ವರದಿಗಾರ: ಮನೆಯಲ್ಲಿ ಗೋಮಾಂಸವಿದೆ ಎಂದು ಆರೋಪಿಸಿ 2015 ಸೆಪ್ಟೆಂಬರ್ ನಲ್ಲಿ ದಾದ್ರಿಯ ಬಿಶಾರಾ ಗ್ರಾಮದಲ್ಲಿ 55 ವರ್ಷ ಪ್ರಾಯದ ಮುಹಮ್ಮದ್ ಅಖ್ಲಾಕ್ ರನ್ನು ಥಳಿಸಿ ಹತ್ಯೆಗೈದ 15 ಮಂದಿ ಆರೋಪಿಗಳಿಗೆ NTPC (ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್) ಲಿಮಿಟೆಡ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸದ ಅವಕಾಶವನ್ನು ನೀಡಲಾಗಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 9ರಂದು NTPC ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ತೇಜ್ಪಾಲ್ ನಗರ್ ಈ ನೇಮಕಾತಿ ಸುಗಮಗೊಳಿಸಿದರು ಎಂದು ಮೂಲಗಳು ವರದಿ ಮಾಡಿವೆ.
ಆರೋಪಿಗಳು ಅಲಹಾಬಾದ್ ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಿಂದ ಜಾಮೀನು ಪಡೆದುಕೊಂಡಿದ್ದಾರೆ.
ತನ್ನ ಯೋಜನೆಯಿಂದ ಸಂತ್ರಸ್ತರಾದವರಿಗೆ ಸೌಲಭ್ಯ ನೀಡುವ ಮಹರತ್ನ ಕಂಪೆನಿಯ ಕಾರ್ಯಕ್ರಮದ ಒಂದು ಭಾಗವಾಗಿ ಆರೋಪಿಗಳಿಗಳಿಗೆ ಉದ್ಯೋಗ ನೀಡಲಾಗಿದೆ. NTPC ಸಮೀಪದಲ್ಲಿ ಬಿಶಾರಾ ಗ್ರಾಮವಿದೆ. NTPC ತನ್ನ ಯೋಜನೆ ಅನುಷ್ಠಾನಿಸಲು ಹಲವು ಗ್ರಾಮ ನಿವಾಸಿಗಳ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ನಾವು ಉದ್ಯೋಗ ರಹಿತ ಯುವಕರಿಗೆ ಉದ್ಯೋಗಾವಕಾಶವನ್ನು ನೀಡಿದ್ದೇವೆಯೇ ಹೊರತು ಇದಕ್ಕೂ ಅಖ್ಲಾಕ್ ಹತ್ಯೆಗೂ ಸಂಬಂಧವಿಲ್ಲ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
