯಾಚೆಗೂ ಜನರ ಮನದಲ್ಲಿ ಓರ್ವ ರಿಯಲ್ ಹೀರೋ ಆಗಿ ಪ್ರತಿಷ್ಠಾಪಿತರಾಗಿದ್ದರೆ, ಕಮಲ್ ಅವರಿಗೆ ಅಂತಹ ಕ್ರೆಡಿಟ್ ಗಳಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂದರೆ ಭಾರತೀಯರಲ್ಲದವರ ಮನದಲ್ಲಿ ಕಮಲ್ ಗೆ ಇರುವಷ್ಟು ದೊಡ್ಡ ಸ್ಥಾನ ರಜನಿಗಿಲ್ಲ. ಅಲ್ಟಿಮೇಟಾಗಿ ಇದು ಏನನ್ನು ಸೂಚಿಸುತ್ತದೆಂದರೆ ಇವರಿಬ್ಬರ ನಟನೆಯ ಮಟ್ಟವನ್ನು.

ಕಮಲ್ ರಾಜಕೀಯ ಪ್ರವೇಶಿಸುವ ಯೋಚನೆ ಮಾಡುವುದಕ್ಕಿಂತ ಬಹಳ ಹಿಂದೆಯೇ ಕೆಲವೊಂದು ಅಗತ್ಯ ಸಂದರ್ಭಗಳಲ್ಲಿ ನಾಡಿನ ಪ್ರಮುಖ ಆಗುಹೋಗುಗಳ ಬಗೆಗೆ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಹೇಳಿದ್ದಿದೆ. ಆಗಿನ ಕಮಲ್ ಗೆ ಯಾವುದೇ ರಾಜಕೀಯ ಉದ್ದೇಶಗಳಿರಲಿಲ್ಲ.‌‌ ಆದರೆ ಈಗಿನ ಕಮಲ್ ರ ಪ್ರತಿಯೊಂದು ಹೇಳಿಕೆಗಳನ್ನು ನಾವು ಹಿಂದಿಗಿಂತ ಸ್ವಲ್ಪ ಭಿನ್ನ ದೃಷ್ಟಿಯಿಂದ ನೋಡಬೇಕಾಗುತ್ತದೆ. ಬಾಬರೀ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಕಮಲ್ ,ನಮ್ಮ ಗಿರೀಶ್ ಕಾರ್ನಾಡ್ ಮತ್ತು ಕೆಲವು ಸೆಕ್ಯುಲರ್ ಚಿಂತಕರು ಆಗಿನ ಪ್ರಧಾನ ಮಂತ್ರಿ ನರಸಿಂಹ ರಾಯರನ್ನು ಭೇಟಿ ಮಾಡಿದಾಗ ಅವರ ಉಡಾಫೆ ವರ್ತನೆಯನ್ನು ಎಷ್ಟು ತೀವ್ರವಾಗಿ ಖಂಡಿಸಿದ್ದರೆಂದರೆ ” ಆ ಮನುಷ್ಯ ಈ ದೇಶದ ಪ್ರಧಾನಿ ಎಂಬ ಕಾರಣಕ್ಕೆ ಮಾತ್ರ ಆ ಮನುಷ್ಯನ ಮುಂದೆ ನನ್ನ ಆಕ್ರೋಶ ತೋರ್ಪಡಿಸದೇ ಮರಳಿ ಬಂದೆ. ಆ ಸಂಧರ್ಭದಲ್ಲಿ ಈ ಭೂಮಿ ಬಾಯಿತೆರೆದು ನಮ್ಮನ್ನು ನುಂಗಬಾರದೇ ಎಂಬಷ್ಟು ಹತಾಶೆಯಾಗಿತ್ತು” ಎಂದಿದ್ದರು.

