ರಾಜ್ಯ ಸುದ್ದಿ

ಸರಕಾರಕ್ಕೆ ಕೇವಲ ಮೂರು ಅಕ್ಷರವನ್ನು ಮಾತ್ರ ನಿಷೇಧಿಸಲು ಸಾಧ್ಯವೇ ಹೊರತು ಜನರ ಮನಸ್ಸನ್ನಲ್ಲ: ‘ನಮಗೂ ಹೇಳಲಿಕ್ಕಿದೆ’ ಮಹಾ ಸಮಾವೇಶದಲ್ಲಿ ಪಾಪ್ಯುಲರ್ ಫ್ರಂಟ್

ವರದಿಗಾರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಗ್ರಹಿಸುವ ಕೇಂದ್ರ ಸರಕಾರ ಜನವಿರೋಧಿ ನೀತಿಯನ್ನು ವಿರೋಧಿಸಿ ರಾಷ್ಟವ್ಯಾಪ್ತಿ ಹಮ್ಮಿಕೊಂಡಿರುವ ‘ನಮಗೂ ಹೇಳಲಿಕ್ಕಿದೆ’ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಐತಿಹಾಸಿಕ ಸಮಾವೇಶವು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆದಿತ್ಯವಾರ ನಡೆಯಿತು.

ಮಹಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕ್ಕರ್, ಸಂಘಪರಿವಾರವು ಸಂಘಟನೆಯ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸುತ್ತಿದ್ದು, ಈ ಎಲ್ಲಾ ಆರೋಪವು ನಿರಾಧಾರವಾಗಿದೆ ಮತ್ತು ಇದು ಸತ್ಯಕ್ಕೆ ದೂರವಾಗಿದೆ. ಈ ಸಂಬಂಧ ಯಾವುದಾದರೂ ಒಂದು ಸಾಕ್ಷ್ಯಾಧಾರವನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಸುಳ್ಳು ವಿಜೃಂಬಿಸುತ್ತಿದೆ ಮತ್ತು ಸುಳ್ಳಿನ ಸಾಮ್ರಾಜ್ಯಕ್ಕೆ ಪಾಪ್ಯುಲರ್ ಫ್ರಂಟ್ ಬಹುದೊಡ್ಡ ಎದುರಾಳಿಯಾಗಿದೆ. ನಾವು ಪ್ಯಾಷಿಸ್ಟರನ್ನು ಎದುರಿಸುತ್ತಿದ್ದೇವೆ ಮತ್ತು ವಿರೋಧಿಸುತ್ತೇವೆ. ಅದಕ್ಕಾಗಿ ಅವರು ಕಂಡುಕೊಂಡ ಮಾರ್ಗವಾಗಿದೆ ಸಂಘಟನೆಯನ್ನು ನಿಗ್ರಹಿಸುವುದು. ನಿಮ್ಮ ಬೆದರಿಕೆಗಳಿಗೆ ನಾವು ಹಿಂಜರಿಯುವುದಿಲ್ಲ. ಬದಲಾಗಿ ಮತ್ತಷ್ಟು ಗಟ್ಟಿಯಾಗಿ ಸಂಘಪರಿವಾರದ ವಿರುದ್ಧ ಧ್ವನಿ ಮೊಳಗಿಸುತ್ತೇವೆ. ಸತ್ಯವನ್ನು ಜನತೆಗೆ ತಲುಪಿಸುತ್ತೇವೆ ಎಂದರು.

ದೇಶವು ಸ್ವಾತಂತ್ರ್ಯಗೊಳ್ಳಲು ಯಾವುದೇ ಕೊಡುಗೆ ನೀಡದವರು, ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯನ್ನು ಕೊಂದವರು ದೇಶ ಪ್ರೇಮದ ಬಗ್ಗೆ ಪಾಠ ಹೇಳಲು ಬಂದಿದ್ದಾರೆ. ದೇಶಪ್ರೇಮದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿದೆ ಮತ್ತು ದೇಶ ಸೇವೆಗಾಗಿ ಯಾವುದೇ ತ್ಯಾಗಕ್ಕೂ ಪಾಪ್ಯುಲರ್ ಫ್ರಂಟ್ ಸಿದ್ದವಾಗಿದೆ.

