ವರದಿಗಾರ ವಿಶೇಷ

ಜಲೀಲ್ ಕರೋಪಾಡಿ ಹಂತಕರಿಗೆ ಜಾಮೀನು: ಎಡವಿದವರಾರು?

► ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಘಪರಿವಾರದ ವಕೀಲರು!!

► ನಿಗದಿತ ಅವಧಿಯೊಳಗೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ಮೀನಮೇಷ ಎಣಿಸುತ್ತಿರುವ ಪೊಲೀಸರು!

► ಈ ಕೊಲೆ ರಾಜಕೀಯವನ್ನೂ ಮೀರಿ ನಿಂತಿದೆಯೇ?

ವರದಿಗಾರ : ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದಲ್ಲಿ 8 ಆರೋಪಿಗಳಿಗೆ ಹೈಕೋರ್ಟ್’ನಿಂದ ಜಾಮೀನು ಲಭಿಸಿದೆ. ಅರೋಪಿಗಳನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಪ್ರಕಾರ ಬಂಧಿಸಲಾಗಿತ್ತು. ಈ ಸೆಕ್ಷನ್ ಪ್ರಕಾರ ಬಂಧಿಸಿದ್ದಲ್ಲಿ ಪೊಲೀಸರು ಬಂಧನದ 90 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಅರೋಪಿಗಳನ್ನು ಬಂಧನದಲ್ಲಿ ಮುಂದುವರೆಸುವಂತಿಲ್ಲ. ಇದೀಗ ಈ ಪ್ರಕರಣದಲ್ಲಿ ಆರೋಪಿಗಳ ಮೇಲೆ ಕೋಕಾ ದಾಖಲಾಗಿದ್ದ ಕಾರಣ ಬಂಧನವನ್ನು 180 ದಿನಗಳವರೆಗೂ ವಿಸ್ತರಿಸಬಹುದು. ಆದರೆ ಪೊಲೀಸರು ಬಂಧನದ ವಿಸ್ತರಣೆಗೆ ಅರ್ಜಿ ಸಲ್ಲಿಸದ ಕಾರಣ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮೈಸೂರಿನ ವಿಶೇಷ ನ್ಯಾಯಾಲಯದಿಂದ ಜಾಮೀನು ಅರ್ಜಿ ತಿರಸ್ಕಾರಗೊಂಡರೂ ಹೈಕೋರ್ಟ್’ನಿಂದ ಜಾಮೀನು ಮಂಜೂರಾಗಿರುವುದಕ್ಕೆ ಪೊಲೀಸರ ಮತ್ತು ತನಿಖಾಧಿಕಾರಿಗಳ ಬೇಜವಬ್ದಾರಿಯೇ ಕಾರಣವೆನ್ನಲಾಗಿದೆ. ಬೆಳಂದೂರು ಗ್ರಾಮದ ಪತ್ತಾಜೆ ಪ್ರಜ್ವಲ್ ರೈ (27), ಸವಣೂರು ಗ್ರಾಮದ ಅರಳ್ತಡಿ ಪುಷ್ಪರಾಜ್ (19), ಸಚಿನ್ (24), ಕುದ್ಮಾರು ಗ್ರಾಮದ ಬರೆಪ್ಪಾಡಿ ರೋಶನ್ (26), ಸವಣೂರು ಗ್ರಾಮದ ಅರಳ್ತಡಿ ಪುನೀತ್ (24), ಕರೋಪಾಡಿ ಗ್ರಾಮದ ಪಳ್ಳದಕೋಡಿ ವಚನ್ (21), ವೀರಕಂಭ ಗ್ರಾಮದ ಕೇಶವ (33), ಸುರತ್ಕಲ್ ಕೃಷ್ಣಾಪುರ ದರ್ಖಾಸ್ ಪ್ರಶಾಂತ್ (25) ಅವರೇ ಇದೀಗ ಹೈಕೋರ್ಟಿನಿಂದ ಜಾಮೀನು ಪಡೆದ ಆರೋಪಿಗಳು.