ಕಮಲ್ ರ ತಂದೆ ಓರ್ವ ಸ್ವಾತಂತ್ರ್ಯ ಹೋರಾಟಗಾರರು. ಅವರ‌ ಅತ್ಯಂತ ಪ್ರೀತಿಯ ಗೆಳೆಯ ಹಸನ್ ಎಂಬವರ ನೆನಪಿಗಾಗಿ ತನಗೆ ತನ್ನ‌ ಹೆಸರಿನ ಜೊತೆ ಹಸನ್ ಎಂಬ ಹೆಸರು ಸೇರಿಸಿ ಹಾಕಿದ್ದರು ಎಂದು ಕಮಲ್ ಒಂದೆಡೆ ಹೇಳಿದ್ದಾರೆ.ಕಮಲ್ ಮೂಲತಃ ನಾಸ್ತಿಕರು.ಅವರ ಸೆಕ್ಯುಲರ್ ಬದ್ಧತೆಯ ಬಗ್ಗೆ ಸಂಶಯಪಡಬೇಕಾಗಿಯೂ ಇಲ್ಲ. ಅವರು ತನ್ನನ್ನು ಬಿಜೆಪಿ ಪರ ಇರುವವನಲ್ಲ ಎಂದು ತೋರಿಸಲೆಂಬಂತೆ ರಜನಿ ಏನಿದ್ದರೂ ಕೇಸರಿ ಪಾಳಯಕ್ಕೆ ಹೋಗುವವರು ಎಂಬ ಹೇಳಿಕೆಯನ್ನೂ ನೀಡಿದ್ದರು.ಇದೇ ಕಮಲ್ ಈ ಹಿಂದೆ ಅನಾಣ್ಯೀಕರಣವನ್ನು ಸಮರ್ಥಿಸಿದ್ದರು. ಇದೀಗ ಅದನ್ನು ತಪ್ಪು ಎನ್ನುತ್ತಿದ್ದಾರೆ. ಅದಕ್ಕೆ ಅವರು ನೀಡುವ ಕಾರಣ ತನ್ನ ಗೆಳೆಯರು ತನ್ನ ಅನಾಣ್ಯೀಕರಣ ಪರ ಹೇಳಿಕೆಯನ್ನು ಖಂಡಿಸಿ ವಾಸ್ತವ ವನ್ನು ತನಗೆ ಮನದಟ್ಟು ಮಾಡಿಕೊಟ್ಟರು ಎನ್ನುತ್ತಾರೆ. ಆದರೆ ಕಮಲ್ ರ ಈ ಹೇಳಿಕೆಯನ್ನು ನಂಬಲಾಗದು. ಯಾಕೆಂದರೆ ಕಮಲ್ ಅನಾಣ್ಯೀಕರಣವನ್ನು ಸಮರ್ಥಿಸಿದ್ದು ಅನಾಣ್ಯೀಕರಣ ಮಾಡಲಾದ ಸಂದರ್ಭದಲ್ಲಿ. ಅವರಿಗೆ ಅದನ್ನು ತಪ್ಪು ಎಂದು ಗೆಳೆಯರು ಮನದಟ್ಟು ಮಾಡಿಕೊಟ್ಟಿದ್ದರೆ ಅದು ಆಗಲೇ ಇದ್ದಿರಬಹುದು. ಕಮಲ್ ಅನಾಣ್ಯೀಕರಣವಾಗಿ ಒಂದು ವರ್ಷದ ಬಳಿಕ ಜನತೆಯ ಕ್ಷಮೆ ಕೇಳುತ್ತಿದ್ದಾರೆಂದರೆ ಇದರ ಹಿಂದೆ ಇರುವ ರಾಜಕೀಯ ವಾಸನೆ ಯಾರಿಗೂ ಬರದೆ ಇರಲಾರದು.