ದೇಶದಲ್ಲಿ ಪ್ರಗತಿಪರರನ್ನು, ಚಿಂತಕರನ್ನು ಮತ್ತು ಸಂಘಪರಿವಾರದ ವಿರುದ್ಧ ಮಾತನಾಡುವವರನ್ನು ಗುರಿಪಡಿಸಲಾಗುತ್ತಿದ್ದು, ಅದರ ಭಾಗವಾಗಿ ವಿಚಾರವಾದಿ ಎಂ.ಎಂ ಕಲ್ಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ರನ್ನು ಹತ್ಯೆಗೈಯ್ಯಲಾಗಿದೆ. ಆದರೆ ಇವರ ಸಾವನ್ನು ವ್ಯರ್ಥವಾಗುವುದಕ್ಕೆ ನಾವು ಬಿಡುವುದಿಲ್ಲ. ಈ ಶಕ್ತಿಗಳಿಂದ ದೇಶವನ್ನು ಮುಕ್ತ ಮಾಡುವುದೇ ನಮ್ಮ ಕನಸು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬನಿಗೂ 15 ಲಕ್ಷ ರೂಪಾಯಿ ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಇದುವರೆಗೂ ಯಾರೊಬ್ಬನ ಖಾತೆಗೂ ಹಣ ಬಂದಿಲ್ಲ. ನನ್ನ 15 ಲಕ್ಷ ರೂಪಾಯಿಯನ್ನು ಅಮಿತ್ ಶಾ ಮಗನಿಗೆ ನೀಡಲಿ ಎಂದರು.

ಸಮಾಜದಲ್ಲಿ ಜಾತಿ, ಧರ್ಮಗಳ ನಡುವೆ ಭಿನ್ನತೆಯನ್ನು ಸೃಷ್ಠಿಸಲಾಗುತ್ತಿದೆ. ಆ ಮೂಲಕ ಸೌಹಾರ್ದತೆಯನ್ನು ಒಡೆಯಲಾಗುತ್ತಿದೆ. ಇದು ದೇಶಕ್ಕೆ ಮಾರಕವಾಗಿದೆ. ಇದರ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು ಇಂತಹ ಸಮಾಜ ವಿರೋಧಿ ಕೃತ್ಯದಲ್ಲಿ ತೊಡಗಿರುವವರು ತಮ್ಮ ರಾಕ್ಷಸೀಯ ಪ್ರವೃತ್ತಿಯನ್ನು ನಿಲ್ಲಿಸಬೇಕೆಂದು ಇ.ಅಬೂಬಕ್ಕರ್ ಎಚ್ಚರಿಕೆಯನ್ನು ನೀಡಿದ್ದಾರೆ. ಮೊದಲು ರಾಕ್ಷಸೀಯ ಶಕ್ತಿಗಳು ಲೂಟಿ ಮಾಡಿ ಕೊಲೆ ಮಾಡಿ ಹೋಗುತ್ತಿದ್ದರು. ಇಂದು ಆರೆಸ್ಸೆಸ್ ಮಾತನಾಡುತ್ತಿದೆ. ಇವರೊಂದಿಗೆ ಕೆಲ ಮಾಧ್ಯಮಗಳೂ ಕೈ ಜೋಡಿಸಿದೆ. ನಿರಂತರವಾಗಿ ಸುಳ್ಳನ್ನು ಬಿತ್ತರಿಸುತ್ತಾ, ಸಮಾಜಕ್ಕೆ ಸತ್ಯವೆಂದು ತೋರ್ಪಡಿಸುವ ಶತ ಪ್ರಯತ್ನ ನಡೆಸುತ್ತಿದ್ದು, ಸತ್ಯ ಎಂದೂ ಸತ್ಯವಾಗಿರುತ್ತದೆ ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡುತ್ತಾ, ನಮಗೆ ದನಗಳ ಭಾರತ ಬೇಕಿಲ್ಲ, ಜನಗಳ ಭಾರತ ಬೇಕು. ಪ್ರಧಾನಿ ನರೇಂದ್ರ ಮೋದಿ ದನಗಳನ್ನೇ ಇಟ್ಟುಕೊಳ್ಳಲಿ, ಅಹಿಂದ ವರ್ಗದವರು ಉತ್ತಮ ಸಮಾಜ ನಿರ್ಮಿಸಲು ಮುಂದಾಗಲಿ. ಕರ್ನಾಟಕದಲ್ಲಿ ಮುಸಲ್ಮಾನರು ಮತ್ತು ದಲಿತರು ಒಂದಾದರೆ ಈ ಕರ್ನಾಟಕವೇ ನಿಮ್ಮದಾಗುತ್ತೆ. ಜನರನ್ನು ಕೊಂದವರು ದೇಶವನ್ನು ಆಳುತ್ತಿದ್ದಾರೆ. ಇಲ್ಲಿ ದನಗಳಿಗೆ ಗೌರವವಿದೆ, ಜನಗಳಿಗೆ ಗೌರವವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ದನ ಕೊಲ್ಲುವವರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ. ಆದರೆ ಜನರನ್ನು ಕೊಲೆ ಮಾಡಿದವರಿಗೆ ಶಿಕ್ಷೆಯಾಗುತ್ತಿಲ್ಲ. ದನಗಳ ಭಾರತಕ್ಕಿಂತ ಜನಗಳ ಭಾರತದ ನಿರ್ಮಾಣ ಕಾರ್ಯ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ಬೇಕಾದರೆ ದನಗಳ ಭಾರತ ಕಟ್ಟಿಕೊಳ್ಳಲಿ. ದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರತಿಯೊಬ್ಬರೂ ಧ್ವನಿಗೂಡಿಸಬೇಕಿದೆ.