ಕರೋಪಾಡಿ ಗ್ರಾಮದ ಬೇತ ರಾಜೇಶ್ ನಾಯಕ್ (39), ಮಾಣಿ ಗ್ರಾಮದ ಲಕ್ಕಪ್ಪಕೋಡಿ ನರಸಿಂಹ ಮತ್ತು ಕನ್ಯಾನ ಗ್ರಾಮದ ಪಿಲಿಂಗುಳಿ ಸತೀಶ್ ರೈ (44) ಅವರ ಮೇಲೆ ಇತರ ಪ್ರಕರಣಗಳು ದಾಖಲಾಗಿರುವುದರಿಂದ ಈ ಹಂತದಲ್ಲಿ ಜಾಮೀನು ಮಂಜೂರುಗೊಳಿಸಲು ನ್ಯಾಯಾಲಯ ನಿರಾಕರಿಸಿದ ಹಿನ್ನಲೆಯಲ್ಲಿ ಅವರ ನ್ಯಾಯಾಂಗ ಬಂಧನ ಮುಂದುವರಿದಿದೆ.

ಇದೊಂದು ರಾಜಕೀಯ ಪ್ರೇರಿತ ಕೊಲೆ ಎನ್ನಲಾಗಿದ್ದರೂ, ಕೋಮು ವಿಧ್ವೇಷವೇ ಕೊಲೆಗೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ. ಈ ಹಿಂದೆ ಕನ್ಯಾನ ಭಾಗದಿಂದ ಬಂಟ ಸಮುದಾಯಕ್ಕೆ ಸೇರಿದ ಹುಡುಗಿಯೊಬ್ಬಳು ಮುಸ್ಲಿಂ ಹುಡುಗನ ಜೊತೆ ಪ್ರೀತಿಸಿ ಪಲಾಯನ ಮಾಡಿದ ಪ್ರಕರಣದಲ್ಲಿ ಹತ್ಯೆಯಾದ ಜಲೀಲ್ ಕರೋಪಾಡಿಯವರು ಆ ಹುಡುಗನ ಬೆಂಬಲಕ್ಕೆ ನಿಂತಿದ್ದರು ಎಂಬ ಆರೋಪದಲ್ಲಿ ಕೊಲೆ ಮಾಡಲಾಗಿದೆ ಹಾಗೂ ಅರೋಪಿಗಳಲ್ಲೊಬ್ಬನು ಈ ಹುಡುಗಿಯ ಸಂಬಂಧಿಕನಾಗಿದ್ದಾನೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಹಾಡುಹಗಲಲ್ಲೇ ನಡೆದ ಕೊಲೆಯ ಹಂತಕರಿಗೆ ನೆರವಾದವರು ಯಾರು?

