ವರದಿಗಾರ: ಸೌಹಾರ್ದತೆಯನ್ನು ಹೆಚ್ಚಿಸುವ ಪವಿತ್ರ ಹಬ್ಬದಲ್ಲಿ ಒಂದಾದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಧ್ವನಿವರ್ಧಕಗಳಲ್ಲಿ ಆಝಾನ್ ಹೇಳುವುದರ ಜತೆ ತ್ರಿಪುರಾದ ರಾಜ್ಯಪಾಲ ತಥಾಗತ ರಾಯ್ ಹೋಲಿಕೆಯನ್ನು ಮಾಡಿದ್ದು ಸದ್ಯ ವಿವಾದಕ್ಕೆ ಗುರಿಯಾಗಿದೆ.
ಪಶ್ಚಿಮ ಬಂಗಾಳದಲ್ಲಿ ಪಟಾಕಿ ಸಿಡಿಸುವುದರ ಮೇಲೆ ಸರಕಾರ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆಯಲ್ಲಿ ಅವರು ಈ ಟ್ವೀಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ತೀವ್ರ ಆಕ್ಷೇಪವೂ ದೇಶದಾದ್ಯಂತ ವ್ಯಕ್ತವಾಗುತ್ತಿದೆ. ಅದಲ್ಲದೆ ರಾಜ್ಯಪಾಲರ ಈ ನಡೆಯ ವಿರುದ್ಧ ಅನೇಕರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪಟಾಕಿ ಸಿಡಿಸುವ ವಿಚಾರವಾಗಿ ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ಪ್ರತಿ ದೀಪಾವಳಿ ಸಂದರ್ಭದಲ್ಲಿಯೂ ಪಟಾಕಿಗಳಿಂದ ಶಬ್ದ ಮಾಲಿನ್ಯವಾಗುತ್ತದೆ ಎಂಬ ವಿವಾದ ಶುರುವಾಗುತ್ತದೆ. ಆದರೆ, ಮುಂಜಾನೆ 4.30ಕ್ಕೆ ಕೇಳಿಬರುವ ಆಜಾನ್ ಬಗ್ಗೆ ವಿವಾದವಾಗುವುದಿಲ್ಲ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಆಜಾನ್ನಿಂದ ಶಬ್ದ ಮಾಲಿನ್ಯವಾಗುವ ಬಗ್ಗೆ ಜಾತ್ಯತೀತವಾದಿಗಳು ಸುಮ್ಮನಿರುವ ಬಗ್ಗೆ ಉಲ್ಲೇಖಿಸಿದ ಅವರು, ಧ್ವನಿವರ್ಧಕ ಬಳಸಬೇಕೆಂದು ಕುರ್ ಆನ್ನಲ್ಲಿ ಎಲ್ಲೂ ಹೇಳಿಲ್ಲ ಎಂದು ಹೇಳಿದ್ದಾರೆ.