ಪಾಪ್ಯುಲರ್ ಫ್ರಂಟ್ ಭಯೋತ್ಪಾದಕ ಸಂಘಟನೆಯಲ್ಲ. ನಮ್ಮಲ್ಲಿ ಜಾತಿ , ಧರ್ಮ ಎಂದು ಜಗಳ ನಡೆಸಲು ಮುಂದಾಗುವ ಸಂಘಟನೆಗಳು ನಿಜವಾದ ಆತಂಕವಾದಿಗಳು. ಭಾರತವನ್ನು ಭಾರತವನ್ನಾಗಿ ಬದಲಾವಣೆ ಮಾಡಬೇಕಾದರೆ ಬಿಜೆಪಿ ಮತ್ತು ಸಂಘಪರಿವಾರ ಇಂದು ಕಾಂಗ್ರೆಸ್ ಮುಕ್ತ, ನಾಳೆ ಮುಸ್ಲಿಂ ಮುಕ್ತ, ನಾಡಿದ್ದು ಬೌದ್ಧ, ಜೈನ ಮುಕ್ತ ದೇಶ ಎನ್ನುತ್ತಾರೆ. ಇದು ನಮ್ಮ ದೇಶ. 4% ಇರುವ ನಿಮ್ಮದಲ್ಲ. ನೀವು ನಮ್ಮ ಬಾಗಿಲು ಕಾಯುವ ಕೆಲಸ ಮಾಡಬೇಕಾಗಿತ್ತು. ಆದರೆ ಈಗ ನಿಮ್ಮ ಬಾಗಿಲು ಕಾಯುವ ಹಾಗೆ ನಾವೇ ಮಾಡಿಕೊಂಡಿದ್ದೇವೆ. ಒಟ್ಟಿನಲ್ಲಿ ನಾವು ಜಾಗೃತರಾಗಬೇಕು ಎಂದು ಹೇಳಿದರು.