ಈ ಕೊಲೆ ಪ್ರಕರಣದಲ್ಲಿ ಸಂಚು ರೂಪಿಸಿದವರೆಂದು ಹೇಳಲಾದ ದಿನೇಶ್ ಶೆಟ್ಟಿ ಮತ್ತವನ ಇಬ್ಬರು ಸಹಚರರನ್ನು ಬಂಧಿಸಲು ಮೃತ ಜಲೀಲ್ ತಂದೆ ಉಸ್ಮಾನ್ ಕರೋಪಾಡಿಯವರು ಹಲವು ಪತ್ರಿಕಾಗೋಷ್ಟಿ ನಡೆಸಿ ಬಂಧಿಸುವಂತೆ ಒತ್ತಾಯಿಸುತ್ತಿದ್ದರೂ, ಪೊಲೀಸರು ಮಾತ್ರ ಅವರು ಕೇರಳದಲ್ಲಿ ತಲೆಮರೆಸಿಕೊಂಡಿದ್ದಾರೆಂದು ಹೇಳುತ್ತಿದ್ದರು. ಆದರೆ ಉಸ್ಮಾನ್’ರವರು ಇದನ್ನು ನಿರಾಕರಿಸಿ, ಆರೋಪಿಗಳು ಊರಿನಲ್ಲೇ ಇದ್ದು, ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲಿ ಭಾಗವಹಿಸುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಅವರನ್ನು ಬಂಧಿಸುತ್ತಿಲ್ಲ ಎಂದು ಪತ್ರಿಕಾಗೋಷ್ಟಿಯಲ್ಲಿ ದೂರಿದ್ದರು.ಈ ಕುರಿತು ಸ್ಪಷ್ಟ ಪುರಾವೆಗಳಿದ್ದರೂ ಪೊಲೀಸರು ಮಾತ್ರ ಅವರನ್ನು ರಕ್ಷಿಸುತ್ತಲೇ ಬಂದರೆಂದು ಉಸ್ಮಾನ್ ಆರೋಪಿಸುತ್ತಿದ್ದರು. ಕೊನೆಗೆ ಈ ಆರೋಪಿಗಳು ರಿಮಾಂಡ್ ಅರ್ಜಿ ಸಲ್ಲಿಸಿ, ಹೈಕೋರ್ಟಿನಿಂದ ತಮ್ಮನ್ನು ಬಂಧಿಸಬಾರದೆಂದು ಕೇಳಿಕೊಂಡಿದ್ದರು. ತನ್ನ ಮುಂದಿನ ಆದೇಶದವರೆಗೆ ಇವರನ್ನು ಬಂಧಿಸಬಾರದೆಂದು ಕೋರ್ಟ್ ಇವರ ಅರ್ಜಿಯನ್ನು ಪುರಸ್ಕರಿಸಿತ್ತು. ದಿನೇಶ್ ಶೆಟ್ಟಿ ಕರೋಪಾಡಿ ಪಂಚಾಯತ್’ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದಾರೆ ಮತ್ತು ಈ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಚಿಕ್ಕಪ್ಪನ ಮಗನಾಗಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಕಳೆದ ಆರು ತಿಂಗಳಲ್ಲಿ ಸಲ್ಲಿಸಲು ಸಾಧ್ಯವಾಗದ ಆರೋಪ ಪಟ್ಟಿಯನ್ನು ಇನ್ನು ಮೂರು ದಿನಗಳಲ್ಲಿ ಸಲ್ಲಿಸಲಿದ್ದಾರೆ. ಉಸ್ಮಾನ್ ಕರೋಪಾಡಿ ಹೆಸರಿಸಿದ್ದ ದಿನೇಶ್ ಶೆಟ್ಟಿ ಮತ್ತವನ ಇಬ್ಬರು ಸಹಚರರ ಮೇಲೆ ಈಗ ಪ್ರಕರಣ ದಾಖಲಿಸಿ, ಪೂರ್ವ ನಿಗದಿಯಂತೆ ಅವರಿಗೂ ಜಾಮೀನು ಸಿಗುವಂತೆ ಮಾಡುವುದು ಇದರ ಹುನ್ನಾರವಾಗಿದೆ ಎಂಬುವುದು ಸ್ಥಳೀಯರ ವಾದವಾಗಿದೆ. ದಿನೇಶ್ ಶೆಟ್ಟಿ ಮತ್ತಿಬ್ಬರರ ಮೇಲೆ ಈ ಪ್ರಕರಣದ ಸಂಚು ರೂಪಿಸಿದ ಆರೋಪವಿದ್ದು, ಇದೀಗ ಪ್ರಮುಖ ಆರೋಪಿಗಳಿಗೆ ಜಾಮೀನು ದೊರೆತಿರುವಾಗ ಅದರ ಆಧಾರದ ಮೇಲೆ ಇವರಿಗೂ ಹೈಕೋರ್ಟ್ ಜಾಮೀನು ನೀಡಬಹುದೆನ್ನುವುದು ಸ್ಥಳೀಯರು ನೀಡುವ ಸಮರ್ಥನೆಯಾಗಿದೆ.