ತಿಂಗಳ ಹಿಂದೆ ರಾಜಕೀಯ ದಲ್ಲಿ ಸ್ಥಿರ ಸರಕಾರ ನೀಡಬೇಕಾದರೆ ತಾನು ಬಿಜೆಪಿಯ ಜೊತೆ ಹೋಗಲಾರೆ ಎನ್ನಲಾಗದು ಎಂಬರ್ಥ ಧ್ವನಿಸುವ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಈಗ ನಮ್ಮ ಮುಂದೆ ದ್ವಂದ್ವದಲ್ಲಿರುವ ಕಮಲ್ ಇದ್ದಾರೆ. ಒಂದಂತೂ ಸತ್ಯ. ಕಮಲ್ ಖಂಡಿತವಾಗಿಯೂ ಮೌಲ್ಯಾಧಾರಿತ ರಾಜಕಾರಣಿ ಆಗಲಾರರು. ಕಮಲ್ ರ ನಿಜವಾದ ವ್ಯಕ್ತಿತ್ವ ಮತ್ತು ರಾಜಕಾರಣಿ ಕಮಲ್ ರ ವ್ಯಕ್ತಿತ್ವದ ಮಧ್ಯೆ ಈಗ ತಾಕಲಾಟಗಳು ಪ್ರಾರಂಭವಾಗಿದೆ. ಕಮಲ್ ಬುದ್ಧಿವಂತ ನಟ ಎಂಬುವುದರಲ್ಲಿ ಸಂಶಯವಿಲ್ಲ. ಅಂತೆಯೇ ಕಮಲ್ ಬುದ್ಧಿವಂತ ರಾಜಕಾರಣಿ ಆಗ ಹೊರಟಿದ್ದಾರೆ.

ನಾಳೆ ತಮಿಳುನಾಡಿನ ರಾಜಕೀಯದಲ್ಲಿ ಬಿಜೆಪಿ ಏಕಪಕ್ಷ ಅಧಿಕಾರಕ್ಕೆ ಬರುವುದಂತೂ ಸಾಧ್ಯವಿಲ್ಲ. ಆದರೆ ಬಿಜೆಪಿಯ ಡಬಲ್ ಗೇಮ್ ರಾಜಕೀಯದಿಂದಾಗಿ ಅದು ಕಿಂಗ್ ಮೇಕರ್ ಆಗಬಾರದೆಂದೇನಿಲ್ಲ. ಅಂತಹ ಸಂದರ್ಭ ಬಂದಲ್ಲಿ ಬಿಜೆಪಿ ಜೊತೆ ಸೇರಬೇಕಾದೀತು ಎಂಬರ್ಥದಲ್ಲಿ ಕಮಲ್ ಸೂಚ್ಯವಾಗಿ ತಿಳಿಸಿಬಿಟ್ಟಿದ್ದಾರೆ. ಆ ಮಟ್ಟಿಗಂತೂ ಕಮಲ್ ರನ್ನು ಮೆಚ್ಚಬೇಕು. ಕೋಮುವಾದಿಗಳನ್ನು ಅಧಿಕಾರದಿಂದ ಹೊರಗಿಡುತ್ತೇವೆಂದ ಅನೇಕ ಸೋ ಕಾಲ್ಡ್ ಸೆಕ್ಯುಲರ್ ಪಕ್ಷಗಳು ಅಧಿಕಾರದ ಹೊಸ್ತಿಲಿಗೆ ಬಂದಾಗ ಎಲ್ಲವನ್ನೂ ಮರೆತ ಧಾರಾಳ ಉದಾಹರಣೆಗಳಿವೆ.

ಕಮಲ್ ಗೆ ಇನ್ನೊಂದು ಲೆಕ್ಕಾಚಾರವೂ ಇರಬಹುದು. ಅದೇನೆಂದರೆ ಒಂದು ವೇಳೆ ರಾಜ್ಯದಲ್ಲಿ ಅಧಿಕಾರ ಸೂತ್ರ ಹಿಡಿಯಲು ಸಾಧ್ಯವಾಗದಿದ್ದರೆ ಕೇಂದ್ರದಲ್ಲಿ ಮುಂದಿನ ಸರಕಾರದ ವೇಳೆಗೆ ಚೌಕಾಶಿ ನಡೆಸಿ ಯಾವುದಾದರೂ ಉನ್ನತ ಸ್ಥಾನ ಪಡೆಯಬಹುದು.
ಒಟ್ಟಿನಲ್ಲಿ ತಮಿಳುನಾಡಿನ ರಾಜಕೀಯ ಅತಂತ್ರತೆಯ ಲಾಭ ಪಡೆಯ ಹೊರಟ ರಾಜಕಾರಣಿ ಕಮಲ್ ತನ್ನ ವಿಚಾರಗಳಲ್ಲೂ ಸಧ್ಯ ಅತಂತ್ರರಾಗಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group