‘ಅಚ್ಚೇ ದಿನ್ ಅಯೇಗಾ’ಎಂದು ಹೇಳುತ್ತಾ ಇಂದು ಅಚ್ಚೇ ದಿನ್ ‘ಅಮಿತ್ ಶಾ ಕ ಬಚ್ಚೆ ಕೊ ಆಯಾ’ ಎಂದು ಹೇಳಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಬ್ಕಾ ಸಾತ್ ಸಬ್ಕಾ ವಿಕಾಸ್ ಎಂಬುದು ಬಹುದೊಡ್ಡ ನಾಟಕವಾಗಿದೆ. ದಲಿತ ಯುವತಿಯನ್ನು ಅತ್ಯಾಚಾರ ಮಾಡುತ್ತಿದ್ದೀರಿ ಮತ್ತು ಮುಸಲ್ಮಾನರನ್ನು ಹತ್ಯೆಗೈಯ್ಯುತ್ತಿದ್ದೀರಿ. ಪಾಪ್ಯುಲರ್ ಫ್ರಂಟ್ ಸಮಾಜದಲ್ಲಿ ಸಾಮಾಜಿಕ ನ್ಯಾಯ, ಸಹೋದರತೆ ಮತ್ತು ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.

ಭಾರತವು ಭಾತರವಾಗಿ ಉಳಿಯಬೇಕೇ ವಿನಹ ಕೊಲೆಗಡುಕರ ಭಾರತವಾಗಬಾರದು. ದರಿದ್ರ್ಯ ಭಾರತವಾಗಬಾರದು. ದೇಶವು ಹಸಿವಿನಂದ ಬಳಲುತ್ತಿದೆ ಈ ಕಾರಣಕ್ಕೆ ಪ್ರಧಾನಿಗೆ ನಾಚಿಕೆಯಾಗಬೇಕು. ನಿಮ್ಮದು ಮನ್ ಕಿ ಬಾತ್ ಅಥವಾ ಮಂಕಿ ಬಾತ? ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. ನಿಮ್ಮ ಮಾತನ್ನು ಕೇಳಿಸಿಕೊಳ್ಳಿ ಎಂದು ಜನರ ಮೇಲೆ ಹೇರುತ್ತೀರಲ್ವಾ ಮಾನ್ಯ ಪ್ರಧಾನಿಗಳೇ ಸ್ವಲ್ಪ ನಮ್ಮ ಮಾತುಗಳನ್ನು ನೀವು ಕೇಳಿಕೊಳ್ಳಿ, ನಾವ್ಯಾರೂ ನಿಮ್ಮನ್ನು ಕ್ಷಮಿಸಿಕೊಳ್ಳುವುದಿಲ್ಲ ಮತ್ತು ನಿಮಗೆ ತಕ್ಕ ಉತ್ತರವನ್ನು ಚುನಾವಣೆಯ ಮೂಲಕ ಕೊಡುತ್ತೇವೆ ಎಂದು ಹೇಳಿದ್ದಾರೆ.

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕೊಡುಗೆಯನ್ನು ಇಂದಿಗೂ ನಾವು ಗುರುತಿಸಲು ವಿಫಲರಾಗಿದ್ದೇವೆ. ಅವರನ್ನು ಹೊಸದಿಲ್ಲಿಯ ಕೆಂಪುಕೋಟೆಯ ಮೇಲಿಡಬೇಕಿತ್ತು. ಮುಂದೆ ಟಿಪ್ಪುರವರ ಪುತ್ಥಳಿಯನ್ನು ರಾಜ್ಯದಲ್ಲಿ ನಿರ್ಮಾಣ ಮಾಡಬೇಕೆಂದು ಕರೆ ನೀಡಿದರು.

