‘ಜೈ ಹನುಮಾನ್’ , ‘ ಜೈ ಗೋ ಮಾತಾ’ ಉಚ್ಚರಿಸದಿದ್ದಲ್ಲಿ ಬಾಯಿಗೆ ಹಂದಿ ಮಾಂಸ ತುರುಕಿಸುವ ಬೆದರಿಕೆ!!
ಹಲ್ಲೆಗೀಡಾದವರ ಮೇಲೆಯೇ ಪ್ರಕರಣ ದಾಖಲಿಸಿದ್ದ ಪೊಲೀಸರು!
ಫರೀದಾಬಾದ್: ಅಟೋ ರಿಕ್ಷಾವೊಂದರಲ್ಲಿ ಗೋಮಾಂಸ ಸಾಗಾಣಿಕೆಯ ಶಂಕೆಯಲ್ಲಿ ಫರೀದಾಬಾದ್ ಸಮೀಪ ವಿಕಲಾಂಗರಾದ ಅಟೋ ಚಾಲಕ ಸೇರಿದಂತೆ ಐವರಿಗೆ ‘ಗೋರಕ್ಷಕರು’ ಥಳಿಸಿದ ಘಟನೆ ವರದಿಯಾಗಿದೆ.
ರಿಕ್ಷಾ ಚಾಲಕರಾದ ಆಝಾದ್ ಶುಕ್ರವಾರ ಬೆಳಿಗ್ಗೆ ಎಮ್ಮೆಯ ಮಾಂಸವನ್ನು ಅಂಗಡಿಯೊಂದಕ್ಕೆ ಸಾಗಿಸುತ್ತಿದ್ದರು. ತನ್ನ ಜೊತೆ ಮಾಂಸ ವ್ಯಾಪಾರಿಯ ಬಳಿ ಕೆಲಸ ಮಾಡುತ್ತಿರುವ ಸೋನು ಎಂಬವನನ್ನೂ ಸೇರಿಸಿಕೊಂಡಿದ್ದನು.
ಕಾರಿನಲ್ಲಿ ಬಂದ ಆರು ಜನರ ತಂಡವು ಅವರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿತು. ಅದು ದನದ ಮಾಂಸ ಆಗಿರದೆ ಎಮ್ಮೆಯ ಮಾಂಸ ಆಗಿದೆ ಹಾಗೂ ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹೋಗಿ ಪರಿಶೀಲಿಸಬಹುದೆಂದು ಹೇಳಿದರೂ ಕೇಳದ ಅಕ್ರಮಿಗಳ ತಂಡ ಅವರನ್ನು ಹತ್ತಿರದ ಬಾಜ್ರಿ ಎಂಬ ಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ಸುಮಾರು 40 ಜನರ ತಂಡವು ಇವರ ಮೇಲೆ ಹಲ್ಲೆ ನಡೆಸಲಾರಂಭಿಸಿತು. ಈ ಮಧ್ಯೆ ಆಝಾದ್ ಪರಿಸ್ಥಿಯನ್ನು ತಿಳಿಸಲು ತನ್ನ ಮನೆಯವರಿಗೆ ಕರೆ ಮಾಡಿದ್ದನು, ಅದರಂತೆ ಸ್ಥಳಕ್ಕಾಗಮಿಸಿದ ಆತನ ಸಂಬಂಧಿಕರ ಮೇಲೆಯೂ ಸ್ವಯಂಘೋಷಿತ ಗೋರಕ್ಷಕರು ಹಲ್ಲೆ ನಡೆಸಿದರು.
ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ ಅಕ್ರಮಿಗಳು ‘ಜೈ ಹನುಮಾನ್’ ಹಾಗೂ ‘ಜೈ ಗೋ ಮಾತಾ’ ಎಂದು ಉಚ್ಚರಿಸಲು ಬಲವಂತ ಮಾಡಿದರು. ಇದನ್ನು ನಿರಾಕರಿಸಿದ ಆಝಾದ್ ನಿಗೆ ಬಲವಂತವಾಗಿ ಹಂದಿ ಮಾಂಸ ತಿನ್ನಿಸುವ ಬೆದರಿಕೆಯನ್ನೊಡ್ಡಿದರು.
ವಿಪರ್ಯಾಸವೆಂದರೆ ಹರ್ಯಾಣದ ಪೊಲೀಸರು ಮೊದಲು ಹಲ್ಲೆಗೀಡಾದವರ ಮೇಲೆ ಪ್ರಕರಣ ದಾಖಲಿಸಿದ್ದರು. ನಂತರ ಅದು ದನದ ಮಾಂಸವಲ್ಲ ಎಂದ ವ್ಯಕ್ತವಾದ ನಂತರ ಪ್ರಕರಣ ಹಿಂಪಡೆದರು.
ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ತಡೆಗಟ್ಟುವಂತೆ ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಆದೇಶಿಸಿದ ಕೆಲವೇ ದಿನಗಳಲ್ಲಿ ನಡೆದ ಈ ಘಟನೆಯು, ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸೆ ಸಲ್ಲದು ಎಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್ ನ ಸರ್ವೋಚ್ಚ ನಾಯಕ ಮೋಹನ್ ಭಾಗ್ವತ್ ಮಾತಿಗೂ ಈ ಸ್ವಯಂಘೋಷಿತ ಗೋರಕ್ಷಕರು ಬೆಲೆ ನೀಡುವುದಿಲ್ಲ ಹಾಗೂ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯು ಎಲ್ಲಾ ನಿಯಂತ್ರಣಗಳನ್ನು ಮೀರಿದೆ ಎನ್ನುವುದಕ್ಕೆ ನಿದರ್ಶನವಾಗಿದೆ.
