ವರದಿಗಾರ-ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಕಾಶ್ಮೀರವನ್ನು ಮತ್ತೆ ಭೂಲೋಕದ ಸ್ವರ್ಗವನ್ನಾಗಿಸುವ ವಿಷಯಕ್ಕೆ ಬದ್ಧರಾಗಿರುವುದಾಗಿ ಹೇಳಿದರು.
‘ಕಾಶ್ಮೀರ ಸಮಸ್ಯೆಯನ್ನು ಬಂದೂಕಿನ ಮೂಲಕ ಪರಿಹರಿಸಲು ಸಾಧ್ಯವಿಲ್ಲ. ಕಾಶ್ಮೀರಿ ಜನತೆಯನ್ನು ಅಪ್ಪಿಕೊಳ್ಳುವ ಮೂಲಕ ಅದನ್ನು ಸಾಧ್ಯವಾಗಿಸಬಹುದು. ಜಮ್ಮು ಮತ್ತು ಕಾಶ್ಮೀರದ ಜನತೆಯ ಕಷ್ಟ ನಿವಾರಣೆಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡೋಣ. ಅಲ್ಲಿನ ಯುವಕರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ಪ್ರಧಾನಿ ಹೇಳಿದರು. ಆದರೆ, ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಅವರು ಸ್ಪಷ್ಟವಾಗಿ ಹೇಳಿದರು.
ಪ್ರಧಾನಿ ತಮ್ಮ 56 ನಿಮಿಷಗಳ ಭಾಷಣದಲ್ಲಿ ನವ ಭಾರತ ನಿರ್ಮಾಣಕ್ಕೆ ಕರೆ ನೀಡಿದ್ದಲ್ಲದೆ, ಕಪ್ಪುಹಣದ ವಿರುದ್ಧದ ಹೋರಾಟ, ಭ್ರಷ್ಟಾಚಾರ ನಿಗ್ರಹಕ್ಕೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆಯೂ ಉಲ್ಲೇಖಿಸಿದರು.
ಭಾರತ ಮುಂದಿನ 5 ವರ್ಷಗಳ ಒಳಗೆ ಭ್ರಷ್ಟಾಚಾರ, ಉಗ್ರವಾದ, ವರ್ಣಭೇದ ನೀತಿಯಿಂದ ದೇಶ ಮುಕ್ತವಾಗಬೇಕು. ಮಹಾತ್ಮ ಗಾಂಧಿ ಅವರ ಸ್ವರಾಜ್ಯದ ಕನಸು ನನಸಾಗಬೇಕು. ಇದಕ್ಕೆ ಭಾರತೀಯರೆಲ್ಲರೂ ಒಂದಾಗಿ ಕೆಲಸ ಮಾಡಬೇಕೆಂದು ಪ್ರಧಾನಿ ಕರೆ ನೀಡಿದ್ದಾರೆ.