ಪ್ರಸಾವಿಕ ಭಾಷಣ ಮಾಡಿ ಸ್ವಾಗತಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಯಾಸಿರ್ ಹಸನ್ , ಇದು ಬಾಬಾಬುಡನ್ ಸೂಫಿ ಸಂತರು, ಬಸವಣ್ಣರಂತಹ ಕ್ರಾಂತಿಕಾರಿ ಯೋಗಿಗಳು ಬಾಳಿ ಬದುಕಿದ ನಾಡು. ದೇಶದ ವಿಮೋಚನೆಗಾಗಿ ಬ್ರಿಟೀಷರೊಂದಿಗೆ ರಣರಂಗದಲ್ಲಿ ಹೋರಾಡಿ ಹುತಾತ್ಮರಾದ ಮೈಸೂರ ಹುಲಿ ಟಿಪ್ಪು ಸುಲ್ತಾನ್ ವೀರ ಮರಣವನ್ನಪ್ಪಿದ ನೆಲವಿದು. ರಾಷ್ಟ್ರ ಕವಿ ಕುವೆಂಪು ರವರ ಶಾಂತಿಯ ಬೀಡು. ಇಂತಹ ನಾಡಿನಲ್ಲಿ ನಾವೆಲ್ಲರೂ ಹುಟ್ಟಿಕೊಂಡಿರುವುದಕ್ಕೆ ಹೆಮ್ಮೆ ಮತ್ತು ಅಭಿಮಾನವಿದೆ.

ನಾಡಿನ ಶಾಂತಿಯ ಪರಂಪರೆಯ ಉಳಿವಿಗಾಗಿ ಜೀವ ಮತ್ತು ಜೀವನವನ್ನು ನೀಡಿದ ಗೌರಿ ಲಂಕೇಶ್ ರ ವೇದಿಕೆಯಿದು. ಅವರು 2007ರ ಫೆಬ್ರವರಿ 17ರಂದು ಬೆಂಗಳೂರಿನಲ್ಲಿ ನಡೆದ ಎಂಪವರ್ ಇಂಡಿಯಾ ಕಾನ್ಫರೆನ್ಸ್ ನಲ್ಲಿ ಹೇಳಿದ್ದ ‘ಹಮ್ ಹೋಂಗೆ ಕಾಮ್ ಯಾಬ್’ ಎಂಬ ವಿಶ್ವಾಸದೊಂದಿಗೆ ನಿರಂತರವಾಗಿ ಹೋರಾಟದಲ್ಲಿದ್ದರು. ಖಂಡಿತವಾಗಿಯೂ ಅವರು ಕಾಮ್ ಯಾಬ್ ಆಗಿದ್ದಾರೆ. ಅದೇ ಹಾದಿಯಲ್ಲಿ ನಾವು ಕೂಡ ಯಶಸ್ವಿಯಾಗಲಿದ್ದೇವೆ ಎಂಬ ಅಚಲ ವಿಶ್ವಾಸ ನಮಗಿದೆ ಎಂದು ಹೇಳಿದರು. ಜೀವವನ್ನಾದರೂ ನೀಡುವೆವು ಆದರೆ ಎಂದೂ ನಾವು ಪ್ಯಾಷಿಸ್ಟರ ವಿರುದ್ಧ ಮಂಡಿಯೂರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

ಮುಖ್ಯ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ಶರೀಫ್ ಮಾತನಾಡಿ, ದೇಶದಲ್ಲಿ ವ್ಯಾಪಕವಾಗಿ ನಕಲಿ ಎನ್ಕೌಂಟರ್ ಗಳು ನಡೆಯುತ್ತಿದೆ. ದಾದ್ರಿಯ ಅಖ್ಲಾಕ್ ನಿಂದ ಜುನೈದ್ ವರೆಗೆ ಗೋವಿನ ಹೆಸರಿನಲ್ಲಿ ಮುಸ್ಲಿಮರನ್ನು ಗುಂಪು ಹತ್ಯೆಯ ಮೂಲಕ ಸರಕಾರ ಪ್ರಯೋಜಿತ ಗೂಂಡಾಗಳು ಹತ್ಯೆಗೈಯ್ಯುತ್ತಿರುವುದಲ್ಲದೆ ಇದರ ವಿರುದ್ಧ ಮಾತನಾಡುವವರನ್ನು ದೇಶ ವಿರೋಧಿಗಳೆಂದು ಮುದ್ರೆ ಒತ್ತುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ದೇಶದಲ್ಲಿ ಕ್ರಾಂತಿಕಾರಿ ದಲಿತ ನಾಯಕರನ್ನು ಜೈಲಲ್ಲಿ ಕಳೆಯುವಂತೆ ಮಾಡುತ್ತಿದ್ದಾರೆ. ಹಿಂದುತ್ವ ಕಿರಾತಕರನ್ನು ಖುಷಿಪಡಿಸಲು ಮುಸ್ಲಿಂ ಸಂಘಟನೆಗಳನ್ನು ಗುರಿಪಡಿಸಲಾಗುತ್ತಿದೆ. ಅದು ಕೇವಲ ಪಾಪ್ಯುಲರ್ ಪ್ರಂಟ್ ಮಾತ್ರವಲ್ಲ. ಇದು ಪ್ರಥಮವಾಗಿದ್ದರೆ ಮುಂದಿನ ದಿನಗಳಲ್ಲಿ ದೇಶದಲ್ಲಿರುವ ಇತರ ಪ್ರಗತಿಪರ ಸಂಘಟನೆಗಳನ್ನು ಇದು ಗುರಿಪಡಿಸುತ್ತಾ, ಹಿಂದುತ್ವ ರಾಷ್ಟ್ರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸುವಂತಹ ಕೆಲಸವನ್ನು ಮಾಡುತ್ತದೆ.

