ವರದಿಗಾರ: 2002ರಲ್ಲಿ ಗುಜರಾತಿನಲ್ಲಿ ನಡೆದ ಹತ್ಯಾಕಾಂಡವು ಕೇಂದ್ರದ ಆಡಳಿತದಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದ ಮೇಲಿನ ಅತ್ಯಂತ ದೊಡ್ಡ ಕಪ್ಪು ಚುಕ್ಕೆಯಾಗಿರಬೇಕು. ಅದಕ್ಕಾಗಿಯೇ 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿರಬಹುದು ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತನ್ನ ಅಭಿಪ್ರಾಯವನ್ನು ಹೇಳಿದ್ದಾರೆ.
ಅವರು’ ದಿ ಕೊಯಲಿಷನ್ ಇಯರ್ಸ್ 1996-2012′ ನ ಮೂರನೇ ಸಂಚಿಕೆಯ “ಫಸ್ಟ್ ಫುಲ್ ಟರ್ಮ್ ನಾನ್ ಕಾಂಗ್ರೆಸ್ ಗವರ್ನಮೆಂಟ್” ಎಂಬ ಅಧ್ಯಾಯದಲ್ಲಿ ತನ್ನ ಅಭಿಪ್ರಾಯವನ್ನು ಹೇಳಿದ್ದಾರೆ.
ಆ ಸಂದರ್ಭ ಆಡಳಿತದಲ್ಲಿದ್ದ NDA ಜಾರಿಗೆ ತಂದ ‘ಇಂಡಿಯಾ ಶೈನಿಂಗ್’ ಎಂಬ ಅಭಿಯಾನವೂ ದೇಶದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಬೀರಿದ ಕಾರಣ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರ ಚುನಾವಣೆಯಲ್ಲಿ ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿ ಸೋಲನ್ನು ಅನುಭವಿಸಿದೆ ಎಂದು ಅವರು ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದ ಅವಧಿಯುದ್ದಕ್ಕೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬೇಡಿಕೆ ಹೆಚ್ಚಿತ್ತು ಮತ್ತು ಮತೀಯ ಹಿಂಸಾಚಾರ ಹೆಚ್ಚಿದ ಪರಿಣಾಮ ಗುಜರಾತ್ ನಲ್ಲಿ ಜನರ ಹತ್ಯಾಕಾಂಡ ನಡೆಯಿತು ಎಂದು ಅವರು ಹೇಳಿದ್ದಾರೆ.
