ಮುಂದುವರೆದ ಕೇಸರಿ ಪಡೆಯ ಸೋಲಿನ ಸರಣಿ
ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಅಂಗವಾದ ಸಮಾಜವಾದಿ ಛಾತ್ರ ಸಭಾ 5 ರಲ್ಲಿ 4 ಸ್ಥಾನಗಳನ್ನು ಗೆಲ್ಲುವ ಮೂಲಕ ಜಯಭೇರಿ ಗಳಿಸಿದೆ. ಅಧ್ಯಕ್ಷ, ಉಪಾಧ್ಯಕ್ಷ, ಜೊತೆ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಸ್ಥಾನಗಳು ಸಮಾಜವಾದಿ ಛಾತ್ರ ಸಭಾದ ಪಾಲಾಗಿವೆ.
ಸಂಘಪರಿವಾರದ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಕೇವಲ ಕಾರ್ಯದರ್ಶಿ ಸ್ಥಾನವನ್ನು ಪಡೆದು ಖುಷಿಪಡಬೇಕಾಗಿದೆ.
ಸಮಾಜವಾದಿ ಛಾತ್ರ ಸಭಾದ ಅವನೀಶ್ ಕುಮಾರ್ ಯಾದವ್ ಅಧ್ಯಕ್ಷರಾಗಿಯೂ, ಭರತ್ ಸಿಂಗ್ ಜೊತೆ ಕಾರ್ಯದರ್ಶಿಯಾಗಿಯೂ, ಚಂದ್ರಶೇಖರ್ ಚೌಧರಿ ಉಪಾಧ್ಯಕ್ಷರಾಗಿಯೂ ಆಯ್ಕೆಯಾದರೆ, ಅಬಿವಿಪಿಯ ನಿರ್ಭಯ್ ಕುಮಾರ್ ದ್ವಿವೇದಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸಮಾಜವಾದಿ ರಾಜಕೀಯದ ಕೇಂದ್ರವಾಗಿದ್ದ ಅಲಹಾಬಾದ್ ವಿಶ್ವವಿದ್ಯಾಲಯವು 2015ರಿಂದ ಬಲಪಂಥೀಯರ ತೆಕ್ಕೆಗೆ ಜಾರಿತ್ತು.
2015ರಲ್ಲಿ ಎಬಿವಿಪಿಯು ಐದರಲ್ಲಿ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದ್ದರೆ, 2016ರಲ್ಲಿ ಎರಡು ಪ್ರಧಾನ ಸ್ಥಾನಗಳನ್ನು ಮತ್ತೆ ತನ್ನದಾಗಿಸಿಕೊಂಡಿತ್ತು.
ಇದೀಗ ದೇಶದಾಧ್ಯಂತ ವಿಶ್ವವಿದ್ಯಾಲಯಗಳಲ್ಲಿ ಸಂಘಪರಿವಾರ ಬೆಂಬಲಿತ ಎಬಿವಿಪಿಯು ಸೋಲನುಭವಿಸುತ್ತಿರುವುದು, ರಾಷ್ಟ್ರೀಯ ರಾಜಕೀಯದಲ್ಲಿ ಬಿಜೆಪಿಯ ಜನವಿರೋಧಿ ನೀತಿ ಹಾಗೂ ಎಬಿವಿಪಿಯ ಹಿಂಸಾ ರಾಜಕೀಯದ ಪ್ರತಿಫಲವಾಗಿದೆ ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