ಸಂಘಪರಿವಾರದ ಎಂಜಲು ತಿನ್ನುವಂತಹ ಮಾಧ್ಯಮಗಳು ನಮ್ಮ ವಿರುದ್ಧ, ಮುಸಲ್ಮಾನರ ವಿರುದ್ಧ ಅತ್ಯಂತ ಕೆಟ್ಟ ರೀತಿಯಲ್ಲಿ ಬಿಂಬಿಸುತ್ತಿದೆ. ಈ ದೇಶದಲ್ಲಿರುವ ಹಿಂದುತ್ವ ಪ್ಯಾಷಿಸಂನ್ನು ಕಿತ್ತೊಗೆಯುವವರೆಗೆ ನಮಗೆ ವಿಶ್ರಮ ಎಂಬುವುದಿಲ್ಲ. ಪಾಪ್ಯುಲರ್ ಪ್ರಂಟಿನ ಮೂರು ಅಕ್ಷರವನ್ನು ನಿಷೇಧಿಸಬಹುದೇ ಹೊರತು, ಈ ದೇಶದ ಜನರ ಹೃದಯದಲ್ಲಿ ಮೂಡಿದ ಆದರ್ಶವನ್ನು ಅವರು ಮನಸ್ಸಿನಲ್ಲಿ ಬೇರೂರಿದ ಹಿಂದುತ್ವ ಪ್ಯಾಷಿಸಂ ವಿರೋಧಿ ಅಲೆಗಳನ್ನ ಅಡಗಿಸಲು ಸರಕಾರಕ್ಕೆ ಸಾಧ್ಯವಿಲ್ಲ ಎಂದರು. ನಮಗೆಲ್ಲರಿಗೂ ಹೇಳಲಿಕ್ಕಿರುವುದನ್ನು ಜೊತೆಯಾಗಿ ಹೇಳೋಣ. ಇದು ಕೇವಲ ಪಾಪ್ಯುಲರ್ ಫ್ರಂಟನ್ನು ಗುರಿಪಡಿಸುವುದಲ್ಲ. ಇದರ ಹಿಂದೆ ಒಂದೊಂದೇ ಅಜೆಂಡಾವು ಬಿಚ್ಚಿಕೊಳ್ಳಲು ಪ್ರಾರಂಭಿಸಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದರು. ಜಾತ್ಯಾತೀತ ಉಳಿವಿಗೆ ಎಲ್ಲರೂ ಪಣತೊಡಬೇಕು ಮತ್ತು ಎಲ್ಲರೂ ಜೊತೆಗೂಡಿ ಹೋರಾಟದಲ್ಲಿ ತೊಡಗಿಸಿಕೊಳ್ಳೋಣ ಮತ್ತು ಮುಂಬರುವ ಚುನಾವಣೆಯಲ್ಲಿ ಆರೆಸ್ಸೆಸ್ಸ್ ಮತ್ತು ಬಿಜೆಪಿಯನ್ನು ಮನೆಗೆ ಕಳುಹಿಸಿ ಕೋಡೋಣ ಎಂದು ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇರಳ ರಾಜ್ಯಾಧ್ಯಕ್ಷ ನಾಸಿರ್ ಎಳಮರಂ ಮಾತನಾಡಿ, ಪಾಪ್ಯುಲರ್ ಫ್ರಂಟ್ ದೇಶದಲ್ಲಿ ಜನಸ್ನೇಹಿಯಾಗಿದ್ದು, ಜನತೆಗೆ ಪ್ರಜ್ಞಾವಂತಿಕೆಯನ್ನು ನೀಡುತ್ತಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಪ್ರಜಾಪ್ರಭುತ್ವ ದೇಶದಲ್ಲಿ ಅಸಹಿಷ್ಣುತೆಯನ್ನು ಉಂಟುಮಾಡಲು ಪ್ಯಾಷಿಷ್ಟ್ ಶಕ್ತಿಗಳು ಪ್ರಾರಂಭಿಸುತ್ತದೆ. ಹಿಟ್ಲರ್ ನ ಚರಿತ್ರೆ ಇಲ್ಲಿನ ಹಿಟ್ಲರುಗಳಿಗೆ ಪಾಠವಾಗಲಿಕ್ಕಿದೆ, ಮೊಸಲಿನಿಮಾರ್ ನ ಚರಿತ್ರೆ ಇಂದಿನ ಮೊಸಲಿನಿಮಾರ್ ಗೆ ಪಾಠವಾಗಲಿಕ್ಕಿದೆ. ಪಾಪ್ಯುಲರ್ ಪ್ರಂಟ್ ಭಯೋತ್ಪಾದನೆಯನ್ನು ಸೃಷ್ಠಿಸುತ್ತದೆ ಎಂದು ಆರೋಪಿಸಲಾಗುತ್ತಿದೆ. ಈ ಆರೋಪವು ನಮ್ಮ ಮೇಲಿರುವುದು ಯಾಕೆಂದರೆ ಸಂವಿಧಾನವನ್ನು ಒಪ್ಪಿಕೊಳ್ಳದ ಮತ್ತು ದೇಶದ ಶತ್ರುವಾಗಿರುವ ಸಂಘಪರಿವಾರವನ್ನು ವಿರೋಧಿಸುವುದಕ್ಕಾಗಿದೆ. ಆ ಕಾರಣಕ್ಕಾಗಿ ನೀವು ನಮ್ಮನ್ನು ಯಾವುದೇ ರೀತಿಯಲ್ಲಿ ಚಿತ್ರಿಸಿ ಆರೋಪ ಹೊರಿಸಿದರೂ, ನಾವು ಇಟ್ಟಿರುವ ಹೆಜ್ಜೆಯನ್ನು ಒಂದು ಹೆಜ್ಜೆ ಕೂಡ ಹಿಂದಕ್ಕೆ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ತಯಾರಿಲ್ಲ ಎಂದರು.

ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ,ಪಾಪ್ಯುಲರ್ ಫ್ರಂಟ್ ವಿರುದ್ಧ ಅಪಪ್ರಚಾರ ನಡೆಸುವವರಿಗೆ ನಿಜವಾಗಿಯೂ ಸಂಘಟನೆ ಏನೆಂದು ಗೊತ್ತಿಲ್ಲ. ನಾನು ಬಹಳ ಹೆಮ್ಮೆಯಿಂದ ಇದರಲ್ಲಿ ಭಾಗವಹಿಸುತ್ತಿದ್ದೇನೆ. ನಾವು ಇದುವರೆಗೆ ಬೇಟೆಗಾರನ ಕಥೆಗಳನ್ನೇ ಕೇಳುತ್ತಿದ್ದೆವು. ಇವತ್ತು ಬೇಟೆಯ ಬಲಿಯ ಬಗ್ಗೆ ಕೇಳುತ್ತಿದ್ದೇವೆ. ಇಲ್ಲಿ ಸಾಗರದಂತೆ ಜನರು ಸೇರಿದ್ದಾರೆ. ಎಲ್ಲರೂ ಬಾಳಿ ಬದುಕಬೇಕಾದ ನಾಡಿದು. ‘ಸಾರೇ ಜಹಾನ್ ಸೇ ಅಚ್ಚಾ’ ಯಾರ ಸೊತ್ತು ಅಲ್ಲ. ಅದು ನಮ್ಮೆಲ್ಲರ ಸೊತ್ತು. ಗೌರಿ ಲಂಕೇಶ್ ಒಂದು ಶಕ್ತಿ. ಅವರನ್ನು ನೀವು ನೆನಪಿಸಿಕೊಂಡಿದ್ದೀರಾ. ಗೌರಿಯ ಹೆಸರನ್ನು ವೇದಿಕೆಗೆ ಇಟ್ಟಿದ್ದೀರಿ. ಅವರ ಕನಸುಗಳಿ ಈಡೇರುವ ಅನುಭವವಾಗುತ್ತಿದೆ.