ಈ ಘಟನೆಯಲ್ಲಿ ಮೂರು ಜನ ಪ್ರತ್ಯಕ್ಷ ಸಾಕ್ಷಿಗಳಿದ್ದಾರೆ. ಹೈಕೋರ್ಟ್’ನ ಹಿರಿಯ ವಕೀಲರೊಬ್ಬರ ಪ್ರಕಾರ, ಕೊಲೆ ಪ್ರಕರಣವೊಂದರ ವಿಚಾರಣೆಯ ಹಂತದಲ್ಲೇ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸದೆ ಆರೋಪಿಗಳಿಗೆ ಜಾಮೀನು ಸಿಕ್ಕಿರುವ ಅತಿ ವಿರಳ ಪ್ರಕರಣ ಇದಾಗಿದೆ. ಹಂತಕರೆಲ್ಲರೂ ಈಗ ಹೊರಗಿರುವ ಕಾರಣ ಘಟನೆಯ ಕುರಿತು ಸಾಕ್ಷಿ ಹೇಳಲು ಮುಂದೆ ಬರುವವರು ಯಾರು ಮತ್ತು ಈ ಪ್ರಕರಣದ ತನಿಖೆ ನೈಜ ದಿಕ್ಕಿನಲ್ಲಿ ಸಾಗುವುದೂ ಸಂಶಯವೆನಿಸಿದೆ.

ಈ ಘಟನೆಯ ಕಳವಳಕಾರಿ ಅಂಶವೆಂದರೆ ಪ್ರಮುಖವಾಗಿ ಸಂಘಪರಿವಾರದ ಎಲ್ಲಾ ಕ್ರಿಮಿನಲ್ ಕೇಸುಗಳಲ್ಲಿ ವಕೀಲರಾಗಿ ಕಾಣಸಿಗುವ ಅರುಣ್ ಶ್ಯಾಂ ಮತ್ತು ಪಿ ಪಿ ಹೆಗ್ಡೆ ಈ ಕೊಲೆ ಆರೋಪಿಗಳ ವಕೀಲರಾಗಿರುವುದು. ಮೃತ ಜಲೀಲ್ ತಂದೆ ಉಸ್ಮಾನ್ ಕರೋಪಾಡಿ ಆರೋಪಿಸಿರುವ ದಿನೇಶ್ ಶೆಟ್ಟಿ ಮತ್ತು ಇತರೆ ಇಬ್ಬರ ಬಂಧನಕ್ಕೆ ಹೈಕೋರ್ಟಿನಿಂದ ತಡೆಯಾಜ್ಞೆ ತರುವಲ್ಲಿ ಪಿ ಪಿ ಹೆಗ್ಡೆ ಪ್ರಮುಖ ಪಾತ್ರ ವಹಿಸಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದಿನೇಶ್ ಶೆಟ್ಟಿ ಕರೋಪಾಡಿ ಗ್ರಾಮ ಪಂಚಾಯತ್’ನ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದಾರೆ. ಒಟ್ಟಿನಲ್ಲಿ ಹಲವು ಕೋನಗಳಲ್ಲಿ ಗಮನವಿಟ್ಟು ಈ ಪ್ರಕರಣವನ್ನು ನೋಡುವುದಾದರೆ ಜಲೀಲ್ ಕರೋಪಾಡಿಯವರ ಹಂತಕರನ್ನು ರಕ್ಷಿಸುವಲ್ಲಿ ಹಲವು ಬಲಿಷ್ಟ ಕಾಣದ ಕೈಗಳು ಒಟ್ಟಾಗಿ ನಿಂತಿವೆ ಎನ್ನುವುದು ಮಾತ್ರ ಸ್ಪಷ್ಟವಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group