ಒಬ್ಬ ಸಾದು ಸಂತ ಹೇಳುತ್ತಾರೆ, 1 ಹಿಂದೂವನ್ನು ಕೊಂದರೆ 100 ಮುಸಲ್ಮಾನರನ್ನು ಕೊಲ್ಲುತ್ತೇವೆ ಎಂದು.
ನಿಮ್ಮ ಬಾಯಿಗೆ ಬಂದ ಹಾಗೆ ಮಾತನಾಡಲು ಈ ದೇಶ ನಿಮ್ಮಪ್ಪನ ಸೊತ್ತಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ದೇಶದಲ್ಲಿರುವ ಮೌಢ್ಯತೆಯನ್ನು ದೂರ ಮಾಡಬೆಕಾಗಿದೆ. ನನಗೆ ಇಲ್ಲಿ ಬಂದಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ನಾವೆಲ್ಲರೂ ಪಾಪ್ಯುಲರ್ ಫ್ರಂಟ್ ನ್ನು ಜೋಪಾನವಾಗಿಸೋಣ ಮತ್ತು ನಾವೆಲ್ಲರೂ ಅವರೊಂದಿಗೆ ಸೇರಿಕೊಳ್ಳೋಣ ಮತ್ತು ದೇಶವನ್ನು ಉಳಿಸಿಕೊಳ್ಳಲು ಕಾರ್ಯೋನ್ಮುಖರಾಗೋಣ ಎಂದು ಹೇಳಿದರು.

ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಸಮಾವೇಶದ ಅಧ್ಯಕ್ಷತೆ ವಹಿಸಿ, ಅಧ್ಯಕ್ಷೀಯ ಮಾತುಗಳನ್ನಾಡಿದರು.

SDPI ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಉಮ್ರೈನ್ ಮೆಹಫೂಝ್ ರಹ್ಮಾನಿ, ರಾಜ್ಯ ಅಲ್ಪಸಂಖ್ಯಾತ ಅಯೋಗದ ಅಧ್ಯಕ್ಷ ನಸೀರ್ ಅಹ್ಮದ್, ಪ್ರಜಾ ಪರಿವರ್ತನಾ ಅಧ್ಯಕ್ಷ ಬಿ.ಗೋಪಾಲ್, ದಲಿತ ಸ್ವಾಭಿಮಾನಿ ವೇದಿಕೆ ಸಂಚಾಲಕ ಬಿ.ಆರ್ ಭಾಸ್ಕರ್ ಪ್ರಸಾದ್, ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲುಬ್ನಾ ಸಿರಾಜ್, ದಲಿತ ಸ್ವಾಭಿಮಾನ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮೋಹನ್ ರಾಜ್, ಬಿಎಸ್ಪಿ ಯ ಎಂ.ಮಹೇಶ್ ಸಂದರ್ಭೋಚಿತವಾಗಿ ಮಾತನಾಡಿದರು.

ವೇದಿಕೆಯಲ್ಲಿ ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳ ನಾಯಕರು ಹಾಗೂ ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಎ.ಕೆ. ಅಶ್ರಫ್ ಮತ್ತು ಫಾರೂಕ್ ರಹ್ಮಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group